ಚಿಂಚೋಳಿ: ರಾಜ್ಯ ಆಹಾರ ಮತ್ತು ಕೃಷಿ ಸಂಸ್ಥೆ ಅಧ್ಯಯನದ ಪ್ರಕಾರ ಆರೋಗ್ಯಕರ ಮಣ್ಣು ಸಸ್ಯ ಮತ್ತು ಪ್ರಾಣಿಗಳ ಉತ್ಪಾದಕತೆ ಉಳಿಸಿಕೊಳುತ್ತದೆ. ಮಣ್ಣು, ನೀರು ಮತ್ತು ಗಾಳಿಯ ಗುಣಮಟ್ಟ ಹೆಚ್ಚಿಸುತ್ತದೆ ಎಂದು ಹೈದ್ರಾಬಾದ ಕೇಂದ್ರೀಯ ಸಂಶೋಧನಾ ಸಂಸ್ಥೆ ಒಣಬೇಸಾಯ ಕೇಂದ್ರದ ವಿಜ್ಞಾನಿ ಡಾ| ಸಂಗನಬಸಪ್ಪ ಬಳ್ಳೋಳ್ಳಿ ಹೇಳಿದರು.
ಪಟ್ಟಣದ ಶ್ರೀನಿವಾಸ ಶ್ರೀಧರ ಪಾಟೀಲ ಅವರ ತೋಟದಲ್ಲಿ ತಾಲೂಕು ಕೃಷಿ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಮಣ್ಣಿನ ದಿನಾಚರಣೆ ಕಾರ್ಯಕ್ರಮದಲ್ಲಿ ರೈತರಿಗೆ ಮಣ್ಣಿನ ಆರೋಗ್ಯ ಕಾಪಾಡಿ ಕೊಳ್ಳುವ ಕುರಿತು ಅವರು ಉಪನ್ಯಾಸ ನೀಡಿದರು.
ಮಣ್ಣಿನಲ್ಲಿ ಸೂಕ್ಷ್ಮ ಜೀವಿಗಳು ಇರುವುದರಿಂದ ಮಳೆ ಹಾಗೂ ಮಣ್ಣು ಜನರ ಜೀವನವಾಗಿದೆ. ಜನರ ಬದುಕು ಮಣ್ಣಿನ ಮೇಲೆ ಅವಲಂಬಿತವಾಗಿದೆ ಎಂದರು.
ಚಿಂಚೋಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಭಿಲಾಷ ಸುಬೇದಾರ ಮಾತನಾಡಿ, ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ಉಪ್ಪು ನೀರು ಬಳಸುವುದರಿಂದ ಮಣ್ಣಿನಲ್ಲಿರುವ ಜೀವಸತ್ವ ಕಳೆದು ಹೋಗುತ್ತದೆ. ಇದರಿಂದಾಗಿ ಬೆಳೆಗಳ ಬೆಳವಣಿಗೆ ಸಮೃದ್ಧವಾಗುವುದಿಲ್ಲ. ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಒಂದೇ ಜಮೀನಿದಲ್ಲಿ ಬೇರೆ ಬೇರೆ ಬೆಳೆ ಬೆಳೆಯಬೇಕು ಎಂದರು.
ಹೈದ್ರಾಬಾದ್ ಕೃಷಿ ಸಂಶೋಧನಾ ವಿಜ್ಞಾನಿಗಳಾದ ಡಾ| ರವಿಕಾಂತ, ಡಾ|ವಿಶಾಕುಮಾರಿ, ಕೃಷಿ ಅಧಿಕಾರಿ ನಾಸೀರ ಪಟೇಲ ಚಂದಾಪುರ ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳುವಿಕೆ ಕುರಿತು ರೈತರಿಗೆ ಮಾಹಿತಿ ನೀಡಿದರು. ರೈತರಾದ ಗಜೇಂದ್ರಗೌಡ ಪಾಟೀಲ, ಶ್ರೀನಿವಾಸಗೌಡ ಪಾಟೀಲ, ಯಮರಾಜ ರಾಠೊಡ, ಲಕ್ಷ್ಮೀಕಾಂತ ನಾಯನೋರ, ಮೊಗಲಪ್ಪ ಕರಕಟ್ಟಿ, ಬಸವರಾಜ ಮಲಿ, ಹಲಚೇರಿ ಶರಣಪ್ಪ, ಸೂರ್ಯಕಾಂತ ಹುಲಿ, ಜಗದೀಶ ಗುತ್ತೇದಾರ, ಶಾಂತು ಪಾಟೀಲ ಹಾಗೂ ಕೃಷಿ ಸಿಬ್ಬಂದಿ ಇದ್ದರು. ಮಹಾಂತೇಶ ಸ್ವಾಗತಿಸಿದರು, ನಾಸೀರ ಪಟೇಲ್ ವಂದಿಸಿದರು.