ಮಣಿಪಾಲ: ತಾಯಿ ಗರ್ಭದಿಂದ ಭೂಗರ್ಭದ ವರೆಗೂ ಮನುಷ್ಯ ಮತ್ತು ಮಣ್ಣಿನ ನಡುವೆ ಅವಿನಾಭಾವ ಸಂಬಂಧವಿದೆ. ಅದನ್ನು ಉಳಿಸಿಕೊಂಡು ಹೋಗುವ ನೈತಿಕ ಜವಾಬ್ದಾರಿ ಪ್ರತಿಯೊಬ್ಬರ ಮೇಲೂ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸದ್ಗುರು ಜಗ್ಗಿ ವಾಸುದೇವ ಅವರ ಇಶಾ ಫೌಂಡೇಶನ್‌ನಿಂದ ಹಮ್ಮಿಕೊಂಡಿರುವ ಮಣ್ಣು ಉಳಿಸಿ ಅಭಿಯಾನದ ಅಂಗವಾಗಿ ಮಂಗಳವಾರ ಮಣಿಪಾಲದ ಕಾಯಿನ್ ವೃತ್ತದಲ್ಲಿ ನಡೆದ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸದ್ಗುರು ಅವರು ನಿಸರ್ಗದ ರಕ್ಷಣೆಗೆ ಬಹಳ ದೊಡ್ಡ ಅಭಿಯಾನ ಮಾಡುತ್ತಿದ್ದಾರೆ. ನದಿಗಳ ರಕ್ಷಣೆಗಾಗಿ ಕಾವೇರಿ ಉಳಿಸಿ ಎಂಬ ಬೃಹತ್ ಅಭಿಯಾನ ನಡೆಸಿದ್ದರು. ಈಗ “ಮಣ್ಣು ಉಳಿಸಿ’ ಅಭಿಯಾನ ಕೈಗೆತ್ತಿಕೊಂಡಿದ್ದಾರೆ. ಮಣ್ಣು ಉಳಿದರ ಮಾತ್ರ ಮನುಷ್ಯ ಉಳಿಯಲು ಸಾಧ್ಯ. ಮಣ್ಣಿನ ರಕ್ಷಣೆ ಮಾಡಬೇಕು ಮತ್ತು ಇದು ಎಲ್ಲ ಕರ್ತವ್ಯವೂ ಆಗಿದೆ. ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಮಣ್ಣಿನ ಫಲವತ್ತತೆಯನ್ನು ಕಾಪಾಡಿ ಕೊಳ್ಳಬೇಕು ಎಂದರು.
ಇಂಧನ ಸಚಿವ ವಿ. ಸುನಿಲ್ ಕುಮಾರ್, ಶಾಸಕ ಕೆ. ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಮಣ್ಣು ಉಳಿಸಿ ಅಭಿಯಾನದ ಪೋಸ್ಟರ್‌ಗಳನ್ನು ಹಿಡಿದು, ಅಭಿಯಾನಕ್ಕೆ ಬೆಂಬಲ ಸೂಚಿಸಿದರು. ಇಶಾ ಫೌಂಡೇಶನ್ ಸದಸ್ಯರು, ಸ್ವಯಂಸೇವಕರು ಉಪಸ್ಥಿತರಿದ್ದರು.
ಕಾಯಿನ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಮಾರ್ಗದಲ್ಲಿ ಹಸುರು ಟಿ-ಶರ್ಟ್ ಧರಿಸಿರುವ ಸ್ವಯಂಸೇವಕರು ಸಾಲಾಗಿ ನಿಂತು ಮಣ್ಣು ಉಳಿಸಿ ಅಭಿಯಾನದ ಪೋಸ್ಟರ್ ಪ್ರದರ್ಶಿಸಿದರು.