Advertisement
ಮಾನವನ ದೇಹದಲ್ಲಿ ಹಲವಾರು ಖಾಯಿಲೆಗಳು, ಸಮಸ್ಯೆಗಳು ಕಾಡುವಂತೆ ಭೂಮಿಯ ಮಣ್ಣಿನಲ್ಲೂ ಹಲವಾರು ಸಮಸ್ಯೆಗಳಿರುತ್ತದೆ. ಮಾನವ ಹೇಗೆ ಕಾಲ-ಕಾಲಕ್ಕೆ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಅದಕ್ಕೆ ತಕ್ಕಂತೆ ಔಷಧೋಪಚಾರದ ಮೂಲಕ ಸ್ವಸ್ಥನಾಗುತ್ತಾನೆಯೋ, ಅದೇ ರೀತಿ ರೈತನಾದವನು ನಿಗದಿತ ಸಮಯಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿ ಸಮಸ್ಯೆಯನ್ನು ಗುರುತಿಸಿ ಅಗತ್ಯ ಪೋಷಕಾಂಶಗಳನ್ನು ನೀಡಿದಲ್ಲಿ ಉತ್ತಮ ಇಳುವರಿಗೆ ಪೂರಕವಾಗುತ್ತದೆ. ಮುಂಗಾರು ಬೆಳೆಯ ಸಂದರ್ಭ ಭೂಮಿಗೆ ಅಧಿಕವಾದ ಪೋಷಕಾಂಶಗಳು ಅಗತ್ಯವಿರುವುದರಿಂದ ಮಣ್ಣಿನಲ್ಲಿರುವ ಸಮಸ್ಯೆಗಳನ್ನು ಗುರುತಿಸಿ ಆರೈಕೆ ಮಾಡುವುದು ಅತೀ ಆವಶ್ಯಕ.
ಕೆಲವು ಮಂದಿ ರೈತರು ಭೂಮಿಗೆ ರಾಸಾಯನಿಕ ಅಥವಾ ಸಾವಯವ ಸಾರವನ್ನು ಹೇರಳ ಪ್ರಮಾಣದಲ್ಲಿ ಬಳಕೆ ಮಾಡಿದರೂ ಉತ್ತಮ ಫಸಲು ಸಿಗಲಿಲ್ಲ ಎಂದು ಕೊರಗುತ್ತಾರೆ. ಆದರೆ ಯಾವುದೇ ಭೂಮಿಯಲ್ಲಿ ಉತ್ತಮ ಇಳುವರಿ ಬರಬೇಕಾದರೆ ಮಣ್ಣಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಕಾಲ ಕಾಲಕ್ಕೆ ಅಗತ್ಯನುಸಾರ ನೀಡಬೇಕಾಗುತ್ತದೆ. ಒಟ್ಟಾರೆಯಾಗಿ ಹೇರಳ ಪ್ರಮಾಣದ ಗೊಬ್ಬರ, ರಾಸಾಯನಿಕ ಬಳಕೆ ಮಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ. ಮಿತಿಮೀರಿ ರಾಸಾಯನಿಕಗಳ ಬಳಕೆಯಿಂದಲೂ ಮಣ್ಣಿನ ಆರೋಗ್ಯ ಹದಗೆಟ್ಟು ಕಾಲಕ್ರಮೇಣ ಇಳುವರಿ ಕುಂಠಿತವಾಗುತ್ತದೆ. ಭತ್ತದ ಬೆಳೆಗೆ ಕೊಟ್ಟಿಗೆ ಗೊಬ್ಬರ ವರದಾನ
ಭತ್ತದ ಬಿತ್ತನೆಯ 10-15 ದಿವಸಗಳ ಮುಂಚೆ ಅಗತ್ಯ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ ಭೂಮಿಗೆ ಸೇರಿಸುವುದರಿಂದ ನೀರು ಹಿಡಿದಿಟ್ಟುಕೊಳ್ಳುವಿಕೆ, ಪೋಷಕಾಂಶಗಳು ನಷ್ಟವಾಗದ ಹಾಗೆ ತಡೆಗಟ್ಟಲು ಹಾಗೂ ಮಣ್ಣಿನ ಕಣಗಳ ರಚನೆಗೆ ಸಹಕಾರಿಯಾಗಿರುತ್ತದೆ ಹಾಗೂ ಉತ್ತಮ ಫಸಲಿಗೂ ಪೂರಕ. ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ರಾಸಾಯನಿಕ ಗೊಬ್ಬರದ ಬಳಕೆಯನ್ನು ಕಡಿತಗೊಳಿಸಬಹುದು.
