Advertisement

ತಂತ್ರಾಂಶ ಲೋಪ; ರಾಗಿ ಮಾರಾಟ ಕಗ್ಗಂಟು

09:02 PM Feb 03, 2020 | Lakshmi GovindaRaj |

ತುರುವೇಕೆರೆ: ತಾಲೂಕಿನಾದ್ಯಂತ ಕಳೆದ ಸಾಲಿನಲ್ಲಿ ಉತ್ತಮ ಮಳೆಯಾಗಿದ್ದು, ಕೃಷಿ ಇಲಾಖೆ ಅಂದಾಜಿನ ಪ್ರಕಾರ 3.45 ಸಾವಿರ ಟನ್‌ ರಾಗಿ ಉತ್ಪಾದನೆಯಾಗಲಿದ್ದು, ಆದರೆ ಖರೀದಿ ಕೇಂದ್ರದಲ್ಲಿ ತಾಂತ್ರಿಕ ಕಾರಣದಿಂದ ರೈತರು ಪರದಾಡುವಂತಾಗಿದೆ.

Advertisement

ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಜ.13ರಂದು ನಾಫೆಡ್‌ ಖರೀದಿ ಕೇಂದ್ರ ತೆರದಿದ್ದು, 3,150 ರೂ. ದರದಲ್ಲಿ ಕ್ವಿಂಟಲ್‌ ರಾಗಿ ಖರೀದಿಸುವುದಾಗಿ ಘೋಷಿಸಿದೆ. ಪ್ರಸ್ತುತ ಉತ್ಪದನಾ ವೆಚ್ಚಕ್ಕೆ ಹೋಲಿಸಿದರೆ ಈ ಬೆಲೆ ಕಡಿಮೆಯಾದರೂ ಮಾರುಕಟ್ಟೆ ಬೆಲೆಗಿಂತ ಉತ್ತಮ ಬೆಲೆಯಾಗಿದೆ. ಜ.13ರಿಂದ 27ವರೆಗೆ ಕೇವಲ 537 ರೈತರಷ್ಟೇ ಹೆಸರು ನೋಂದಾಯಿಸಿಕೊಂಡು ಟೋಕನ್‌ ಪಡೆದಿದ್ದಾರೆ. ಆದರೆ ಕೇಂದ್ರಕ್ಕೆ ಆಗಮಿಸಿದರೆ ತಾಂತ್ರಿಕ ಅಡಚಣೆ, ನಿಯಮ, ಮಾನದಂಡದ ಕಾರಣದಿಂದ ವಾಪಸ್‌ ಹೋಗಿದ್ದಾರೆ.

ತಾಂತ್ರಿಕ ತೊಂದರೆ: ರಾಗಿ ಮಾರಾಟ ಮಾಡಲು ಕೃಷಿ ಇಲಾಖೆಯ ಬೆಳೆ ತಂತ್ರಾಂಶದಲ್ಲಿ ರೈತರು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಕಂದಾಯ ಇಲಾಖೆ ನೀಡುವ ಪಹಣಿಯಲ್ಲಿ ರಾಗಿ ನಮೂದಾಗಿದ್ದರೂ, ಕೃಷಿ ಇಲಾಖೆ ಕೈಗೊಂಡಿರುವ ಬೆಳೆ ಸಮೀಕ್ಷೆಯಲ್ಲಿ ತೋಟಗಾರಿಕೆ ಬೆಳೆ ಎಂದು ನಮೂದಾಗಿದೆ. ರಾಗಿ ಬೆಳೆ ಬದಲು ತೋಟಗಾರಿಕೆ ಬೆಳೆ ನಮೂದಾಗಿರುವುದರಿಂದ ಖರೀದಿ ಕೇಂದ್ರದವರು ಬೆಳೆ ತಂತ್ರಾಂಶ ಸಂಖ್ಯೆ ತರಬೇಕೆಂದು ಸೂಚಿಸುತ್ತಾರೆ.

ಆದರೆ ಸಂಖ್ಯೆ ಇದ್ದವರಿಗೆ ಆಧಾರ್‌, ಖಾತೆ ಸಂಖ್ಯೆ ಹೊಂದಾಣಿಕೆ ಆಗುತ್ತಿಲ್ಲ. ತಾಲೂಕಿನಲ್ಲಿ ಶೇ.50ಕ್ಕೂ ಹೆಚ್ಚು ರೈತ ಕುಟುಂಬಗಳು ಹಲವು ಬೆಳೆಗಳೊಂದಿಗೆ ಮಿಶ್ರ ಬೆಳೆಯಾಗಿ ರಾಗಿ ಬೆಳೆಯುತಿದ್ದು, ಏಪ್ರಿಲ್‌ವರೆಗೆ ಖರೀದಿ ದಿನಾಂಕ ವಿಸ್ತರಿಸಿದರೆ ತಾಲೂಕಿನ ಕೃಷಿಕರು ರಾಗಿ ಕೇಂದ್ರಕ್ಕೆ ಮಾರಲು ಸಾಧ್ಯ ಎಂಬುದು ರೈತರ ಒಕ್ಕೂರಲ ಅಭಿಮತ.

