Advertisement

ಸುಳ್ಯದ ಜೀವನದಿ ಪಯಸ್ವಿನಿಯಲ್ಲಿ ಮಣ್ಣು ಮಿಶ್ರಿತ ನೀರು

11:51 PM Apr 20, 2019 | Team Udayavani |

ಅರಂತೋಡು: ಸುಳ್ಯದ ಜೀವನದಿ ಪಯಸ್ವಿನಿಯಲ್ಲಿ ಈಗ ಮಣ್ಣು ಮಿಶ್ರಿತ ನೀರು ಹರಿಯುತ್ತಿದ್ದು, ಕೆಲವೆಡೆ ಶುದ್ಧ ನೀರಿನ ಸಮಸ್ಯೆ ಎದುರಾಗಿದೆ. ಕೊಡಗಿನ ಭಾಗದಲ್ಲಿ ಒಂದು ವಾರದಿಂದ ಮಳೆ ಸುರಿದಿದ್ದು, ಮೇಲ್ಭಾಗ ದಿಂದ ಕೆಸರು ಮಿಶ್ರಿತ ನೀರು ಹರಿದು ಬರುತ್ತಿದೆ.

Advertisement

ಜಳಪ್ರಳಯ ಹಿನ್ನೆಲೆ
ಕಳೆದ ಮಳೆಗಾಲದಲ್ಲಿ ಜೋಡುಪಾಲ, ಎರಡನೇ ಮೊಣ್ಣಂಗೇರಿ ಭಾಗದಲ್ಲಿ ಜಳಪ್ರಳಯ ಸಂಭವಿಸಿತ್ತು. ನದಿಯ ಗುಂಡಿಗಳಲ್ಲಿ ಹಾಗೂ ಬದಿಗಳಲ್ಲಿ ಮಣ್ಣು ಹಾಗೂ ಕೆಸರಿನ ರಾಶಿಗಳಿದ್ದು, ಕೊಡಗು ಭಾಗದಲ್ಲಿ ಮಳೆ ಸುರಿದ ಕಾರಣ ಕೆಸರು ಮಿಶ್ರಿತ ನೀರು ಹರಿದು ಬರುತ್ತಿದೆ. ಹೊಳೆ ಬದಿಯಯಲ್ಲಿರುವ ಅರಂತೋಡು ಗ್ರಾ.ಪಂ. ವ್ಯಾಪ್ತಿಯ ಕೆಲವೆಡೆ ಕುಡಿಯಲು ಪಯಸ್ವಿನಿ ನೀರನ್ನು ಬಳಸುತ್ತಿದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.

ಶುದ್ಧ ನೀರಿನ ಘಟಕ ಬಳಕೆ
ಅರಂತೋಡು ಗ್ರಾ.ಪಂ. ವ್ಯಾಪ್ತಿಯ ಹೆಚ್ಚಿನ ಭಾಗಗಳಿಗೆ ಬೋರ್‌ವೆಲ್‌ ಆಧಾರಿತ ಕುಡಿಯುವ ನೀರಿನ ಘಟಕಗಳು ಇವೆ. ಉಳಿದಂತೆ ಕೆಲವು ಭಾಗ ಹೊಳೆಯ ನೀರನ್ನು ಕುಡಿಯಲು ಬಳಕೆ ಮಾಡಲಾಗುತ್ತಿದೆ. ಕೆಸರು ಮಿಶ್ರಿತ ನೀರು ಕುಡಿದರೆ ಸಮಸ್ಯೆಯಾಗಬಹುದು ಎನ್ನುವ ಹಿನ್ನೆಲೆಯಲ್ಲಿ ಅರಂತೋಡು ಗ್ರಾ.ಪಂ. ಬಳಿಯ ಶುದ್ಧ ನೀರಿನ ಘಟಕವನ್ನು ಉಪಯೋಗ ಮಾಡಲಾಗುತ್ತಿದೆ. ಇದಕ್ಕೆ 5 ರೂ. ನಾಣ್ಯ ಹಾಕಿದರೆ ಒಂದು ಬಾರಿ 10 ಲೀಟರ್‌ ನೀರು ಬರುತ್ತದೆ. ಈ ತನಕ ಅರಂತೋಡು ಶುದ್ಧ ನೀರಿನ ಘಟಕ ಯೋಜನೆಯ ನೀರು ಹೆಚ್ಚು ಉಪಯೋಗಕ್ಕೆ ಬರುತ್ತಿರಲಿಲ್ಲ. ಹೊಳೆಯ ನೀರು ಮಣ್ಣು ಮಿಶ್ರಿತ ಆಗಿರುವ ಹಿನ್ನೆಲೆಯಲ್ಲಿ ಈ ಘಟಕ ಈಗ ಯಥೇತ್ಛವಾಗಿ ಬಳಕೆಯಾಗುತ್ತಿದೆ. ಇದರ ಅಗತ್ಯ ಈಗ ಜನರಿಗೆ ಅರಿವಿಗೆ ಬಂದಿದೆ.

