“ಜಸ್ಟ್ ಮದ್ವೇಲಿ’ ಎಂಬ ಸಿನಿಮಾ ಬಗ್ಗೆ ನೀವು ಕೇಳಿರಬಹುದು. ಮೂರ್‍ನಾಲ್ಕು ವರ್ಷಗಳ ಹಿಂದೆ ಈ ಸಿನಿಮಾ ಬಂದಿತ್ತು. ಹರೀಶ್ ಜಲಗೆರೆ ಈ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟಿದ್ದರು. ಆ್ಯಕ್ಷನ್ ಹೀರೋ ಆಗುವ ಲಕ್ಷಣವಿದ್ದ ಅವರು, ಆ ಚಿತ್ರದಲ್ಲಿ ಲವರ್‌ಬಾಯ್ ಆಗಿದ್ದರು. ಆದರೆ, ಅವರ ಆಸೆ ಹಾಗೆಯೇ ಇತ್ತು. ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ ಮಾಡಬೇಕೆಂಬ ಅವರ ಆಸೆಯನ್ನು ಈಗ ಈಡೇರಿಸಿಕೊಂಡಿದ್ದಾರೆ. ಅದು “ರಾಜಣ್ಣನ ಮಗ’ ಸಿನಿಮಾ ಮೂಲಕ. ಹೌದು, ಹರೀಶ್ ಈಗ “ರಾಜಣ್ಣನ ಮಗ’ ಎಂಬ ಸಿನಿಮಾ ಮಾಡಿದ್ದಾರೆ. ಕೋಲಾರ ಸೀನು ಈ ಸಿನಿಮಾದ ನಿರ್ದೇಶಕರು. ಹಿಂದೆ ಹರೀಶ್ ಅವರಿಗೆ “ಜಸ್ಟ್ ಮದ್ವೇಲಿ’ ಕೂಡಾ ಇವರೇ ಮಾಡಿದ್ದರು. ಈ ಕಥೆಯನ್ನು ಹರೀಶ್ ಅವರಿಗಾಗಿಯೇ ಮಾಡಿದ್ದಂತೆ.
“”ಜಸ್ಟ್ ಮದ್ವೇಲಿ’ ಸಮಯದಲ್ಲೇ ಆ್ಯಕ್ಷನ್ ಸಿನಿಮ ಮಾಡುವ ಬಗ್ಗೆ ಮಾತನಾಡಿಕೊಂಡಿದ್ದೆವು. ಈಗ ಅದು ಈಡೇರಿದೆ. ಹರೀಶ್ ಅವರಿಗಾಗಿಯೇ ಈ ಕಥೆಯನ್ನು ಸಿದ್ಧಪಡಿಸಿದ್ದೇನೆ’ ಎಂದರು ಸೀನು. ಇರುವೆ ಸಾಯಿಸಿಸೋದು ಕೂಡಾ ಪಾಪದ ಕೆಲಸ ಎಂದುಕೊಂಡಿರುವ, ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿರುವ ತಂದೆಯ ಮಗನೊಬ್ಬ ಅನಿವಾರ್ಯ ಕಾರಣದಿಂದ ಘಟನೆಯೊಂದಕ್ಕೆ ಸಿಲುಕಿ ಜೈಲಿಗೆ ಹೋಗಿ ಬಂದ ನಂತರ ಸಮಾಜ, ಕುಟುಂಬ ಆ ಮಗನನ್ನು ಹೇಗೆ ನೋಡುತ್ತದೆ, ಮುಂದೆ ಆತ ಯಾವ ದಾರಿ ತುಳಿಯುತ್ತಾನೆಂಬ ಅಂಶದೊಂದಿಗೆ ಕಥೆ ಸಾಗುತ್ತದೆಯಂತೆ. ಮುಖ್ಯವಾಗಿ ಇದು ತಂದೆ-ಮಗನ ಬಾಂಧವ್ಯದ ಕತೆ ಎನ್ನಲು ಸೀನು ಮರೆಯಲಿಲ್ಲ. ಇನ್ನು, ಆರಂಭದಲ್ಲಿ ಚಿತ್ರಕ್ಕೆ “ರಾಜಣ್ಣನ ಮಗ’ ಟೈಟಲ್ ಕೇಳಿದಾಗ, ಮಂಡಳಿ ಮೊದಲು ಟೈಟಲ್ ಕೊಡೋದಿಲ್ಲ ಎಂದಿತ್ತಂತೆ. ಆ ನಂತರ ಸಿನಿಮಾದ ಸ್ಕ್ರಿಪ್ಟ್ ಕೊಟ್ಟ ನಂತರ, ನೋಡಿ ಈ ಟೈಟಲ್ ಕೊಟ್ಟಿತು ಎಂದು ಟೈಟಲ್ ಸಿಕ್ಕ ಬಗ್ಗೆಯೂ ಹೇಳಿಕೊಂಡರು ಸೀನು.
