Advertisement

ಮೃದೂನಿ ಕುಸುಮಾದಪಿ

09:46 AM Feb 01, 2020 | mahesh |

ಹೂವರಳಿದ ಗಿಡ ತುಸು ಬಾಗುತ್ತದೆ. ನಿಜವಾಗಿ ಅದು ಬೀಗಬೇಕಿತ್ತು. ಸುವಾಸನಾ ಭರಿತವಾದ ಹೂವನ್ನು ಜಗತ್ತಿಗೆ ಕೊಟ್ಟಂಥ ಹೆಮ್ಮೆ ಅದಕ್ಕಿರಬೇಕಿತ್ತು. ಅದಿಲ್ಲ. ಹೂವು ತುಂಬಿಕೊಂಡ ಗಿಡಕ್ಕೆ ಒಂದು ಬಗೆಯ ವಿನಯವಿರುತ್ತದೆ.

Advertisement

ಸೋಜಿಗದ ಸೂಜಿ ಮಲ್ಲಿಗೆ
ಮಹಾದೇವ ನಿಮ್ಮ ಮಂಡೆ ಮೇಲೆ
ದುಂಡು ಮಲ್ಲಿಗೆ ….
ಹೂವನ್ನು ದೇವರಿಗೆ ಸಮರ್ಪಿಸುವುದು ಸಂಪ್ರದಾಯ. ಹೂವಿಲ್ಲದೆ ದೇವರ ಪೂಜೆಯುಂಟೆ? ಆ ಅರ್ಥದಲ್ಲಿ ದೇವರು ಮತ್ತು ಹೂವು ಒಂದೇ. ಹಾಗಾಗಿ, ಪಾರಿಜಾತ ಒಂದೇ ಅಲ್ಲ, ಎಲ್ಲ ಹೂವುಗಳೂ ದೇವಪುಷ್ಪಗಳೇ.

ಮೊದಲೆಲ್ಲ ಮನೆಯಲ್ಲಿ ಕಾಯಿಲೆಯೊ ಕಷ್ಟವೊ ಬಂದರೆ ದೇವರಿಗೆ ಹರಕೆ ಹೇಳುವ ಸಂಪ್ರದಾಯವಿತ್ತು. ಆದರೆ, ಹರಕೆಯನ್ನು ತೀರಿಸುವುದು ಹೇಗೆ? ಎರಡು ಹೊತ್ತು ಉಣ್ಣಲು ಕಷ್ಟವಿರುವ ದಿನಗಳಲ್ಲಿ ಮತ್ತೂಂದು ಹೊರೆ! ಏನು ಮಾಡೋಣ? ಒಂದು ಹೂವನ್ನು ಭಕ್ತಿಯಿಂದ ಅರ್ಪಿಸಿದರೆ ಆಯಿತು. ಈಗಿನ ಕಾಲದಲ್ಲಿ ಸ್ಥಿತಿ ಬದಲಾಗಿದೆ ಎನ್ನಿ. ಮಹಿಳೆಯರ ಕೈಯಲ್ಲಿ ದುಡ್ಡು ಓಡಾಡುತ್ತಿದೆ. ಆದರೆ, ದೇವರಿಗೆ ಹೂವನ್ನು ಸಮರ್ಪಿಸುವ ಪರಿಪಾಠ ಈಗಲೂ ಮುಂದುವರಿದೇ ಇದೆ.

ಗಿಡದ ಮೇಲೆ ಹೂವಿರುವುದೇ ಚೆಂದ. ಕೆಲವು ಭಾವುಕರು ಅದನ್ನು ಕೀಳುವುದಿಲ್ಲ. ಹೂವನ್ನು ಕೀಳುವಾಗಲೂ ಗಿಡದ ಅನುಮತಿ ಕೇಳಬೇಕೆಂಬ ಮಾತಿದೆ. ಪ್ರಕೃತಿಯ ಯಾವುದೇ ವಸ್ತುವನ್ನು ಪಡೆಯುವಾಗ ಅದರ ಅನುಮತಿ ಪಡೆಯುವುದು ಶಾಸ್ತ್ರ ಕ್ರಮ. ಗಿಡದಿಂದ ಹೂವನ್ನು ಕಿತ್ತರೆ ಅದಕ್ಕೆ ನೋವಾಗಬಹುದೋ ಎಂಬ ಭಾವನೆಯಿಂದ ಅದನ್ನು ಹಾಗೆಯೇ ಅಲ್ಲಿಯೇ ಬಿಡುವವರಿದ್ದಾರೆ. ಗಿಡ ಬಿಟ್ಟರೆ ಹೂವು ಸಲ್ಲುವುದು ದೇವರಿಗೆ ಅಥವಾ ಹೆಣ್ಣಿನ ಮುಡಿಗೆ.

