Advertisement

ಸಮಾಜದ ಸ್ವಾಸ್ಥ್ಯಕುರಿತ ಕಾಳಜಿಯ ಕತೆಗಳು

07:12 PM Apr 27, 2019 | mahesh |

ಕಾದಂಬರಿಕಾರ್ತಿ ಕೆ. ತಾರಾ ಭಟ್‌ ಈಗಾಗಲೇ ಅವ್ಯಕ್ತ, ಲೋಟಸ್‌ ಪಾಂಡ್‌ನ‌ಂಥ ಕಾದಂಬರಿಗಳ ಮೂಲಕ ಆಧುನಿಕ ಯುಗವೆನ್ನಿಸಿಕೊಂಡಿರುವ ಈ ಕಾಲದ ಸಿರಿವಂತ, ಸುಶಿಕ್ಷಿತ ಹಾಗೂ ವೃತ್ತಿ ಪರಿಣತ ವ್ಯಕ್ತಿಗಳ ಪೊಳ್ಳು “ಸಭ್ಯತೆ’ಯನ್ನು ಬಯಲಿಗೆಳೆಯುವ ಕೆಲಸ ಮಾಡಿದ್ದಾರೆ. ಅವರ ಗಾಳಿಯಲ್ಲಿ ಹೆಪ್ಪುಗಟ್ಟಿದ ಮೌನ ಎಂಬ ಕಥಾಸಂಕಲನದ ರಚನೆಗಳಲ್ಲಿ ಕೂಡ ಆಧುನಿಕರೆನಿಸಿಕೊಂಡವರ ವ್ಯಕ್ತಿತ್ವದಲ್ಲಿ ಹಾಸುಹೊಕ್ಕಾಗಿರುವ ಸಿನಿಕತೆ, ಹುಸಿ ನಡವಳಿಕೆಯ, “ವರ್ಗ’ ಪ್ರಜ್ಞೆಯ ವಿಕರಾಳ ಮುಖದ ಹಲವು ಛಾಯೆಗಳನ್ನು ಪರಿಚಯಿಸಿದ್ದಾರೆ.

Advertisement

ಪರಿಧಿಯನ್ನು ಅರಸುತ್ತ ಎಂಬ ಹೆಸರಿನ ಈ ಕಥಾಸಂಕಲನದಲ್ಲಿಯೂ ಅವರ ಈ ಪ್ರಯತ್ನ ಮುಂದುವರಿದಿದೆ. ಕುಟುಂಬ ಹಾಗೂ ಸಾಮಾಜಿಕ ಸಂಬಂಧಗಳಲ್ಲಿ ಕಂಡುಬರುವ ಅಂತರಕ್ಕೆ ಏನು ಕಾರಣ? ಎಂಬ ಮೂಲಭೂತ ಪ್ರಶ್ನೆಯನ್ನು ಇಲ್ಲಿನ 11 ಕಥೆಗಳು ಎತ್ತುತ್ತವೆ. ಇಲ್ಲಿನ ಪಾತ್ರಗಳು ಯಾವ ಯಾವುದೋ ಕಾರಣಗಳಿಂದ ಅತಂತ್ರವಾದವುಗಳು; ತಾವೆಸಗಿದ ತಪ್ಪೇನು ಎಂಬುದನ್ನು ತಿಳಿಯದೆ ಗೊಂದಲಕ್ಕೆ ಒಳಗಾಗುವಂಥವು. ಲೇಖಕಿ ಇಂಥ ಅಸಹಾಯಕ ಜೀವಗಳ ಸಮಸ್ಯೆಗಳಿಗೆ ಪರಿಹಾರ ಸೂಚಿಸದೆ, ಈ ಪಾತ್ರಗಳನ್ನು ಓದುಗರಾದ ನಮ್ಮ ಕೈಗೆ ಕೊಟ್ಟು ನಮ್ಮನ್ನು ನಿಜವಾದ ಅರ್ಥದಲ್ಲಿ “ಅಸ್ವಸ್ಥ’ರಾಗಿಸುತ್ತಾರೆ. ಇದೇ ಅವರ ಉದ್ದೇಶ ಕೂಡ!

