ಕೊಪ್ಪಳ: ಮಣ್ಣಿನ ಫಲವತ್ತತೆ ಅರಿತು ಬಿತ್ತನೆ ಮಾಡಿದರೆ ಸೂಕ್ತ ಇದರಿಂದ ಉತ್ತಮ ಇಳುವರಿ ಬರಲು ಸಾಧ್ಯ ಎನ್ನುವುದನ್ನು ಅರಿತ ಕೇಂದ್ರ ಸರ್ಕಾರವೂ 2015ರಲ್ಲಿ ಮಣ್ಣು ಆರೋಗ್ಯ ಕಾರ್ಡ್ ಯೋಜನೆ ಜಾರಿ ತಂದಿದೆ. ಆದರೆ ಜಿಲ್ಲೆಯಲ್ಲಿ ಅದು ಹೇಳಿಕೊಳ್ಳುವಂತಹ ಬೆಳವಣಿಗೆ ಕಂಡಿಲ್ಲ. ಪ್ರಯೋಗಾಲಯದಲ್ಲಿ ವಿಶ್ಲೇಷಣೆಯಾದ ಕಾರ್ಡ್ ರೈತ ಸಂಪರ್ಕ ಕೇಂದ್ರದಲ್ಲಿ ಮೂಲೆ ಸೇರುವಂತಾಗಿವೆ.
ಹೌದು.. ಜಿಲ್ಲೆಯಲ್ಲಿ ಮಣ್ಣು ಆರೋಗ್ಯ ಕಾರ್ಡ್ ಬಗ್ಗೆ ನಿಜವಾದ ರೈತರಿಗೆ ಇದರ ಬಗ್ಗೆ ಮಾಹಿತಿ ಇಲ್ಲ. ಮಣ್ಣು ಕಾರ್ಡ್ ಎಂದರೇನು ಎನ್ನುವಂತ ಪ್ರಶ್ನೆ ಮಾಡುವಂತಾಗಿವೆ. ಕೆಳ ಹಂತದಲ್ಲಿನ ರೈತ ಅನುವುಗಾರರು, ಆತ್ಮ ಯೋಜನೆಯ ಸಿಬ್ಬಂದಿಗಳು ಸಕಾಲಕ್ಕೆ ಕಾರ್ಡ್‌ಗಳನ್ನು ರೈತರಿಗೆ ತಲುಪಿಸುತ್ತಿಲ್ಲ ಎನ್ನುವ ಆಪಾದನೆ ಸಾಮಾನ್ಯವಾಗಿದೆ.
ಜಿಲ್ಲೆಯಲ್ಲಿ 2015-16 ಹಾಗೂ 2016-17ನೇ ಸಾಲಿನಲ್ಲಿ 66,964 ಮಣ್ಣನ್ನು ತೆಗೆದು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕೊಡಲಾಗಿದ್ದು, ಈಗಾಗಲೇ 2,18,102 ಕಾರ್ಡ್‌ಗಳನ್ನು ಪ್ರಿಂಟ್ ಮಾಡಲಾಗಿದೆ. ಇನ್ನೂ 2017-18 ಹಾಗೂ 2018-19ನೇ ಸಾಲಿನಲ್ಲಿ 52,012 ಮಣ್ಣು ಸ್ಯಾಂಪಲ್ ತೆಗೆಯಲಾಗಿದ್ದು, ಈ ಪೈಕಿ 1,18,878 ಕಾರ್ಡ್‌ಗಳನ್ನು ಪ್ರಿಂಟ್ ಮಾಡಲಾಗಿದೆ.
ಈ ವರ್ಷದಲ್ಲಿ 91,759 ಕಾರ್ಡ್‌ಗಳನ್ನು ರೈತರಿಗೆ ವಿತರಣೆ ಮಾಡಿದ್ದೇವೆ ಎಂದರೂ ಬಹುತೇಕ ಕಾರ್ಡ್‌ಗಳು ತಾಲೂಕು ಹಂತದ ರೈತ ಸಂಪರ್ಕ ಕೇಂದ್ರಗಳಲ್ಲಿ ಕೊಳೆಯುತ್ತಾ ಬಿದ್ದಿವೆ. ಕೇಂದ್ರ ಸರ್ಕಾರ ರೈತ ಬೆಳೆಯುವ ಭೂಮಿಯಲ್ಲಿ ಯಾವ ಅಂಶ ಇದೆ ಎನ್ನುವುದನ್ನು ತಿಳಿದು ಬೆಳೆ ಬೆಳೆಯುವ ಉದ್ದೇಶದಿಂದ ಮಣ್ಣು ಆರೋಗ್ಯ ಕಾರ್ಡ್ ಯೋಜನೆ ಜಾರಿ ಮಾಡಿದೆ. ಆದರೆ ಜಿಲ್ಲಾ ಹಂತದಲ್ಲಿ ಮಣ್ಣು ಪರೀಕ್ಷೆ ನಡೆಸಿ ವಿಶ್ಲೇಷಣೆ ಮಾಡಿ ರೈತ ಸಂಪರ್ಕ ಕೇಂದ್ರಗಳಿಗೆ ಕಳಿಸಿ ಕೊಟ್ಟಿದ್ದರೂ ಅನುವುಗಾರರು, ಸಿಬ್ಬಂದಿ ವಿತರಣೆ ಮಾಡುತ್ತಿಲ್ಲ. ಆದರೆ ಕೃಷಿ ಇಲಾಖೆಯು ಕಾರ್ಡ್ ವಿತರಣೆ ಮಾಡಲಾಗುತ್ತಿದೆ ಎನ್ನುವ ಮಾತನ್ನಾಡುತ್ತಿದೆಯಾದರೂ ಬಹುತೇಕ ಕಡೆ ರೈತರಿಗೆ ಕಾರ್ಡ್ ವಿತರಣೆಯಾಗಿಲ್ಲ.