Related Articles
ಬಿತ್ತನೆ ವಿಧಾನ
ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆಯಿಂದ ಕೃಷಿಭೂಮಿ ಹಡೀಲು ಹಾಕಲಾಗುತ್ತಿದೆ. ಸಾಂಪ್ರಾದಾಯಿಕ ವಿಧಾನದಲ್ಲಿ ಭತ್ತ ಬೆಳೆಯಲು ಹೆಚ್ಚು ಕಾರ್ಮಿಕರ ಅಗತ್ಯ ಮತ್ತು ಶ್ರಮದಾಯಕವಾಗಿರುವುದು ಇದಕ್ಕೆ ಕಾರಣ. ಹೀಗಾಗಿ ನೇರ ಬಿತ್ತನೆ ಇದಕ್ಕೆ ಸುಲಭ ವಿಧಾನವಾಗಿದೆ. ನೇರ ಬಿತ್ತನೆ ವಿಧಾನದಲ್ಲಿ ಕೂರಿಗೆ, ಸಾಲು ಬೀಜ ಹಾಗೂ ಬಿತ್ತನೆ ಪ್ರಮುಖ ವಿಧಾನಗಳಾಗಿದೆ.
Advertisement
ಮಣ್ಣಿನ ಪರೀಕ್ಷೆ ಹೇಗೆ ?ಕೃಷಿ ವಿಜ್ಞಾನಿಗಳನ್ನು ನೇರವಾಗಿ ಜಮೀನಿಗೆ ಕರೆತಂದು ಮಣ್ಣಿನ ಪರೀಕ್ಷೆ ನಡೆಸಬಹುದು ಅಥವಾ ಭೂಮಿಯ ಮಣ್ಣನ್ನು ಶೇಖರಿಸಿ ಸಮೀಪದ ಕೃಷಿ ಕೇಂದ್ರಗಳಿಗೆ ನೀಡಿದಲ್ಲಿ 10-15 ದಿನಗಳಲ್ಲಿ ಪರೀಕ್ಷೆ ನಡೆಸಿ ಮಣ್ಣಿನಲ್ಲಿನ ಸಮಸ್ಯೆ ಹಾಗೂ ಯಾವ ಪೋಷಕಾಂಶಗಳನ್ನು ಬಳಕೆ ಮಾಡಬೇಕು ಎನ್ನುವ ವಿವರ ರೈತರ ಕೈ ಸೇರುತ್ತದೆ. 2-3 ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ನಡೆಸಿ
ಮಣ್ಣಿನಲ್ಲಿನ ಗುಣಾಂಶಗಳು ಆಗಾಗ ಬದಲಾಗುತ್ತಿರುತ್ತದೆ. ಆದ್ದರಿಂದ ಕನಿಷ್ಠ ಎರಡು-ಮೂರು ವರ್ಷಕ್ಕೊಮ್ಮೆ ಪರೀಕ್ಷೆ ಮಾಡಿಸಿ ಸಮಸ್ಯೆ ಗುರುತಿಸಿ ಅಗತ್ಯ ಪೋಷಕಾಂಶ ನೀಡಿದರೆ ಉತ್ತಮ ಫಸಲು ಲಭ್ಯವಾಗುತ್ತದೆ. ಈ ಕುರಿತು ಎಲ್ಲ ರೈತರು ಗಮನಹರಿಸಬೇಕು ಹಾಗೂ ಭತ್ತದ ಬೆಳೆಗೆ ಪೂರಕವಾಗುವ ವಿಧಾನಗಳ ಕುರಿತು ತಿಳಿದುಕೊಳ್ಳಬೇಕು.
-ಕೆಂಪೇಗೌಡ, ಜಂಟಿ ಕೃಷಿ ನಿರ್ದೇಶಕರು, ಉಡುಪಿ ಜಿಲ್ಲೆ