ಹೂವರಳಿದ ಗಿಡ ತುಸು ಬಾಗುತ್ತದೆ. ನಿಜವಾಗಿ ಅದು ಬೀಗಬೇಕಿತ್ತು. ಸುವಾಸನಾ ಭರಿತವಾದ ಹೂವನ್ನು ಜಗತ್ತಿಗೆ ಕೊಟ್ಟಂಥ ಹೆಮ್ಮೆ ಅದಕ್ಕಿರಬೇಕಿತ್ತು. ಅದಿಲ್ಲ. ಹೂವು ತುಂಬಿಕೊಂಡ ಗಿಡಕ್ಕೆ ಒಂದು ಬಗೆಯ ವಿನಯವಿರುತ್ತದೆ. ಹಾಗಾಗಿ, ಅದು ಮುಂದೆ ಬಾಗುತ್ತದೆ. ಅದು ಲೋಕಕ್ಕೆ ಪಾಠವೂ ಹೌದು.

Advertisement

ಕವಿ ವಿಲಿಯಂ ವರ್ಡ್ಸ್‌ವರ್ತ್‌, ಡ್ಯಾಫೊಡಿಲ್ಸ್‌ ಹೂವಿನ ಬಗ್ಗೆ ಪದ್ಯ ಬರೆದಿದ್ದಾನೆ. ಡ್ಯಾಫೊಡಿಲ್ಸ್‌ ಯುರೋಪಿನಲ್ಲಿ ಬೆಳೆಯುವ ಹಳದಿ ಬಣ್ಣದ ಪುಷ್ಪ. ಅದನ್ನು ವರ್ಡ್ಸ್‌ವರ್ತ್‌ ಗೋಲ್ಡನ್‌ ಡ್ಯಾಫೊಡಿಲ್ಸ್‌ ಎಂದು ಕರೆಯುತ್ತಾನೆ. ಅದು ಒಂದು ಬಗೆಯ ವರ್ಣನೆಯ ನುಡಿ. ನಮ್ಮಲ್ಲಿ ಬಂಗಾರದ ಪುಷ್ಪ ಎಂದರೆ ಪ್ರಶಂಸೆಯ ಮಾತಲ್ಲ, ವಿಡಂಬನೆಯ ನುಡಿ. ಬಂಗಾರದ ಪುಷ್ಪವಾ ದರೇನು, ಸುಗಂಧ ವಿಲ್ಲವಲ್ಲ ಎಂಬುದು ಈ ಮಾತಿನ ಸೂಕ್ಷ್ಮ.

ಒಬ್ಬೊಬ್ಬ ದೇವರಿಗೆ ಒಂದೊಂದು ಬಗೆಯ ಹೂವು ಇಷ್ಟ. ಗಣಪತಿಗೆ ಕೆಂಪು, ಶಿವನಿಗೆ ಬಿಳಿ… ಹೀಗೆ. “ವಿಷ್ಣು ಅಲಂಕಾರ ಪ್ರಿಯ’ ಎನ್ನುತ್ತಾರೆ. ಹೆಣ್ಣು ಕೂಡ ಅಲಂಕಾರ ಪ್ರಿಯಳೇ. ಯಾವುದರಲ್ಲಿ ಅಲಂಕರಿಸುವುದು? ಹೂವಿನಲ್ಲಿ ! ಹೂವಿಲ್ಲದೆ ಅಲಂಕಾರ ಉಂಟೆ?

