Advertisement

ಕನ್ನಡ ಉಳಿಸಲು ತಂತ್ರಾಂಶ ಅನಿವಾರ್ಯ

12:15 PM Jul 14, 2018 | Team Udayavani |

ಬೆಂಗಳೂರು: ತಂತ್ರಾಂಶದಲ್ಲಿ ಕನ್ನಡ ಅಳವಡಿಸುವ ಮೂಲಕ ಈ ನಾಡಿನ ಭಾಷೆ ಉಳಿಸಬೇಕಾದ ಅನಿವಾರ್ಯತೆ ಇದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ತಿಳಿಸಿದ್ದಾರೆ.

Advertisement

ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುವೆಂಪು ಸಾಂಸ್ಕೃತಿಕ ಉತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ತಂತ್ರಾಂಶ ಅಭಿವೃದ್ಧಿ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಹಾಗೂ ನಾನು ಈ ಹಿಂದೆ ಸರ್ಕಾರದ ಹಲವು ಸಚಿವರನ್ನು ಭೇಟಿಯಾಗಿದ್ದೆವು. ಅವರು ನಮ್ಮಿಬ್ಬರನ್ನು ಅಕ್ಕಪಕ್ಕ ನಿಲ್ಲಿಸಿಕೊಂಡು ಫೋಟೋ ತೆಗೆಸಿಕೊಂಡಿದ್ದು ಬಿಟ್ಟರೆ ಬೇರೇನೂ ಮಾಡಲಿಲ್ಲ.

ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ತಂತ್ರಾಂಶದಲ್ಲಿ ಕನ್ನಡ ಅಳವಡಿಸುವ ಸಂಬಂಧ ವರದಿ ತಯಾರಿಸಲು 2 ಕೋಟಿ ರೂ. ಅನುದಾನ ನೀಡಿದ್ದರು. ಈ ಹಣದಿಂದ ಕನ್ನಡ ತಂತ್ರಾಂಶದ ಕುರಿತು ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ಅವರ ನೇತೃತ್ವದಲ್ಲಿ ಅತ್ಯುತ್ತಮ ವರದಿ ತಯಾರಿಸಿದ್ದೆವು. ಆ ಯೋಜನೆ ಅರ್ಧದಲ್ಲೇ ನಿಂತಿದೆ ಎಂದರು.

ಈಗಿನ ಸರ್ಕಾರ ತಂತ್ರಾಂಶದಲ್ಲಿ ಕನ್ನಡ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಕನ್ನಡ ಭಾಷೆ ಜಾಗತಿಕ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಲಿದೆ. ಡಾ.ಚಿದಾನಂದಗೌಡ ಅವರ ನೇತೃತ್ವದಲ್ಲಿ  ತಯಾರಾದ ವರದಿ ಬಗ್ಗೆ ಸರಿಯಾದ ಗಮನ ನೀಡಿದರೆ ಕನ್ನಡಕ್ಕೆ ಚೈತನ್ಯ ತರಬಹುದು. ದೇಶದ ಯಾವುದೇ ಭಾಷೆಯೂ ಕನ್ನಡಕ್ಕೆ ಸಮನಾಗದಂತೆ ಬೆಳೆಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ ಅವರಿಗೆ ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಮತ್ತು ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಅವರಿಗೆ ಕರ್ನಾಟಕ ರತ್ನ ಡಾ.ದೇಜಗೌ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

ಕನ್ನಡ ಹೋರಾಟಗಾರ ರಾ.ನಂ.ಚಂದ್ರಶೇಖರ್‌, ಜನಪದ ಕಲಾವಿದ ಜೋಗಿಲ ಸಿದ್ದರಾಜು, ಚಲನಚಿತ್ರ ನಟಿ ಅಭಿನಯ, ಆದರ್ಶ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ  ಕಿಕ್ಕೇರಿ ಕೃಷ್ಣಮೂರ್ತಿ ಸೇರಿದಂತೆ 20 ಮಂದಿ ಸಾಧಕರಿಗೆ ಕುವೆಂಪು ವಿಶ್ವ ಮಾನವ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next