Advertisement

ಸಾಫ್ಟ್ವೇರ್‌ ಹುಲಿ!

06:00 AM Jul 13, 2018 | |

ಕನ್ನಡದಲ್ಲಿ ಈಗಾಗಲೇ ತರಹೇವಾರಿ ಹುಲಿಗಳು ಬಂದಿವೆ. ಬರುತ್ತಿವೆ, ಬರಲು ರೆಡಿಯಾಗಿವೆ. “ಬೆಟ್ಟದ ಹುಲಿ’, ದುರ್ಗದ ಹುಲಿ’, “ಕಿತ್ತೂರಿನ ಹುಲಿ’, “ರಾಜಾಹುಲಿ’, “ಹೆಬ್ಬುಲಿ’ ಹೆಸರಿನ ಚಿತ್ರಗಳು ಬಂದಿವೆ. ಇವೆಲ್ಲದರ ಜೊತೆಗೆ ಈಗ ಹೊಸ ಹುಲಿಯೊಂದು ಎಂಟ್ರಿಯಾಗುತ್ತಿದೆ. ಅದು “ಗಂಡುಲಿ’. ಬಪ್ಪರೆ, ಸರ್ಕಾರ “ಹುಲಿಗಳನ್ನು ಸಂರಕ್ಷಿಸಿ’ ಎಂಬ ಅಭಿಯಾನ ಶುರುಮಾಡಿದ್ದೇ ತಡ, ಒಂದು ಕಡೆ, “ಸೇವ್‌ ಟೈಗರ್‌’ ಅಂತ ಅಭಿಯಾನ ಹುಟ್ಟುಕೊಂಡಿತು. ಇನ್ನೊಂದೆಡೆ, ಹುಲಿ ಗಣತಿ ಜೋರು ನಡೆಯಿತು. ಇತ್ತ, ಚಿತ್ರರಂಗದಲ್ಲೂ “ಹುಲಿ’ಗಳ ಬೆಳವಣಿಗೆಯೂ ಹೆಚ್ಚಾಗತೊಡಗಿತು. “ಹುಲಿ’ ಹೆಸರಿಟ್ಟುಕೊಂಡು ಬಂದ ಅನೇಕ ಚಿತ್ರಗಳು ನೋಡುಗರನ್ನು ಬೆಚ್ಚಿಬೀಳಿಸಿದವೋ ಇಲ್ಲವೋ ಆದರೆ, ಆ ಹೆಸರಿನ ಚಿತ್ರಗಳಿಗೇನೂ ಬರವಿಲ್ಲ. 

Advertisement

ಇತ್ತೀಚೆಗೆ “ಗಂಡುಲಿ’ ಎಂಬ ಹೊಸಬರ ಚಿತ್ರಕ್ಕೆ ಮುಹೂರ್ತ ನಡೆಯಿತು. ಈ ಚಿತ್ರಕ್ಕೆ ವಿನಯ್‌ ರತ್ನಸಿದ್ಧಿ ನಾಯಕ ಕಮ್‌ ನಿರ್ದೇಶಕ. ಸಾಫ್ಟ್ವೇರ್‌ ಎಂಜಿನಿಯರ್‌ ಆಗಿರುವ ವಿನಯ್‌ ರತ್ನಸಿದ್ಧಿ, ನಟನಾಗುವ ಆಸೆ ಕಂಡಿದ್ದರು. ಆರಂಭದಲ್ಲಿ ಡ್ಯಾನ್ಸ್‌, ನಟನೆ ಕಲಿತು ಕೋರಿಯೋಗ್ರಾಫ‌ರ್‌ ಆಗಿ ಒಂದು ಡ್ಯಾನ್ಸ್‌ ಕ್ಲಾಸ್‌ ಶುರುಮಾಡಿದರು. ಆ ಬಳಿಕ ಸಿನಿಮಾ ಪ್ರೀತಿ ಜಾಸ್ತಿಯಾಗಿ, “ಎಂಜಿನಿಯರ್’ ಮತ್ತು “ಕಿಲಾಡಿ’ ಎಂಬ ಚಿತ್ರ ನಿರ್ದೇಶಿಸಿ, ನಟಿಸಿದರು. ಈಗ “ಗಂಡುಲಿ’ಯಾಗುತ್ತಿದ್ದಾರೆ. ಅವರೇ ಹೇಳುವಂತೆ, “ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ. ನಾಯಕ ಚಿತ್ರದಲ್ಲಿ ರಾಜವಂಶದವನು. ಇಲ್ಲಿ ಮಾಸ್‌ ಎಲಿಮೆಂಟ್ಸ್‌ ಜೊತೆಗೆ ಪ್ರೀತಿ, ಪ್ರೇಮದ ಅಂಶಗಳೂ ಇವೆ. ಹಳ್ಳಿಯಲ್ಲಿ ವ್ಯವಸಾಯ ಮಾಡಿಕೊಂಡಿರುವ ಹೀರೋ, ಆ ಹಳ್ಳಿಯ ಅಭಿವೃದ್ಧಿಯತ್ತ ಗಮನಹರಿಸುತ್ತಾನೆ. ಬುದ್ಧಿವಂತ ಯುವಕರು ಮನಸ್ಸು ಮಾಡಿದರೆ ಹಳ್ಳಿಯನ್ನು ಏನು ಬೇಕಾದರೂ ಮಾಡಬಹುದು ಎಂಬ ಕಥೆಯೊಂದಿಗೆ ಚಿತ್ರ ಸಾಗಲಿದೆ’ ಎನ್ನುತ್ತಾರೆ ವಿನಯ್‌.