ವಿಶೇಷವೆಂದರೆ, ಪ್ರಯೋಗಾಲಯದ ಮೂಲಕ ನೇರವಾಗಿ ಕಾರ್ಡ್‌ಗಳು ರೈತ ಸಂಪರ್ಕ ಕೇಂದ್ರಕ್ಕೆ ಪೂರೈಕೆಯಾಗಲಿವೆ. ಆದರೆ ಪ್ರಯೋಗಾಲಯದಿಂದ ಪೂರೈಕೆಯಾದ ಕಾರ್ಡ್‌ಗಳನ್ನೇ ಜಿಲ್ಲಾ ಕೃಷಿ ಇಲಾಖೆಯು ಇದೇ ಅಂಕಿ ಅಂಶಗಳ ಆಧಾರದ ಮೇಲೆ ರೈತರಿಗೆ ಕಾರ್ಡ್‌ಗಳನ್ನು ಕೊಟ್ಟಿದ್ದೇವೆ ಎನ್ನುತ್ತಿದೆ. ಅಸಲಿ ಎಂದರೆ ಅನುವುಗಾರರು, ಆತ್ಮ ಯೋಜನೆಯ ಸಿಬ್ಬಂದಿಗಳು ರೈತರಿಗೆ ಈ ಕಾರ್ಡ್ ಕೊಡಬೇಕಿದೆ. ಇನ್ನೂ ಕೃಷಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯಿಂದ ವಿಳಂಬ ಮಾಡಿರಬಹುದು ಎನ್ನುವ ಮಾತೊಂದು ಕೇಳಿ ಬಂದಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಲ್ಲಿ ಹಳ್ಳ ಹಿಡಿಯುವಂತಾಗಿದೆ.
ಇನ್ನಾದರೂ ಕೃಷಿ ಇಲಾಖೆಯ ಅಧಿಕಾರಿಗಳು ಕಾರ್ಡ್‌ಗಳ ವಿತರಣೆಯ ಬಗ್ಗೆ ಕೆಳ ಹಂತದಲ್ಲಿ ರೈತರಿಂದಲೇ ಮಾಹಿತಿ ಪಡೆದರೆ ಎಲ್ಲವೂ ಪಕ್ಕಾ ಆಗಲಿದೆ. ತಾಲೂಕು ರೈತ ಸಂಪರ್ಕ ಕೇಂದ್ರದಲ್ಲಿ ಕೊಳೆಯುತ್ತಾ ಬಿದ್ದಿರುವ ಕಾರ್ಡ್‌ಗಳ ವಿಲೇವಾರಿಗೆ ಕ್ರಮಕೈಗೊಳ್ಳುವ ಅವಶ್ಯಕತೆ ಇದೆ.
ಮಣ್ಣು ಆರೋಗ್ಯ ಕಾರ್ಡ್‌ನ್ನು ನಾವು ಹಂತ ಹಂತವಾಗಿ ವಿತರಣೆ ಮಾಡುತ್ತಿದ್ದೇವೆ. ನಮ್ಮಲ್ಲಿ ಸಿಬ್ಬಂದಿಗಳ ಕೊರತೆಯಿಂದ ಕೆಲವೊಂದು ಕಡೆ ವಿಳಂಬವಾಗಿರಬಹುದು. ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದೆ. ನಮ್ಮಲ್ಲಿ ಈಗ ಅನುವುಗಾರರ ಕೊತೆ ಇದೆ. ಆತ್ಮ ಯೋಜನೆಯ ಸಿಬ್ಬಂದಿಗಳ ಮೂಲಕ ಈ ಪ್ರಕ್ರಿಯೆ ನಡೆದಿದೆ.
ಶಬಾನಾ ಶೇಖ್,
ಜಂಟಿ ಕೃಷಿ ನಿರ್ದೇಶಕಿ, ಕೊಪ್ಪಳ.
ದತ್ತು ಕಮ್ಮಾರ