ಶಿರಸಿ: ದೀಪಾವಳಿ ಸನಾತನ ಸಂಸ್ಕೃತಿ ಪ್ರತೀಕ ಎಂದು ಉಡುಪಿ ಅಷ್ಟ ಮಠಗಳಲ್ಲಿ ಒಂದಾದ ಸೋದೆ ವಾದಿರಾಜ ಮಠಾಧೀಶ ಶ್ರೀ ವಿಶ್ವವಲ್ಲಭ ಶ್ರೀಪಾದರು ನುಡಿದರು.
ಅವರು ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಸೋಮವಾರ ಮಠದ ಆವಾರದಲ್ಲಿ ಇರುವ ಗೋ ಶಾಲೆಯಲ್ಲಿ ಗೋ ಗ್ರಾಸ ನೀಡಿ ಆಶೀರ್ವಚನ ನುಡಿದರು.
ದೀಪಾವಳಿ ಅಂದರೆ ಕೇವಲ ದೀಪಗಳ ಸಮೂಹ ಮಾತ್ರವಲ್ಲ. ಇದೊಂದು ಹಬ್ಬಗಳ ಸಮೂಹವೂ ಹೌದು. ಲಕ್ಷ್ಮೀಪೂಜೆ , ಬಲೀಂದ್ರಪೂಜೆ , ಗೋಪೂಜೆ ಹೀಗೆ ಸಾಲು ಸಾಲು ದೇವತಾರಾಧನೆಗಳು ನಡೆಯುವ ಹಬ್ಬ ಎಂದು ಬಣ್ಣಿಸಿದ ಶ್ರೀಗಳು ದೀಪಾವಳಿ ನಮ್ಮ ಸನಾತನ ಸಂಸ್ಕೃತಿಯ ಪ್ರತೀಕದ ಹಬ್ಬ ಎಂದರು.
ನರಕಾಸುರನನ್ನು ಶ್ರೀಕೃಷ್ಣ ಸಂಹರಿಸಿ ಸಾವಿರಾರು ಹೆಣ್ಣು ಮಕ್ಕಳನ್ನು ಸಂರಕ್ಷಿಸಿದ ದಿನ. ಈ ಸಂದರ್ಭದಲ್ಲಿ ದೇಶಕ್ಕೆ ಸಮೃದ್ಧಿ ಉಂಟಾಗಲಿ. ಸಮಸ್ತರೂ ಸುಖ ಭಾವದಿಂದ ಬಾಳುವಂತಾಗಲಿ ಎಂದು ನುಡಿದರು.
ಸಮಾಜದಲ್ಲಿ ಹೆಚ್ಚುತ್ತಿರುವ ಅಸುರ ಭಾವನೆಗಳು ದೂರವಾಗಲಿ. ಪ್ರತಿಯೊಬ್ಬರ ಬದುಕಿನಲ್ಲೂ ಸನ್ಮಂಗಲದ ಬೆಳಕು ಮೂಡುವ ಹಬ್ಬ ಇದಾಗಲಿ ಎಂದೂ ಶ್ರೀಗಳು ಆಶಿಸಿದರು.
ಈ ವೇಳೆ ಪ್ರಮುಖರಾದ ಮಧ್ವೇಶ ತಂತ್ರಿಗಳು, ವ್ಯವಸ್ಥಾಪಕ ಮಧುಸೂದನ ಪುತ್ರಾಯ , ಪಿಆರ್ ಓಗಳಾದ ಅಡವಿರಾಯ ಹಾಗೂ ಜಿ ವಾಸುದೇವ ಇತರರು ಇದ್ದರು.
ಇದನ್ನೂ ಓದಿ:Panaji: ಐದು ರಾಜ್ಯಗಳ ಚುನಾವಣೆಯನ್ನು ಬಿಜೆಪಿ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