ಹೂವಿನ ಹಿಂದೆ ಎಷ್ಟೊಂದು ಕತೆಗಳಿವೆ! ಜನಪದ ಕತೆಗಳಲ್ಲಿ , ಪುರಾಣ ಕತೆಗಳಲ್ಲಿ ಸಾಕಷ್ಟಿವೆ. ಕೃಷ್ಣನ ಮಡದಿಯರಾದ ರುಕ್ಮಿಣಿ- ಸತ್ಯಭಾಮೆಯರಿಗೆ ಜಗಳ ಹಿಡಿಸಿದ್ದೇ ಪಾರಿಜಾತ ಹೂವು. ಭೀಮನಿಗೆ ದ್ರೌಪದಿಯ ಮೇಲಿನ ಪ್ರೀತಿಯನ್ನು ಪ್ರಕಟಿಸಲು ನೆಪವಾದದ್ದು ಸೌಗಂಧಿಕಾ ಪುಷ್ಪ. ನಿಜವಾಗಿ ಆಗ ದ್ರೌಪದಿಗೆ ಹೂವು ಮುಡಿಯುವ ಭಾಗ್ಯವಿರಲಿಲ್ಲ. ಆದರೂ ಆಕೆಗೆ ಹೂವು ಬೇಕು. ಅದು ಹೆಣ್ಣಿನ ಸ್ವಭಾವ. ಗಂಡಂದಿರು ಇದ್ದೂ ದ್ರೌಪದಿ 14 ವರ್ಷ ಹೂವು ಮುಡಿಯಲಾರದ ಸ್ಥಿತಿಯಲ್ಲಿ ಇದ್ದಳು. ಅಂದ ಹಾಗೆ, “ಗಂಡಂದಿರು ಇದ್ದೂ’ ಎಂದರೆ ಅದಕ್ಕೆ ಬೇರೆಯೇ ಅರ್ಥ ಬರುತ್ತದೆ. ಗಂಡನಿಲ್ಲದಿದ್ದರೆ? ಈಗ ಬಿಡಿ, ಕಾಲ ಬದಲಾಗಿದೆ. ಎಲ್ಲ ಮಹಿಳೆಯರು ಹೂವು ಮುಡಿಯುತ್ತಾರೆ. ಆದರೆ, ಒಂದು ಕಾಲದಲ್ಲಿ ವಿಧವೆಯರಿಗೆ ಹೂವು ನಿಷಿದ್ಧವಿತ್ತು. ಒಂದು ಕತೆಯಲ್ಲಿ ಒಬ್ಟಾಕೆ ವಿಧವೆಯ ಹೆಸರು ಕುಸುಮಾ! ಆದರೆ, ಆಕೆಗೆ ಕುಸುಮವನ್ನು ಮುಡಿಯುವ ಅವಕಾಶವಿರಲಿಲ್ಲ. ಪುಣ್ಯವಶಾತ್‌ ಜನ ಕುಸುಮ ಎಂಬ ಹೆಸರು ಬದಲಾಯಿಸಲಿಲ್ಲ !

ಮನ್ಮಥನ ಮತ್ತೂಂದು ಹೆಸರು ಸುಮಶರ. ಅವನ ಐದು ಶರಗಳಲ್ಲಿ ಮಲ್ಲಿಕಾ ಶರವೂ ಒಂದು. ಮಲ್ಲಿಕಾ ಎಂದರೆ ಮಲ್ಲಿಗೆ. ಅದರಲ್ಲೂ ಅದು ನವಮಲ್ಲಿಕಾ! ಅದರಿಂದಾಗಿಯೇ ಮನ್ಮಥನಿಗೂ ಮಲ್ಲಿಕಾಗಂಧ. ಮಲ್ಲಿಗೆ ತನ್ನನ್ನು ತಾನು ಬಚ್ಚಿಟ್ಟುಕೊಳ್ಳಲಾರದು. ಸಂಜೆ ವಿಹಾರಕ್ಕೆ ಹೋದಾಗ ಮಲ್ಲಿಗೆಯ ಪರಿಮಳ ಮೂಗಿಗೆ ಸೋಕುತ್ತದೆ. ಹೂವು ಅರಳುವಾಗ ಸದ್ದಾಗುವುದಿಲ್ಲ, ಮೌನವಾಗಿ ಗಂಧ ಹರಡುತ್ತದೆ.

ಮನುಷ್ಯರಾದರೋ ಸುಗಂಧದ್ರವ್ಯ ಸಿಂಪಡಿಸಿಕೊಳ್ಳಬೇಕು- ಹೃದಯದಲ್ಲಿ ಸೌಗಂಧವಿಲ್ಲದಿರುವುದರಿಂದಲೋ ಏನೊ! ಹೂವಿಗೆ ಅಂಥ ಕೃತಕ ಗಂಧದ ಅಗತ್ಯವಿಲ್ಲ, ಅದು ಅದರ ಅಂತರಂಗದಲ್ಲಿಯೇ ಇದೆ.

