ಬೆಂಗಳೂರು: ಫೇಸ್‌ಬುಕ್, ವಾಟ್ಸ್‌ಆಪ್‌ಗ್ಳಲ್ಲಿ ಇನ್ನು ಮುಂದೆ ಭಯೋತ್ಪಾದನೆ, ಸಂಚು ರೂಪಿಸುವುದು, ಸುಳ್ಳು ಸುದ್ದಿ ಹರಡುವುದು, ಪ್ರಶ್ನೆ ಪತ್ರಿಕೆ ಲೀಕ್‌ನಂತಹ ಕೃತ್ಯ ಮಾಡುವವರು ಸುಲಭವಾಗಿ ಸಿಕ್ಕಿಬೀಳಲಿದ್ದಾರೆ.
ಬೆಂಗಳೂರು ಮೂಲದ ಸ್ಪಾರ್ಟಪ್ ಒಂದು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆಫ್, ಲಿಂಕ್ಡ್ಇನ್, ಮೆಸೆಂಜರ್, ಟ್ವಿಟ್ಟರ್, ಸ್ಕೈಪ್, ಗೂಗಲ್ ಪ್ಲಸ್‌ಗಳಲ್ಲಿ ಭಯೋತ್ಪಾದನೆ, ಸುಳ್ಳು ಸುದ್ದಿ, ಡ್ರಗ್ಸ್, ಮಾನವ ಕಳ್ಳ ಸಾಗಣೆ, ಸಂಚು ರೂಪಿಸುವುದು ಹೀಗೆ ಇನ್ನಿತರೆ ಕೃತ್ಯಗಳಿಗೆ ಬ್ರೇಕ್ ಹಾಕಲು ವಿಶೇಷ ತಂತ್ರಾಂಶ ಅಭಿವೃದ್ಧಿಪಡಿಸುತ್ತಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಮೂರು ದಿನಗಳ ಟೆಕ್ ಸಮಿಟ್‌ನಲ್ಲಿ ಅನೇಕಾಸ್ತ್ರ ಸಂಸ್ಥೆಯು ಸೋಷಿಯಲ್ ಮೀಡಿಯಾ ಟ್ರಾಕಿಂಗ್ (ಎಸ್‌ಎಂಟಿ) ತಂತ್ರಾಂಶವನ್ನು ಪ್ರದರ್ಶನಕ್ಕೆ ಇರಿಸಿದೆ. ಈ ತಂತ್ರಾಂಶವು ರಾಜ್ಯದ ಪ್ರತಿಯೊಬ್ಬ ನಾಗರಿಕನ ಸಾಮಾಜಿಕ ಜಾಲತಾಣಗಳ ಮೇಲೆ ವಿಶೇಷ ನಿಗಾ ಹಿಡಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಡೆಯಲಿರುವ ಚರ್ಚೆಗಳು, ಸಂಭಾಷಣೆ, ಪ್ರತಿಭಟನೆ ಸಿದ್ಧತೆ ಹೀಗೆ ಯಾವುದೇ ಅಹಿತಕರ ಘಟಕಗಳಿಗೆ ಸಂಚು ರೂಪಿಸಿದರೂ ಸುಲಭವಾಗಿ ತಿಳಿಯಲಿದೆ.
ರಾಜ್ಯ ಪೊಲೀಸ್, ಗುಪ್ತಚರ ಹಾಗೂ ಸೈಬರ್ ಕ್ರೈಂ ಇಲಾಖೆಗಳೊಂದಿಗೆ ಸಂಸ್ಥೆಯು ಒಡಂಬಡಿಕೆಗೆ ಮುಂದಾಗಿದ್ದು, ಇದರಿಂದಾಗಿ ತಪ್ಪು ಮಾಡಿದವರು ಸುಲಭವಾಗಿ ಪೊಲೀಸರಿಗೆ ದೊರೆಯಲಿದ್ದಾರೆ. ವಿವಿಧ ದಂಧೆಗಳಿಗೆ ಬಳಸುವಂತಹ ಕೋಡ್ ವರ್ಡ್‌ಗಳನ್ನು ತಂತ್ರಾಂಶದಲ್ಲಿ ಅಳವಡಿಸಿರುವುದರಿಂದ ಅಂತಹ ಕೋಡ್‌ವರ್ಡ್‌ಗಳು ಚರ್ಚೆಯಾದ ಕೂಡಲೇ ಮೇಸೆಜ್ ನೀಡಲಿದೆ.