ಕಥೆಗಾರಿಕೆಗೆ ಒಂದು ಸಿದ್ಧ ಚೌಕಟ್ಟು ಬೇಕು ಎಂದುಕೊಂಡು ಈ ಪುಸ್ತಕವನ್ನು ಕೈಗೆತ್ತಿಕೊಳ್ಳುವ ಓದುಗರಿಗೆ ಒಂದು “ಶಾಕ್‌’ ಕಾದಿದೆ. ಇಲ್ಲಿ ಮನಕಲಕುವ ವಸ್ತು ಇದೆ; ಪ್ರಬಂಧದಂತೆ ಓದಿಸಿಕೊಳ್ಳುವ ನಿರೂಪಣೆಯಿದೆ; ಬಗೆಹರಿಯಲೊಲ್ಲದ ಸಮಸ್ಯೆ ಇದೆ. ಈ ಸಮಸ್ಯೆ ವ್ಯಕ್ತಿಗಳದ್ದು ಮಾತ್ರವಲ್ಲ, ಇಡೀ ಒಟ್ಟು ಸಮಾಜದ್ದು ಎಂಬುದನ್ನು ಕಥೆಗಾರ್ತಿಗೆ ಹೇಳಬೇಕಾಗಿದೆ. ಶೀರ್ಷಿಕೆ ಕಥೆ, ಹಾಗೆಯೇ ಕಪ್ಪಾದ ಆಕಾಶ, ಬೋಳುಮರದ ಕೊಂಬೆಗಳು, ಅಪವರ್ಗಿ ನಾನಲ್ಲ, ನಿನ್ನ ತಾಯಿ ನಾನಾದ ತಪ್ಪಿಗೆ…, ಬಿರುಕು ಬಿಟ್ಟ ಭೂಮಿ ಮುಂತಾದ ಕಥೆಗಳು ನಮ್ಮನ್ನು ಕಾಡುವುದು ಈ ಕಾರಣಕ್ಕಾಗಿ. ಇವು ಒಂದು ಸಾಮಾಜಿಕ ವ್ಯವಸ್ಥೆಯ ಚದುರಿದ ಚಿತ್ರಗಳು. ಹೆಚ್ಚಿನ ಕಥೆಗಳು ಅವುಗಳಲ್ಲಿ ಚರ್ಚಿತವಾದ ಸಮಸ್ಯೆಗೆ ಉತ್ತರ ಸಿಗದಿರುವುದರಿಂದ ನಿರೂಪಣೆ “ಇನ್ನೂ ಇದೆ’ ಎಂಬ ಘಟ್ಟದಲ್ಲಿ ನಿಂತಂತೆ ಕಾಣುತ್ತದೆ.

ಹೆಣ್ಣು ಜೀವಗಳ ನೋವು-ನಿಟ್ಟುಸಿರುಗಳು ಹೆಚ್ಚಿನ ಕಥೆಗಳಲ್ಲಿ ಬಂದಿರುವುದು ಕೇವಲ “ಸ್ತ್ರೀವಾದಿ’ ಧೋರಣೆಯಿಂದಲ್ಲ; ಒಟ್ಟು ಸಮಾಜದ ಸ್ವಾಸ್ಥ ಕುರಿತ ಲೇಖಕಿಯ ಕಾಳಜಿಯಿಂದಾಗಿ ಎಂಬುದನ್ನು ಒತ್ತಿ ಹೇಳಬೇಕಾಗಿದೆ.

ಪರಿಧಿಯನ್ನು ಅರಸುತ್ತಾ…
(ಕಥೆಗಳು)
ಲೇ.: ಕೆ. ತಾರಾ ಭಟ್‌
ಪ್ರ.: ತೇಜು ಪಬ್ಲಿಕೇಷನ್ಸ್‌, ನಂ. 233, 7ನೆಯ “ಎ’ ಅಡ್ಡರಸ್ತೆ, ಶಾಸ್ತ್ರಿನಗರ, ಬೆಂಗಳೂರು-560028
ಮೊದಲ ಮುದ್ರಣ: 2018 ಬೆಲೆ: ರೂ. 70

Advertisement

ಜಕಾ

Advertisement

Udayavani is now on Telegram. Click here to join our channel and stay updated with the latest news.

Next