ಕೃಷಿ ಇಲಾಖೆ ಅಂಕಿ ಅಂಶದ ಅನ್ವಯ 17.265 ಹೆಕ್ಟೇರ್‌ ರಾಗಿ ಬಿತ್ತನೆ ಕೈಗೊಂಡಿದ್ದು, ಅಂದಾಜಿನ ಪ್ರಕಾರ 3.45 ಸಾವಿರ ಟನ್‌ ರಾಗಿ ಇಳುವರಿ ಸಾಧ್ಯತೆ ಇದೆ. ಕುಟುಂಬ ನಿರ್ವಹಣೆಗೆ ಸ್ವಲ್ಪ ರಾಗಿ ದಾಸ್ತಾನು ಇರಿಸಿಕೊಂಡರೂ ಸುಮಾರು 3 ಸಾವಿರ ಟನ್‌ ರಾಗಿ ನಫೆಡ್‌ ಕೇಂದ್ರ ಖರೀದಿಸಬೇಕಾಗುತ್ತದೆ.

Advertisement

ಆನ್‌ಲೈನ್‌ ಸಮಸ್ಯೆಯಿಂದ ರೈತರು ಪರದಾಡುವಂತಾಗಿದೆ. ಶೇ. 60 ರೈತರು ತೆಂಗಿನೊಂದಿಗೆ ಮಿಶ್ರ ಬೆಳೆಯಾಗಿ ರಾಗಿ ಬೆಳೆಯುತ್ತಿದ್ದು, ಆನ್‌ಲೈನ್‌ನಲ್ಲಿ ತೆಂಗು ನಮೂದಾಗಿದೆ. ಹೀಗಾಗಿ ರಾಗಿ ಖರೀದಿ ಕೇಂದ್ರಕ್ಕೆ ಮಾರಾಟ ಮಾಡಲು ಆಗುತ್ತಿಲ್ಲ. ತಾಂತ್ರಿಕ ತೊಂದರೆ ಇಲಾಖೆ ಸರಿಪಡಿಸದಿದ್ದಲ್ಲಿ ಕೃಷಿ ಇಲಾಖೆ ಎದುರು ಪ್ರತಿಭಟಿಸಬೇಕಾಗುತ್ತದೆ.
-ಬಿ.ಎಸ್‌. ರವೀಂದ್ರ ಕುಮಾರ್‌, ಕೃಷಿಕ ಬಿಗನೇಹಳ್ಳಿ

ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಗಳ ಸಿಬ್ಬಂದಿ ಬೆಳೆ ಪ್ರದೇಶಗಳಿಗೆ ತೆರಳಿ ಬೆಳೆ ಬಗ್ಗೆ ಸಮೀಕ್ಷೆ ಕೈಗೊಂಡಿದ್ದಾರೆ. ಅದನ್ನೇ ಬೆಳೆ ಕಾಲಂನಲ್ಲಿ ನಮೂದಿಸಿ ಆಧಾರ್‌ ಜೋಡಣೆಯೊಂದಿಗೆ ತಂತ್ರಾಂಶದಲ್ಲಿ ಅಳವಡಿಸಿರುತ್ತಾರೆ. ಸಣ್ಣ ಹಿಡುವಳಿ ರೈತರ ಬೆಳೆ ತಂತ್ರಾಂಶದ ಸಂಖ್ಯೆ ಆನ್‌ಲೈನ್‌ನಲ್ಲಿ ತೆರೆದಾಗ ಪಹಣಿ ಒಟ್ಟು ಹಿಡುವಳಿ ಕೃಷಿ ಜಮೀನು ಹಾಗೂ ಯಾವ ಬೆಳೆ ಕೈಗೊಂಡಿದ್ದಾರೆ ಎಂಬುದರ ಪೂರ್ಣ ವಿವರ ಲಭ್ಯವಾಗುತ್ತದೆ. ಆ ಮಾನದಂಡದ ಆಧಾರದ ಮೇಲೆ ರಾಗಿ ಖರೀದಿಸಬೇಕಾಗಿದೆ.
-ನಾರಾಯಣ್‌, ರಾಗಿ ಖರೀದಿ ಕೇಂದ್ರದ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next