ಮಳೆಗಾಲಕ್ಕೆ ಹೂವಿನ ಗಿಡಕ್ಕೆ ಎಲ್ಲಿಲ್ಲದ ಬೇಡಿಕೆ. ಮಳೆ ಬಂತೆಂದರೆ ಸಾಕು ಪ್ರತಿಯೊಬ್ಬರು ತಮ್ಮ ಮನೆಯಲ್ಲಿರದ ಹೂವಿನ ಗಿಡವನ್ನು ಪಕ್ಕದ ಮನೆಯಿಂದ ತಂದು ತಮ್ಮ ಮನೆಯಲ್ಲಿ ನೆಡುತ್ತಿದ್ದರು. ಅದೇ ಒಂದು ಸಂಭ್ರಮ. ಈಗ ಎಲ್ಲೆಲ್ಲೂ ಪ್ಲ್ರಾಟ್‌ಗಳೇ. ಇಲ್ಲಿ ಸಸ್ಯಕಾಶಿ ಬೆಳೆಯುವುದಾದರೂ ಹೇಗೆ. ಅದಕ್ಕೆ ಸರಿಯಾಗಿ ಗಿಡಗಳ ಬಗ್ಗೆ ಜನರಿಗೆ ವ್ಯಾಮೋಹವೂ ಕಡಿಮೆ. ಆದರೂ ಅಲ್ಲೊಂದು ಇಲ್ಲೊಂದು ಮನೆಯಲ್ಲಿ ಕೈತೋಟ ಇನ್ನೂ ಜೀವಂತ ಇರುವುದು ಸಸ್ಯಪ್ರೇಮಿಗಳ ಮನೆಯಲ್ಲಿ ಮಾತ್ರ. ಬೆಳಗ್ಗೆ -ಸಂಜೆ ಆ ಕೈತೋಟದಲ್ಲಿ ಅರಳಿದ ಪುಷ್ಪವನ್ನು ನೋಡಿದಾಗ ಮನಸ್ಸಿನ ದುಗುಡವೆಲ್ಲ ಪರಿಹಾರವಾಗಿ ಅದರ ಚೆಲುವಿಕೆಗೆ ಮಾರುಹೋಗಿ, ಅದರ ಸುಗಂಧವನ್ನು ಆಸ್ವಾದಿಸಿದಾಗ ಮನಸ್ಸು ಉಲ್ಲಸಿತವಾಗುವುದರಲ್ಲಿ ಎರಡು ಮಾತಿಲ್ಲ. ಎಂತಹ ಕಡು ಕೋಪದವರೂ ಹೂವನ್ನು ಕಂಡಾಗ ತಲ್ಲಣಿಸದಿರರು. ಅಂತಹ ಧೀಶಕ್ತಿ ಹೂವಿಗಿದೆ.

ಔಷಧಿಯಾಗಿ ಹೂವು
ಹೂವುಗಳು ಕೇವಲ ಮುಡಿಗೆ ಮಾತ್ರ ಮೀಸಲ್ಪಟ್ಟಿಲ್ಲ. ಕೆಲವೊಂದು ಔಷಧಿ ತಯಾರಿಕೆಯಲ್ಲಿ ಹೂವು, ಬೇರುಗಳನ್ನು ಉಪಯೋಗಿಸುತ್ತಾರೆ. ಆಯುರ್ವೇದ ಔಷಧಿ ತಯಾರಿಕೆಯಲ್ಲಿ ಅದರಲ್ಲೂ ಗುಡ್ಡಬೆಟ್ಟದಲ್ಲಿ ಬೆಳೆಯುವ ಹೂವಿನ ಕಾಂಡ, ಬೇರುಗಳ ಉಪಯೋಗವೇ ಹೆಚ್ಚು. ಸುವಾಸನಾಯುಕ್ತ ವಸ್ತುಗಳಾದ ಪೌಡರ್‌, ಸೆಂಟ್‌, ಸಾಬೂನು ತಯಾರಿಕೆಯಲ್ಲಿಯೂ ಈ ಹೂವು ಉಪಯುಕ್ತ.

ಅಡುಗೆಮನೆಯಲ್ಲಿಯೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಕೇಪಳ, ದಾಸವಾಳ ಹೂವುಗಳನ್ನು ಮಜ್ಜಿಗೆ ಮತ್ತು ತೆಂಗಿನಕಾಯಿ ಬೆರೆಸಿ ತಂಬುಳಿ ಮಾಡಿದರೆ ಬಾಯಿಗೂ ರುಚಿ ದೇಹಕ್ಕೂ ಹಿತ. ಅಗಸೆಯ ಹೂವು ಹೊಟ್ಟೆನೋವಿಗೆ ರಾಮಬಾಣ. ಹೀಗೆ ಒಂದೊಂದು ಊರಿನಲ್ಲಿ ಒಂದೊಂದು ಪದ್ಧತಿ. ಮತ, ಧರ್ಮಗಳು ಯಾವುದೇ ಇರಲಿ, ಈ ಹೂವಂತೂ ತನ್ನ ನಿಸ್ವಾರ್ಥ ಕಂಪಿನಿಂದಾಗಿ ಎಲ್ಲ ಕಡೆಯೂ ತನ್ನ ಸ್ಥಾನ ಉಳಿಸಿಕೊಂಡಿದೆ.

ಅದಿತಿ

Advertisement

Udayavani is now on Telegram. Click here to join our channel and stay updated with the latest news.

Next