Advertisement
ರಾಜ್ಯ ಸರಕಾರ 2017-18ರ ತನ್ನ ಬಜೆಟ್‌ನಲ್ಲಿ ಕರಾವಳಿಯ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ಹರಿವನ್ನು ಸಂರಕ್ಷಿಸಲು ಪಶ್ಚಿಮ ವಾಹಿನಿ ಯೋಜನೆಯನ್ನು ಘೋಷಿಸಿದ್ದು ಈ ಪೈಕಿ ಕಾರ್ಕಳ ತಾಲೂಕಿಗೆ ಮೂರು ಅಣೆಕಟ್ಟು ಯೋಜನೆ ಮಂಜೂರಾಗಿತ್ತು ಅವುಗಳ ಪೈಕಿ ಬೋಳ ಪಾಲಿಂಗೇರಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಕಿಂಡಿ ಅಣೆಕಟ್ಟು ಕಾಮಗಾರಿ ಭಾರೀ ವೇಗವಾಗಿ ನಡೆಯುತ್ತಿತ್ತು. ಉಡುಪಿ ಜಿಲ್ಲಾದ್ಯಂತ ಮರಳು ಸಿಗದ ಹಿನ್ನೆಲೆಯಲ್ಲಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ ಗುತ್ತಿಗೆದಾರ ಎಂ. ಸ್ಯಾಂಡ್ (ಜಲ್ಲಿ ಹುಡಿ)ನ್ನು ಬಳಕೆ ಮಾಡಬೇಕಿತ್ತಾದರೂ ಇಲ್ಲಿ ಎಂ. ಸ್ಯಾಂಡ್ ಜತೆಯಲ್ಲಿ ಹೇರಳ ಪ್ರಮಾಣದಲ್ಲಿ ನದಿಯಲ್ಲಿದ್ದ ಮರಳನ್ನೇ ಕಾನೂನು ಬಾಹಿರವಾಗಿ ಬಳಸಿಕೊಳ್ಳಲಾಗುತ್ತಿದೆ. 2.75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಕಿಂಡಿ ಅಣೆಕಟ್ಟಿನ ಕಾಮಗಾರಿಗೆ ಎಂ.ಸ್ಯಾಂಡ್ ಬಳಕೆ ಮಾಡಿ ಬಿಲ್ಲು ನೀಡಬೇಕಿದ್ದ ಗುತ್ತಿಗೆದಾರ ಇಲ್ಲಿ ಪುಕ್ಕಟೆ ಸಿಕ್ಕ ಮರಳನ್ನೇ ಉಪಯೋಗಿಸಿದ್ದಾರೆ ಎನ್ನುವುದು ಇಲ್ಲಿನ ಜನರ ಆರೋಪ.
ಜಿಲ್ಲೆಯಾದ್ಯಂತ ಮರಳು ಗಣಿಗಾರಿಕೆಗೆ ನಿರ್ಬಂಧವಿದ್ದರೂ ಇಲ್ಲಿ ಮಾತ್ರ ಅಣೆಕಟ್ಟು ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರ ಹೇರಳ ಪ್ರಮಾಣ ಮರಳು ಸಂಗ್ರಹಿಸಿ ಅಣೆಕಟ್ಟೆಯ ಕಾಮಗಾರಿಗೆ ಬಳಕೆ ಮಾಡುತ್ತಿದ್ದಾರೆ. ಸ್ಥಳೀಯರಿಗೆ ಒಂದು ಬುಟ್ಟಿ ಮರಳು ತೆಗೆಯುವುದಕ್ಕೂ ಕಾನೂನು ತೊಡಕಾದರೆ ಗುತ್ತಿಗೆದಾರ ಮಾತ್ರ ನದಿಯ ಮರಳನ್ನು ಹೇಗೆ ಬಳಸಿಕೊಂಡರು ಎನ್ನುವ ಪ್ರಶ್ನೆಗಳು ಗ್ರಾಮಸ್ಥರದ್ದು. ನಮಗಿರುವ ಮರಳು ನೀತಿ ಇವರಿಗೆ ಇಲ್ಲವಾಯಿತೇ ಎನ್ನುವುದು ಈ ಭಾಗದ ಜನರ ಸವಾಲು. ಶಾಂಭವಿ ನದಿಯ ಮರಳು ಮಣ್ಣು ಮಿಶ್ರಿತ ಮರಳಾಗಿದ್ದು ಕಾಮ ಗಾರಿಗೆ ಗುಣಮಟ್ಟದ ಮರಳು ಅಲ್ಲ. ಆದರೂ ಗುತ್ತಿಗೆದಾರ ಕಿಂಡಿ ಅಣೆಕಟ್ಟಿನ ಕಾಮಗಾರಿಗೆ ಅದೇ ಮರಳನ್ನು ಬಳಕೆ ಮಾಡಿಕೊಂಡು ಕಳಪೆ ಕಾಮಗಾರಿ ನಡೆಸುತ್ತಿದ್ದಾರೆ, ಒಂದು ಬುಟ್ಟಿ ನದಿಯ ಮರಳು ತೆಗೆದರೂ ಜಿಲ್ಲಾ ಮಟ್ಟದಿಂದ ಪಂಚಾಯತ್‌ವರೆಗೆ ಕಾನೂನು ಮಾತನಾಡುವ ಅ ಧಿಕಾರಿಗಳು ಇಲ್ಲಿ ಮಾತ್ರ ಏಕೆ ಮೌನವಾಗಿದ್ದಾರೆ ಎಂಬುದೂ ಗ್ರಾಮಸ್ಥರ ಪ್ರಶ್ನೆ. ಎಂ. ಸ್ಯಾಂಡ್ ಜತೆಯಲ್ಲಿ ಮಣ್ಣು ಮಿಶ್ರಿತ ಮರಳು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಕಾಮಗಾರಿಯ ಗುಣಮಟ್ಟದ ಬಗ್ಗೆಯೂ ತನಿಖೆಯಾಗಬೇಕಾಗಿದೆ ಎನ್ನುತ್ತಾರೆ ಬೋಳದ ಜನ. ಸ್ಥಳೀಯರೂ ಶಾಮೀಲು…?
ಈ ಕಾಮಗಾರಿ ನಡೆಸುವ ಗುತ್ತಿಗೆದಾರರ ಮರಳು ದಂಧೆಯ ಜತೆ ಸ್ಥಳೀಯ ಪ್ರಮುಖರೂ ಶಾಮೀಲಾಗಿರುವ ಬಗ್ಗೆ ಊಹಾಪೋಹಗಳು ಎದ್ದಿವೆ. ಗುತ್ತಿಗೆದಾರರ ಮೂಲಕ ಮರಳು ದಂಧೆ ನಡೆಸುವ ಈ ಮಂದಿ ಅಣೆಕಟ್ಟು ಕಾಮಗಾರಿಗೆ ಶಾಂಭವಿ ನದಿಯ ಮರಳು ಬಳಸಿ ಯತೇತ್ಛ ಬಿಲ್ಲು ಮಾಡಿಸಿ ಸರಕಾರದ ಖಜಾನೆ ಲೂಟಿ ಮಾಡುವ ಸಂಚೊಂದನ್ನು ರೂಪಿಸಿದ್ದಾರೆ ಎಂದು ಬೋಳದ ಸಾಮಾಜಿಕ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.
