Advertisement

ಮೈಸೂರು ವಿವಿ ಪ್ರತಿಷ್ಠೆ ಮಣ್ಣುಪಾಲು

12:47 PM Apr 19, 2017 | Team Udayavani |

ಮೈಸೂರು: ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿ ಹಾಗೂ ಕುಲಸಚಿವರ ನಡುವಿನ ತಿಕ್ಕಾಟ ವಿಶ್ವವಿದ್ಯಾನಿಲಯದ ಘನತೆ ಮಣ್ಣುಪಾಲು ಮಾಡುವ ಹಂತಕ್ಕೆ ತಲುಪಿದೆ. ಹಂಗಾಮಿ ಕುಲಪತಿ ಪ್ರೊ.ದಯಾನಂದ ಮಾನೆ ಅನಗತ್ಯವಾಗಿ ವಿವಿಯ ಮಹಿಳಾ ಹಾಸ್ಟೆಲ್‌ಗೆ ಭೇಟಿ ನೀಡುತ್ತಾರೆ ಎಂದು ಕುಲಸಚಿವ ಪ್ರೊ.ಆರ್‌.ರಾಜಣ್ಣ, ಉನ್ನತ ಶಿಕ್ಷಣ ಸಚಿವರಿಗೆ ದೂರು ನೀಡಿದರೆ, ಹಂಗಾಮಿ ಕುಲಪತಿ ದಯಾನಂದ ಮಾನೆ, ವಿವಿಯಲ್ಲಿ 3 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ.

Advertisement

ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ವಿರುದ್ಧ ಇಂತಹ ಷಡ್ಯಂತ್ರ ರೂಪಿಸಲಾಗಿದೆ. ಜತೆಗೆ ಹಂಗಾಮಿ ಕುಲಪತಿ ಎನ್ನುವ ಕಾರಣಕ್ಕೆ ಕುಲಸಚಿವರು ತಮ್ಮನ್ನು ಏಕವಚನದಲ್ಲಿ ಮಾತ ನಾಡಿಸುತ್ತಾರೆ. ಯಾವುದೇ ಕಡತಗಳನ್ನು ತಮ್ಮ ಗಮನಕ್ಕೆ ತರುತ್ತಿಲ್ಲ ಎಂದು ಸಚಿವರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರೊ.ದಯಾನಂದ ಮಾನೆ, ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಸರಿಯಿಲ್ಲ ಎಂದು ದೂರು ಬಂದ ಹಿನ್ನೆಲೆ ಪರಿಶೀಲನೆಗಾಗಿ ತೆರಳಿದ್ದೆ.

ಮತ್ತೂಮ್ಮೆ ಹಾಸ್ಟೆಲ್‌ ಮಕ್ಕಳಿಗೆ ಕೊಡುವ ಹಾಲಿಗೆ ಹೆಚ್ಚು ನೀರು ಬೆರೆಸಲಾಗುತ್ತಿದೆ ಎಂದು ದೂರು ಬಂದಾಗ ಹಾಗೂ ಬೇಸಿಗೆ ಶುರುವಾದ್ದರಿಂದ ವಿದ್ಯಾರ್ಥಿನಿಯರ ಕೊಠಡಿಗಳಲ್ಲಿ ಫ್ಯಾನ್‌ ಅಳವಡಿಸಿಕೊಡಿ ಎಂಬ ಮನವಿ ಬಂದಾಗ ಹೀಗೆ ಈವರೆಗೆ ಮೂರು ಬಾರಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಹೋಗಿದ್ದು ಬಿಟ್ಟರೆ, ಆರೋಪದಲ್ಲಿ ಕೇಳಿಬಂದಿರುವಂತೆ ದಿನಕ್ಕೆ ಮೂರು ಬಾರಿ ಅತ್ತ ಹೋಗಿಲ್ಲ. ನನ್ನ ವಯಸ್ಸೀಗ 60 ಎಂಬುದನ್ನೂ ನೀವು ಅರ್ಥ ಮಾಡಿಕೊಳ್ಳಬೇಕು ಎಂದು ಅವಲತ್ತು ಕೊಂಡಿದ್ದಾರೆ.