ಈ ಚಿತ್ರಕ್ಕೆ ಛಾಯಾದೇವಿ ನಾಯಕಿ. ಅವರಿಗಿದು ಎರಡನೇ ಚಿತ್ರವಂತೆ. ಅವರಿಗಿಲ್ಲಿ ಡಾಕ್ಟರ್‌ ಪಾತ್ರ ಸಿಕ್ಕಿದ್ದು, ಅದು ಸಿಟಿ ಮತ್ತು ಹಳ್ಳಿಯಲ್ಲಿರುವಂತಹ ಡಾಕ್ಟರ್‌ ಪಾತ್ರ. ಆ ಪಾತ್ರದಲ್ಲಿ ಸಾಕಷ್ಟು ಏರಿಳಿತಗಳಿದ್ದು, ಅದನ್ನು ಚಿತ್ರದಲ್ಲೇ ನೋಡಬೇಕು ಎಂಬುದು ಛಾಯಾದೇವಿ ಮಾತು.

ಈ ಚಿತ್ರಕ್ಕೆ ವಿನಯ್‌ ರತ್ನಸಿದ್ಧಿ ಅವರ ಗೆಳೆಯರು ಹಣ ಹಾಕಿದ್ದಾರೆ. ಪುನೀತ್‌, ಅಮರೇಂದ್ರ, ಬಸವರಾಜ್‌ ಹಾಗೂ ಇತರೆ ಗೆಳೆಯರು ನಿರ್ಮಾಣ ಮಾಡುತ್ತಿದ್ದಾರೆ. ಎಲ್ಲರಿಗೂ ಇದು ಹೊಸ ಅನುಭವ. ಚಿತ್ರಕ್ಕೆ ರವಿದೇವ್‌ ನಾಲ್ಕು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಎರಡು ಡ್ಯುಯೆಟ್‌, ಒಂದು ಟಪ್ಪಾಂಗುಚ್ಚಿ ಮತ್ತು ಒಂದು ಶೀರ್ಷಿಕೆ ಗೀತೆ ಇದೆ. ಮೂರು ಭರ್ಜರಿ ಫೈಟ್ಸ್‌ ಗಳೂ ಇವೆ. ಚಿತ್ರಕ್ಕೆ ರಾಜು ರವಿಶಂಕರ್‌ ಅವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಸುಧಾ ಬೆಳವಾಡಿ, ಧರ್ಮೇಂದ್ರ ಅರಸ್‌ ಇತರರು ನಟಿಸುತ್ತಿದ್ದಾರೆ. ಸುಮಾರು 45 ದಿನಗಳ ಕಾಲ ತುಮಕೂರು, ಕೆ.ಆರ್‌.ಪೇಟೆ, ಮಡಿಕೇರಿ, ಚಿಕ್ಕಮಗಳೂರು, ಬೆಂಗಳೂರಲ್ಲಿ ಚಿತ್ರೀಕರಣ ನಡೆಯಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next