Related Articles
Advertisement
ಕಾಮಗಾರಿ ನಿಧಾನ, ಮಳೆಗಾಲಕ್ಕೂ ಮೊದಲು ಅನುಮಾನಮರಳು ದಂಧೆಯನ್ನು ನಿರಂತರವಾಗಿಸಲು ಈ ಕಾಮಗಾರಿಯಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಈ ಹಿಂದೆ ಇದ್ದ ಸಣ್ಣ ಕಿಂಡಿ ಅಣೆಕಟ್ಟೂ ಸೇತುವೆಯ ಕಲ್ಲು ಬ್ಲಾಸ್ಟಿಂಗ್ ವೇಳೆಯಲ್ಲಿ ಬಿರುಕು ಬಿಟ್ಟಿದ್ದು ಸ್ವಲ್ಪ ಭಾಗ ಮುರಿದು ಹೋಗಿವೆ. ಕಳೆದ ಮಾರ್ಚ್ ತಿಂಗಳಲ್ಲಿ ಕಿಂಡಿ ಅಣೆಕಟ್ಟಿನ ಕಾಮಗಾರಿ ಆರಂಭಗೊಂಡಿದ್ದು ಮಳೆಗಾಲಕ್ಕಿಂತ ಮೊದಲು ನಿರ್ಮಾಣವಾಗುವ ಲಕ್ಷಣಗಳಿತ್ತು. ಆದರೆ ಮರಳು ಸಮಸ್ಯೆ ತೋರಿಸಿ ಇದೀಗ ಕಾಮಗಾರಿ ನಿಧಾನಗತಿಯಲ್ಲಿ ನಡೆಸಲಾಗುತ್ತಿದೆ. ಈ ಬಾರಿಯ ಮಳೆಗಾಲಕ್ಕೂ ಮೊದಲು ನಿರ್ಮಾಣವಾಗದಿದ್ದಲ್ಲಿ ನದಿಯ ಇನ್ನೊಂದು ಬದಿಯಲ್ಲಿ ವಾಸಿಸುವ ಸುಮಾರು 40ಕ್ಕೂ ಹೆಚ್ಚಿನ ಕುಟುಂಬಗಳು 200 ಮೀ. ದೂರ ಕ್ರಮಿಸಲು ಸುಮಾರು 4ರಿಂದ 5 ಕಿ.ಮೀ. ಸುತ್ತಿ ಬಳಸಿಕೊಂಡು ಸಾಗಬೇಕಾದ ಅನಿವಾರ್ಯತೆ ಇಲ್ಲಿ ಎದುರಾಗಲಿದೆ. ಬೋಳ ದೇವಾಲಯದ ಮುಂಭಾಗದಲ್ಲಿರುವ ಸೇತುವೆಯೂ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಜನ ನಡೆದಾಡಲು ಭಯ ಪಡುತ್ತಿದ್ದಾರೆ. ಮಾಹಿತಿ ಇಲ್ಲ
ನದಿಯ ಮರಳನ್ನು ಬಳಕೆ ಮಾಡುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಮರಳು ನೀತಿಯ ಪ್ರಕಾರ ಇದು ತಪ್ಪು.
– ಹರೀಶ್, ಬೋಳ ಗ್ರಾ.ಪಂ.
ಅಭಿವೃದ್ಧಿ ಅಧಿಕಾರಿ ಮಣ್ಣು ಮಿಶ್ರಿತ ಮರಳು ಉಪಯೋಗ ಬೇಡ
ಎಂ. ಸ್ಯಾಂಡ್ ಬಳಕೆ ಮಾಡಲಿ. ಇಲ್ಲವಾದಲ್ಲಿ ಕಾನೂನು ಪ್ರಕಾರ ಉತ್ತಮ ಗುಣಮಟ್ಟದ ಮರಳನ್ನು ಉಪಯೋಗಿಸಿ ಕಾಮಗಾರಿಯನ್ನು ಮಾಡಲು ಯಾವುದೇ ಅಭ್ಯಂತರವಿಲ್ಲ. ಆದರೆ ನದಿಯ ಮಣ್ಣು ಮಿಶ್ರಿತ ಗುಣಮಟ್ಟವಿಲ್ಲದ ಮರಳನ್ನು ಉಪಯೋಗಿಸಬಾರದು.
– ಸತೀಶ್ ಪೂಜಾರಿ,
ಬೋಳ ಗ್ರಾ.ಪಂ. ಅಧ್ಯಕ್ಷ ಎಂ. ಸ್ಯಾಂಡ್‌ನಲ್ಲೇ ಕಾಮಗಾರಿ
ಎಂ. ಸ್ಯಾಂಡ್ ಜತೆಯಲ್ಲಿ ಉತ್ತಮ ಮರಳು ಇದ್ದರೆ ಬಳಕೆ ಮಾಡಬಹುದು. ಆದರೆ ಇಲ್ಲಿರುವ ಮರಳು ಮಣ್ಣು ಮಿಶ್ರಿತವಾಗಿರುವ ಕಾರಣ ನದಿಯಿಂದ ತೆಗೆದ ಮರಳು ಉಪಯೋಗಿಸುತ್ತಿಲ್ಲ. ಬರೀ ಎಂ. ಸ್ಯಾಂಡ್‌ನಲ್ಲೇ ಕಾಮಗಾರಿ ನಡೆಯುತ್ತಿದೆ.
– ಅರುಣ್, ಕಾಮಗಾರಿಯ ಎಂಜಿನಿಯರ್ -ಶರತ್ ಶೆಟ್ಟಿ ಮುಂಡ್ಕೂರು