ಹಾಸ್ಟೆಲ್‌ನ ಅಡುಗೆ ಕಾಂಟ್ರಾಕ್ಟ್ ಕುಲಸಚಿವ ಪ್ರೊ.ರಾಜಣ್ಣ ಕಡೆಯವರದ್ದು, ಜತೆಗೆ ಹಾಸ್ಟೆಲ್‌ ವಾರ್ಡನ್‌ ರೇಖಾ ಜಾಧವ್‌ ಅಮಾನತು ಮಾಡಿ ದ್ದರಿಂದ ನನ್ನ ವಿರುದ್ಧ ಈ ರೀತಿಯ ಷಡ್ಯಂತ್ರ ಮಾಡಲಾಗಿದೆ ಎಂದು ಪ್ರತ್ಯಾರೋಪ ಮಾಡಿದರು. ನಾನು ಪ್ರಾಧ್ಯಾಪಕನಾಗಿದ್ದಾಗ ರಾಜಣ್ಣ ಇನ್ನೂ ಉಪನ್ಯಾಸಕ, 2000ನೇ ಇಸವಿಯಲ್ಲೇ ನಾನು ಡೀನ್‌, ಸಿಂಡಿಕೇಟ್‌ ಸದಸ್ಯನಾಗಿದ್ದೆ. ಆ ಸಂದರ್ಭದಲ್ಲಿ ಮತ್ತೂಬ್ಬ ಉಪ ನ್ಯಾಸಕರ ಜತೆಗೆ ವಿಭಾಗದ ಮುಂದೆಯೇ ಹೊಡೆದಾಡಿಕೊಂಡು ಬಟ್ಟೆ ಹರಿದುಕೊಂಡು ನಿಂತಿದ್ದ ರಾಜಣ್ಣವರನ್ನು ಆಸ್ಪತ್ರೆಗೆ ಸೇರಿಸಿದವನು ನಾನು.

ನನ್ನನ್ನೇ ಅವನ್ಯಾರು ಹಂಗಾಮಿ ಎಂದು ಏಕವಚನದಲ್ಲಿ ಮಾತನಾಡುತ್ತಾರೆ ಎಂದು ದೂರಿನ ಪಟ್ಟಿ ಮಾಡುತ್ತಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕುಲಸಚಿವ ಪ್ರೊ.ಆರ್‌.ರಾಜಣ್ಣ, ಕುಲಸಚಿವನಾಗಿ ನಾನು ಸರ್ಕಾರಕ್ಕೆ ಉತ್ತರದಾಯಿ. ಹೀಗಾಗಿ ಹಂಗಾಮಿ ಕುಲಪತಿಯವರ ಆದೇಶಗಳೆಲ್ಲವನ್ನೂ ಸರ್ಕಾರ, ಸಿಂಡಿಕೇಟ್‌ ಗಮನಕ್ಕೆ ತರದೆ ಅನುಮೋದನೆ ಮಾಡುವುದು ಸಾಧ್ಯವಿಲ್ಲ. ಅವರು ಹೇಳುತ್ತಾರೆಂದು ನಾನು ನಿಯಮ ಮೀರಿ ನಡೆದುಕೊಳ್ಳಲಾಗುವುದಿಲ್ಲ ಎನ್ನುತ್ತಾರೆ.

Advertisement

ವಿದ್ಯಾರ್ಥಿನಿಯರ ಹಾಸ್ಟೆಲ್‌ನ ಬ್ಲಾಕ್‌ 1ರಲ್ಲಿ 400ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಅಲ್ಲಿ 9 ವರ್ಷಗಳಿಂದ ಇರುವ ವಾರ್ಡನ್‌ ವಿರುದ್ಧ ಯಾವುದೇ ದೂರುಗಳಿಲ್ಲ. ಹಾಗಿದ್ದೂ ಬೆಳಗ್ಗೆ 9.30ಕ್ಕೆ ಮುಂಚೆ ಹಾಗೂ ಸಂಜೆ 5.30ರ ನಂತರ ಕುಲಪತಿಗೆ ಅಲ್ಲೇನು ಕೆಲಸ ಎಂದು ಪ್ರಶ್ನಿಸುವ ಕುಲಸಚಿವರು, ಖನ್ನತೆಗೊಳಗಾದ ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂಬ ಕಾರಣಕ್ಕೆ ಹಾಸ್ಟೆಲ್‌ ಕೊಠಡಿಗಳಿಗೆ ಫ್ಯಾನ್‌ ಹಾಕಿಸಿರಲಿಲ್ಲ.

ಆದರೆ, ಇವರು ಬಂದ ಕೂಡಲೇ ನನ್ನ ಗಮನಕ್ಕೂ ತರದೇ ನಾಲ್ಕೈದು ಜನ ವಿದ್ಯಾರ್ಥಿನಿಯರು ಒಟ್ಟಿಗೇ ಇರುವ ದೊಡ್ಡ ಕೊಠಡಿಗಳ ಬದಲಿಗೆ ಒಬ್ಬರೇ ವಿದ್ಯಾರ್ಥಿನಿಯರಿರುವ 36 ಕೊಠಡಿಗಳಿಗೆ ಫ್ಯಾನ್‌ ಹಾಕಿಸಿದ್ದಾರೆ. ಭೋದಕ ಹುದ್ದೆ, ಭೋದಕೇತರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಿಕೊಳ್ಳೋಣ ನನ್ನ ಆದೇಶ ಪಾಲಿಸಿ ಎಂಬುದು ಸರಿಯಲ್ಲ. ಜತೆಗೆ ಹಂಗಾಮಿ ಕುಲಪತಿ ವಿರುದ್ಧ ಲೈಂಗಿಕ ದೌರ್ಜನ್ಯದ ಪ್ರಕರಣ ಕೂಡ ಇದೆ.

ಅದರ ವಿಚಾರಣೆಗಾಗಿ ನೇಮಿಕವಾಗಿದ್ದ ಸಮಿತಿ ಇವರ ವಿರುದ್ಧದ ದೂರನ್ನು ಎತ್ತಿಹಿಡಿದು ಇವರಿಗೆ ಯಾವುದೇ ಉನ್ನತ ಹುದ್ದೆ ನೀಡಬೇಡಿ ಎಂದು ವರದಿಯಲ್ಲಿ ಹೇಳಿದೆ. ಆ ವರದಿಯ ಬಗ್ಗೆ ನಿರಕ್ಷೇಪಣಾ ಪತ್ರ (ಎನ್‌ಒಸಿ) ಕೊಡಿ ಎಂದು ದಿನಕ್ಕೆ 3 ಬಾರಿ ಫೋನ್‌ ಮಾಡಿ ದಬಾಯಿ ಸುತ್ತಾರೆ. ನೀವು ಹಂಗಾಮಿ ಕುಲಪತಿ ನಿಮ್ಮ ವಿರುದ್ಧದ ಪ್ರಕರಣದ ಎನ್‌ಒಸಿ ಕೊಡಲಾಗುವುದಿಲ್ಲ. ಹೊಸ ಕುಲಪತಿ ನೇಮಕವಾಗಿ ಬರಲಿ, ಸಿಂಡಿಕೇಟ್‌ ತೀರ್ಮಾನವಾಗಬೇಕು ಎಂದರೂ ಕೇಳುವುದಿಲ್ಲ ಎಂದು ದೂರುತ್ತಾರೆ.

ಸಿಸಿಟಿವಿ ದೃಶ್ಯಾವಳಿ
ಆರೋಪ ಪ್ರತ್ಯಾರೋಪದ ಪತ್ರ ವ್ಯವಹಾರದ ಬೆನ್ನಲ್ಲೇ ಮಂಗಳವಾರ ಹಂಗಾಮಿ ಕುಲಪತಿ   ಪ್ರೊ.ದಯಾನಂದ ಮಾನೆ ಒಬ್ಬಂಟಿಯಾಗಿ ಮಹಿಳಾ ಹಾಸ್ಟೆಲ್‌ಗೆ ಭೇಟಿ ನೀಡಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next