ಪಯಸ್ವಿನಿ ನದಿ ನೀರು ಬಳಕೆ ಹೆಚ್ಚು
ಪಯಸ್ವಿನಿ ನದಿ ನೀರನ್ನು ಅರಂತೋಡು, ಸಂಪಾಜೆ, ಸುಳ್ಯ ನಗರ ಪಂಚಾಯತ್‌ ಸಹಿತ ನದಿಯ ತಡದಲ್ಲಿ ಇರುವ ಹೆಚ್ಚಿನವರು ಕುಡಿಯಲು ಬಳಸುತ್ತಾರೆ. ನದಿ ನೀರು ಮಣ್ಣು ಮಿಶ್ರತವಾಗಿ ದಪ್ಪವಾಗಿರುವ ಕಾರಣ ಇದೀಗ ಕುಡಿಯಲು ಆಯೋಗ್ಯವಾಗಿದೆ ಎಂಬ ಅಭಿಪ್ರಾಯ ಜನರಿಂದ ವ್ಯಕ್ತವಾಗಿದೆ.

ಶುದ್ಧ ನೀರು ಬಳಸಲು ಸೂಚನೆ
ಪಯಸ್ವಿನಿ ಹೊಳೆಯಲ್ಲಿ ಮಣ್ಣು ಮಿಶ್ರಿತ ನೀರು ಬರುತ್ತಿದೆ. ಇದರಿಂದ ಸಮಸ್ಯೆಯಾಗಿದೆ. ಅರಂತೋಡು ಗ್ರಾ.ಪಂಯ ಹೆಚ್ಚಿನ ಕಡೆ ಬೋರ್‌ವೆಲ್‌ಗ‌ಳ ನೀರನ್ನು ಕುಡಿಯಲು ಉಪಯೋಗ ಮಾಡುತ್ತಿದೆ. ಕೆಲವು ಭಾಗಗಳಿಗೆ ಪಯಸ್ವಿನಿ ನದಿ ನೀರನ್ನು ಕುಡಿಯಲು ಪೂರೈಸಲಾಗುತ್ತಿದೆ. ಈಗ ಪೇಟೆಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಪಯೋಗಿಸಲು ಹೇಳಿದ್ದೇವೆ.
ಶಿವಾನಂದ ಕುಕ್ಕುಂಬಳ ಅರಂತೋಡು ಗ್ರಾ.ಪಂ. ಉಪಾಧ್ಯಕ್ಷರು

Advertisement

ಆರೋಗ್ಯ ಹದಗೆಡಬಹುದು
ಸ್ಥಳೀಯ ಗ್ರಾ.ಪಂ. ಪಯಸ್ವಿನಿ ಹೊಳೆಯ ನೀರನ್ನೇ ಕುಡಿಯಲು ನಮಗೆ ಸರಬರಾಜು ಮಾಡುತ್ತಿದ್ದು, ಇದನ್ನೇ ನಾವು ಉಪಯೋಗಿಸುತ್ತಿದ್ದೇವೆ. ಮಣ್ಣು ಮಿಶ್ರಿತ ನೀರು ಪೂರೈಕೆ ಆಗುತ್ತಿದೆ. ಈ ಕುರಿತು ಗ್ರಾ.ಪಂ. ಆಡಳಿತ ತತ್‌ಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.
ಅಶ್ರಫ್ ಗುಂಡಿ ನೀರು ಬಳಕೆದಾರರು

ತೇಜೇಶ್ವರ್‌ ಕುಂದಲ್ಪಾಡಿ

Advertisement

Udayavani is now on Telegram. Click here to join our channel and stay updated with the latest news.

Next