Advertisement

ಗುಣಮಟ್ಟದ ಕೃಷಿಗೆ ಮಣ್ಣಿನ ಪರೀಕ್ಷೆ ಅಗತ್ಯ

03:13 PM Dec 12, 2019 | Suhan S |

ಶಿಗ್ಗಾವಿ: ಕಾಲ ಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿ, ಕೊರತೆಯಾದ ಪೋಷಕಾಂಶವನ್ನು ಸರಿದೂಗಿಸುವ ಮೂಲಕ ಕೃಷಿ ಜಮೀನನ್ನು ಫಲವತ್ತಗೊಳಿಸಬೇಕು ಎಂದು ಧುಂಡಶಿ ರೈತ ಸಂಪರ್ಕ ಕೇಂದ್ರದ ಕೃಷಿ ಅ ಧಿಕಾರಿ ಎಸ್‌.ಆರ್‌. ದಾವಣಗೇರಿ ಹೇಳಿದರು.

Advertisement

ತಾಲೂಕಿನ ಕುನ್ನೂರ ಗ್ರಾಮದ ಗ್ರಾಮದೇವಿ ದೇವಸ್ಥಾನದದಲ್ಲಿ ರೈತ ಸಂಪರ್ಕ ಕೇಂದ್ರ ಧುಂಡಶಿ ಹೋಬಳಿಮಟ್ಟದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಣ್ಣಿನ ಆರೋಗ್ಯ ಕುರಿತು ಮಾತನಾಡಿದರು. ನಮ್ಮ ಪೂರ್ವಜರು ಸಾಂಪ್ರದಾಯಿಕ ಕೃಷಿ ಅನುಸರಿಸುತ್ತಿದ್ದರು. ಜತೆಗೆ ಸಾಕಷ್ಟು ಹಸುಗಳನ್ನು ಪಾಲನೆ ಪೋಷಣೆ ಮಾಡುವ ಮೂಲಕ ಅಧಿಕ ಪ್ರಮಾಣದಲ್ಲಿ ಸಾವಯವ ಗೊಬ್ಬರ ಉತ್ಪಾದನೆಗೆ ಆದ್ಯತೆ ನೀಡಿ ವ್ಯವಸಾಯಕ್ಕೆ ಬಳಸುತ್ತಿದ್ದರು. ಹೀಗಾಗಿ ಪ್ರತ್ಯೇಕ ಗೊಬ್ಬರಕ್ಕಾಗಿ ಹಣಕಾಸು ವಿನಿಯೋಗಿಸುವ ಅವಶ್ಯಕತೆಯೂ ಇರಲಿಲ್ಲ. ಹಸಿರು ಗೊಬ್ಬರ ಬಳಕೆ ಅವ್ಯಾಹತವಾಗಿತ್ತು. ಕೃಷಿ ಕ್ಷೇತ್ರ ಲಾಭದಾಯಿಕವಾಗಿ ಬೆಳೆಯಲು ಸಹಕಾರಿಯಾಗಿತ್ತು. ಕಾರಣ ಮಣ್ಣಿನ ಗುಣಮಟ್ಟ ಪ್ರತಿವರ್ಷ ಹೆಚ್ಚಳವಾಗುತ್ತಿತ್ತು ಎಂದರು.

ಪಿ.ಡಿ.ಕಾಳಿ ಮಾತನಾಡಿ, ಆಹಾರ ಉತ್ಪಾದನೆ ಕೊರತೆಯಿಂದ ರಸಾಯನಿಕ ಗೊಬ್ಬರ ಬಳಕೆ ಮಾಡುವಂತಾಯಿತು. ಇದರಿಂದಾಗಿ ಭೂಮಿಯ ಫಲವತ್ತತೆ ಕ್ಷೀಣಿಸುತ್ತ ಭೂಮಿ ಬರಡಾಗುತ್ತ ಸಾಗಿತ್ತು. ಪ್ರಸ್ತುತ ಪ್ರತಿಯೊಬ್ಬರೂ ಮಣ್ಣು ಪರೀಕ್ಷೆ ಮಾಡುವುದರ ಜತೆಗೆ ಸಾವಯವ ಕೃಷಿಗೆ ರೈತರು ಮುಂದಾಗಬೇಕಿದೆ ಎಂದು ಹೇಳಿದರು.

ಗ್ರಾಪಂ ಮಾಜಿ ಸದಸ್ಯ ವಿ.ವೈ. ಶೆಟ್ಟೆಪ್ಪನವರ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿ ಮಾಡಿದ್ದು, ಕೃಷಿ ಕಾರ್ಯಕ್ಕೆ ಅನುಕೂಲಕರವಾಗಿವೆ. ಇಂದು ನಾವೂ ಕೃಷಿ ಕಡೆಗೆ ಹೆಚ್ಚು ಗಮನ ನೀಡಲು ಆಸಕ್ತಿ ವಹಿಸುತ್ತಿಲ್ಲ. ಸಾವಯವ ಕೃಷಿ ಮಾಡುವುದರ ಜತೆಗೆ ಭೂಮಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಫಲವತ್ತತೆ ಕಾಪಾಡಿಕೊಳ್ಳೋಣ ಎಂದರು.

ಪತ್ರಕರ್ತ ಬಿ.ಎಸ್‌.ಹಿರೇಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಬಸನಗೌಡ ಬ್ಯಾಹಟ್ಟಿ, ಬಾಬೂಲಾಲ ತಡಸ, ಪ್ರಗತಿ ಪರ ರೈತ ವೀರಪ್ಪ ಸೊಗಲಿ, ಯಮನಪ್ಪ ನವಲೂರ, ಶಾಂತಪ್ಪ ಸೋಗಲಿ, ರೈಮನ್‌ಸಾಬ ಮುಲ್ಲಾ, ಮಹಾದೇವಪ್ಪ ಮಾಳ್ಳೋಜಿ, ತಿಪ್ಪಣ್ಣಾ ಸಾವಂತಣ್ಣವರ ಸೇರಿದಂತೆ ರೈತರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next