ಪತ್ತೆ ಮಾಡುವುದು ಹೇಗೆ?: ಭಯೋತ್ಪಾದನೆ, ಸಂಚು, ಡ್ರಗ್ಸ್, ಮಾನವ ಕಳ್ಳಸಗಾಣಿಕೆಗೆ ಸಂಬಂಧಿಸಿದಂತೆ ಬಳಸುವ ಪದಗಳು ಎಲ್ಲಿಯಾದರೂ ಚರ್ಚೆಯಾದ ಕೂಡಲೇ ತಂತ್ರಾಂಶ ಸ್ವಯಂಚಾಲಿತವಾಗಿ ಸಂದೇಶ ರವಾನಿಸಲಿದೆ. ಅದನ್ನು ಆಧರಿಸಿದ ಆ ಪದ ಯಾರು ಬಳಕೆ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಈ ವೇಳೆ ವ್ಯಕ್ತಿಯ ಇಂಟರ್‌ನೆಟ್ ಬಳಕೆ ಮಾಡುತ್ತಿರುವ ಐಪಿ ವಿಳಾಸ, ಲೊಕೇಷನ್, ಮೊಬೈಲ್‌ನ ಐಎಂಇಐ ಸಂಖ್ಯೆ, ಈ ಹಿಂದೆ ಹುಡುಕಿದ ಮಾಹಿತಿ, ರವಾನಿಸಿದ ಸಂದೇಶಗಳನ್ನು ಪರಿಶೀಲಿಸಿದ ನಂತರದಲ್ಲಿ ಆ ಮಾಹಿತಿಯನ್ನು ಪೊಲೀಸರಿಗೆ ರವಾನಿಸಲಾಗುತ್ತದೆ.
ಸುಳ್ಳು ಸುದ್ದಿ ಹರಡುವವರ ಪತ್ತೆ: ಇತ್ತೀಚಿನ ದಿನಗಳಲ್ಲಿ ಸುಳ್ಳು ಸುದ್ದಿಗಳು ಹಾಗೂ ತೇಜೋವಧೆ ಮಾಡುವಂತಹ ಪೋಸ್ಟ್‌ಗಳು ಹೆಚ್ಚು ಹರಿದಾಡುತ್ತಿವೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳನ್ನು ಈವರೆಗೆ ಹುಡುಕಲು ಆಗಿಲ್ಲ. ಆ ಹಿನ್ನೆಲೆಯಲ್ಲಿ ಈ ತಂತ್ರಾಂಶ ಸೈಬರ್ ಕ್ರೈಂ ಪೊಲೀಸರಿಗೆ ಹೆಚ್ಚಿನ ಅನುಕೂಲವಾಗಲಿದೆ. ತಂತ್ರಾಂಶದಿಂದಾಗಿ ಸುಳ್ಳು ಸುದ್ದಿ ಸೃಷ್ಟಿ ಮಾಡಿದ್ದು ಯಾರು, ಅದು ಹೇಗೆ ಹರಡಿದೆ ಎಂಬ ಕೂಲಂಕುಷ ಮಾಹಿತಿ ದೊರೆಯಲಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಶೀಘ್ರ ಪತ್ತೆ: ಪರೀಕ್ಷೆಯ ಸಂದರ್ಭಗಳಲ್ಲಿ ವಾಟ್ಸ್‌ಆಪ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುವಂತಹ ಫೋಟೋಗಳ ಮೇಲೆ ಈ ತಂತ್ರಾಂಶ ನಿಗಾ ವಹಿಸಲಿದ್ದು, ಪ್ರಶ್ನೆ ಪತ್ರಿಕೆಯ ಸೋರಿಕೆಯಾಗಿರುವುದು ಸುಲಭವಾಗಿ ತಿಳಿಯಲಿದೆ. ಇದರೊಂದಿಗೆ ಧಾರವಾಡ ವಿಶ್ವವಿದ್ಯಾಲಯದ ಅಂಕಪಟ್ಟಿಯ ಸಂಪೂರ್ಣ ಮಾಹಿತಿಯನ್ನು ಪಡೆದಿದ್ದು, ಯಾವುದೇ ಸಂಸ್ಥೆಗೆ ಸಲ್ಲಿಸಿರುವ ಅಂಕಿಪಟ್ಟಿ ನಕಲಿಯೇ, ಅಸಲಿಯೇ ಎಂಬುದನ್ನು ಐದು ನಿಮಿಷಗಳಲ್ಲಿ ತಿಳಿಸುತ್ತೇವೆ ಎನ್ನುತ್ತಾರೆ ಸಂಸ್ಥೆಯ ವಲ್ಲಭ ದೇಸಾಯಿ.
* ವೆಂ. ಸುನೀಲ್‌ಕುಮಾರ್