Advertisement

ಸೈಬರ್‌ ಕ್ರೈಂ ಪತ್ತೆಗೆ ಸಾಫ್ಟ್ ವೇರ್‌ ಎಂಜಿನಿಯರ್‌ಗಳು

10:01 AM Dec 20, 2019 | mahesh |

ಉಡುಪಿ: ಹೆಚ್ಚುತ್ತಿರುವ ಸೈಬರ್‌ ಅಪರಾಧ ಪ್ರಕರಣಗಳನ್ನು ನಿಗ್ರಹಿಸುವ ಉದ್ದೇಶದಿಂದ ಅಧಿಕ ಸಂಖ್ಯೆಯಲ್ಲಿ ಸಾಫ್ಟ್ ವೇರ್‌ ಎಂಜಿನಿಯರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲು ಪೊಲೀಸ್‌ ಇಲಾಖೆ ಮುಂದಾಗಿದೆ. ಜತೆಗೆ ಇಲಾಖೆಯನ್ನು ಮತ್ತಷ್ಟು ಬಲಪಡಿಸುವುದಕ್ಕಾಗಿ ಸೈಬರ್‌ ಕ್ರೈಂ, ಎಕಾನಮಿಕ್‌ ಅಫೆನ್ಸಸ್‌ ಆ್ಯಂಡ್‌ ನಾರ್ಕೋಟಿಕ್ಸ್‌ (ಸೆನ್‌) ಪೊಲೀಸ್‌ ವಿಭಾಗಕ್ಕೆ ಸುಮಾರು 6 ಸಾವಿರ ಪೊಲೀಸರನ್ನು ಭರ್ತಿ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.

Advertisement

ರಾಜ್ಯದಲ್ಲಿ ಡಿಸೆಂಬರ್‌ ವರೆಗೆ 1,240 ಸೈಬರ್‌ ಅಪರಾಧ ಪ್ರಕರಣಗಳು ದಾಖಲಾಗಿವೆ. ವೈಯಕ್ತಿಕ ಮಾಹಿತಿ ಪಡೆದು ಬ್ಯಾಂಕ್‌ ಖಾತೆ ವಿವರ ಸಂಗ್ರಹಿಸಿ ಕೋಟ್ಯಂತರ ರೂ. ಲಪಟಾಯಿಸಿರುವಂತಹ ಹಲವಾರು ಘಟನೆಗಳು ಈಗಾಗಲೇ ನಡೆದಿವೆ. ಆನ್‌ಲೈನ್‌ ಬೆದರಿಕೆ, ಅಪರಾಧ, ಸೈಬರ್‌ ಪೀಡನೆ, ಡೇಟಾ ಹ್ಯಾಕಿಂಗ್‌ ಕೂಡ ಹೆಚ್ಚುತ್ತಿದೆ. ಇಂತಹ ಪ್ರಕರಣಗಳನ್ನು ಪತ್ತೆಹಚ್ಚುವುದು ಪೊಲೀಸರಿಗೆ ಸುಲಭಸಾಧ್ಯವಲ್ಲ. ಆದ್ದರಿಂದಲೇ ಇಲಾಖೆಗೆ ಈಗ ಸಾಫ್ಟ್ವೇರ್‌ ಎಂಜಿನಿಯರ್‌ಗಳ ನೆರವು ಪಡೆಯುವುದು ಅನಿವಾರ್ಯವಾಗಿದೆ.