ನಾಯಕ ಹರೀಶ್ ಅವರಿಗೆ ಮೊದಲು ಕೋಲಾರ ಸೀನು ಹೇಳಿದ ಕಥೆ ಅರ್ಥವಾಗಲಿಲ್ಲವಂತೆ. ಆ ನಂತರ ಸರಿಯಾಗಿ ಕಥೆ, ಪಾತ್ರದ ಬಗ್ಗೆ ಕೇಳಿದ ನಂತರ ಇಷ್ಟವಾಗಿ ಒಪ್ಪಿಕೊಂಡರಂತೆ. “ಇಲ್ಲಿ ತಂದೆ-ಮಗನ ಸೆಂಟಿಮೆಂಟ್ ಇದೆ. ಚಿತ್ರದಲ್ಲಿ ಅನುಭವಿ ಕಲಾವಿದರು ನಟಿಸಿದ್ದಾರೆ. ಅವರ ಬೆಂಬಲದಿಂದ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದೇನೆ’ ಎಂದರು. ಅಂದಹಾಗೆ, ಈ ಚಿತ್ರದ ನಿರ್ಮಾಣ ಕೂಡಾ ಅವರದೇ. ಚಿತ್ರದಲ್ಲಿ ಆರು ಫೈಟ್‌ಗಳಿವೆಯಂತೆ. ಚಿತ್ರಕ್ಕೆ ಅಕ್ಷತಾ ನಾಯಕಿ. ಅವರಿಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ.
ತಂದೆಯ ಪಾತ್ರ ಮಾಡಿರುವ ಚರಣ್‌ರಾಜ್ ಅವರಿಗೆ ಹೊಸಬರ ತಂಡದ ಕೆಲಸ ತುಂಬಾ ಹಿಡಿಸಿತಂತೆ. “ಕೆಲವು ನಿರ್ದೇಶಕರು ಕಥೆ ತುಂಬಾ ಚೆನ್ನಾಗಿ ಹೇಳುತ್ತಾರೆ. ಆದರೆ ಚೆನ್ನಾಗಿ ಸಿನಿಮಾ ಮಾಡಲ್ಲ. ಹಾಗಾಗಿ, ಸಹಜವಾಗಿಯೇ ಒಂದು ಭಯವಿತ್ತು. ಆದರೆ, ಕೋಲಾರ ಸೀನು ಮಾತ್ರ ಹೇಳಿದಂತೆ ಸಿನಿಮಾ ಮಾಡಿದ್ದಾರೆ. ನಾನು ಅವರಿಂದ ಈ ಮಟ್ಟದ ಕೆಲಸ ನಿರೀಕ್ಷಿಸಿರಲಿಲ್ಲ. ಡಬ್ಬಿಂಗ್ ಮಾಡುವಾಗ ಕಣ್ಣಲ್ಲಿ ನೀರು ಬಂತು. ಎಲ್ಲರಿಗೂ ಫೋನ್ ಮಾಡಿ ಸಿನಿಮಾ ಚೆನ್ನಾಗಿ ಬಂದಿರುವ ಬಗ್ಗೆ ಹೇಳಿದೆ. ಈ ಹಿಂದೆ ನಾನು ಹಲವು ಸಿನಿಮಾಗಳಲ್ಲಿ ತಂದೆ ಪಾತ್ರ ಮಾಡಿದ್ದೇನೆ. ಆದರೆ, ಈ ಪಾತ್ರ ತುಂಬಾ ಹೊಸತನದಿಂದ ಕೂಡಿದೆ’ ಎಂದು ಹೊಸಬರ ಬೆನ್ನುತಟ್ಟಿದರು ಚರಣ್‌ರಾಜ್. ಚಿತ್ರದಲ್ಲಿ ನಟಿಸಿದ ಕರಿಸುಬ್ಬು ಕೂಡಾ ತಮ್ಮ ಅನುಭವ ಹಂಚಿಕೊಂಡರು.