ಎಫ್ಎಸ್‌ಎಲ್‌ ಲ್ಯಾಬ್‌ ಸಂಖ್ಯೆಯೂ ಹೆಚ್ಚಳ
ಸೂಕ್ಷ್ಮ ಅಪರಾಧ ಪ್ರಕರಣಗಳನ್ನು ಪತ್ತೆಹಚ್ಚಲು ಹೆಚ್ಚಿನ ತನಿಖೆಗೆ ಸಹಕರಿಸುವ ವಿಧಿವಿಜ್ಞಾನ ಪ್ರಯೋಗಾಲಯ (ಎಫ್ಎಸ್‌ಎಲ್‌ ಲ್ಯಾಬ್‌)ಗಳನ್ನು ಪ್ರತೀ ಜಿಲ್ಲೆಯಲ್ಲೂ ಸ್ಥಾಪಿಸುವ ಉದ್ದೇಶವನ್ನೂ ರಾಜ್ಯ ಸರಕಾರ ಹೊಂದಿದೆ. ಸದ್ಯ ರಾಜ್ಯದ ಮಟ್ಟಿಗೆ ಬೆಂಗಳೂರಿನಲ್ಲಿ ಇಂಥ ಲ್ಯಾಬ್‌ ಇದೆ. ಇದನ್ನು ಹೊರತುಪಡಿಸಿದರೆ ಮಂಗಳೂರು, ಬೆಳಗಾವಿ ಮತ್ತು ದಾವಣಗೆರೆಯಲ್ಲಿ ಮಾತ್ರ ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯಗಳಿವೆ.

ವಿದೇಶದಿಂದಲೂ ಕನ್ನ
ಬೇನಾಮಿ ಅಕೌಂಟ್‌ಗಳಿಂದ ಹಲವಾರು ಸಂದೇಶಗಳು ಸಾಮಾಜಿಕ ಜಾಲತಾಣಗಳಿಗೆ ಬರುತ್ತಿವೆ. ಇದರಲ್ಲಿ ಹಲವು ಸಂದೇಶಗಳು ವಿದೇಶಿ ಮೂಲದವು. ಹಲವು ಕಿಡಿಗೇಡಿಗಳು ವಿದೇಶದಲ್ಲಿ ಇದ್ದುಕೊಂಡು ಈ ರೀತಿ ಮಾಡಿದರೆ ಇನ್ನು ಕೆಲವರು ದೇಶದೊಳಗಿದ್ದೇ ಲಿಂಕ್‌ಗಳನ್ನು ಕಳುಹಿಸಿ ಸಾಮಾಜಿಕ ತಾಣಗಳನ್ನು ಬಳಸುವವರ ವೈಯಕ್ತಿಕ ಮಾಹಿತಿಗಳಿಗೆ ಕನ್ನ ಹಾಕುತ್ತಿದ್ದಾರೆ.

ವಿಜ್ಞಾನಿಗಳ ನೇಮಕಾತಿಗೂ ಚಿಂತನೆ!
ಕಠಿನ ಪ್ರಕರಣಗಳನ್ನು ಭೇದಿಸಲು ಸಾಫ್ಟ್ ವೇರ್‌ ಎಂಜಿನಿಯರ್‌ಗಳಂತೆ ವಿಧಿವಿಜ್ಞಾನ ತಂತ್ರಜ್ಞಾನ ಪರಿಣಿತರ ಆವಶ್ಯಕತೆಯೂ ಇದೆ. ಹೀಗಾಗಿ ಪೊಲೀಸರ ತಂಡದೊಂದಿಗೆ ಸಾಫ್ಟ್ ವೇರ್‌ ಎಂಜಿನಿಯರ್‌, ವಿಜ್ಞಾನಿ, ಸಂಬಂಧಿತ ಮೂಲ ಸೌಕರ್ಯಗಳನ್ನು ಒದಗಿಸುವ ಪರಿಣತರನ್ನು ಸೇರಿಸುವ ಚಿಂತನೆ ಇದ್ದು, ಇನ್ನಷ್ಟೆ ಅಂತಿಮವಾಗಬೇಕಿದೆ.

Advertisement

ಗುತ್ತಿಗೆ ಆಧಾರದಲ್ಲಿ ನೇಮಕ
ಸೈಬರ್‌ ಅಪರಾಧಗಳನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ತಡೆಯಲು ಮುಂದಾಗಿದೆ. ಇದರ ಭಾಗವಾಗಿ ಪೊಲೀಸ್‌ ಇಲಾಖೆಗೆ ಸಾಫ್ಟ್ವೇರ್‌ ಎಂಜಿನಿಯರ್‌ಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ.
– ಬಸವರಾಜ ಬೊಮ್ಮಾಯಿ, ಗೃಹ ಸಚಿವರು

- ಪುನೀತ್‌ ಸಾಲ್ಯಾನ್‌

Advertisement

Udayavani is now on Telegram. Click here to join our channel and stay updated with the latest news.

Next