ರಾಯಚೂರು: ಹಣದಾಸೆಗೆ ನಕಲಿ ನಾಯಕರನ್ನು ಕರೆಯಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಕೃತ್ಯವನ್ನು ಸಮಾಜದ ನಾಯಕರು ಬಿಡಬೇಕು. ಸಮಾಜ ಇಬ್ಭಾಗ ಮಾಡುವ ಯಾವುದೇ ಶಕ್ತಿಗಳಿಗೆ ಅವಕಾಶ ನೀಡುವುದಿಲ್ಲ ಎಂದು ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಹೇಳಿದರು.
ನಗರದ ರಂಗಮಂದಿರದಲ್ಲಿ ರವಿವಾರ ನಡೆದ ವಿಶ್ವಕರ್ಮ ಬೃಹತ್ ಯುವ ಸಮಾವೇಶ ಹಾಗೂ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಯಾವ ಸಮಾಜ ರಾಜಕೀಯವಾಗಿ ಸಾಮರ್ಥ್ಯ ಹೊಂದುತ್ತದೆಯೋ ಅದು ಪ್ರಗತಿ ಸಾಧಿಸಲಿದೆ. ಆ ದಿಸೆಯಲ್ಲಿ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಆದರೆ, ಸಮಾಜದ ಹೆಸರಿನಲ್ಲಿ ವಂಚಿಸುವವರ ಬಗ್ಗೆ ಎಚ್ಚರ ಇರಲಿ. ಯಾವುದೋ ವ್ಯಕ್ತಿಗೆ ಪ್ರಶಸ್ತಿ ಪ್ರದಾನ ಮಾಡಲು ನನ್ನನ್ನು ಆಹ್ವಾನಿಸುವುದು ಯಾವ ನ್ಯಾಯ? ಯಾವುದೇ ಕಾರ್ಯಕ್ರಮ ಮಾಡಿದರೆ ಅದರಿಂದ ಸಮಾಜಕ್ಕೆ ಉಪಯೋಗ ಆಗಬೇಕು. ಆದರೆ, ಹಣ
ಮಾಡುವ ದುರುದ್ದೇಶ ಇರಕೂಡದು ಎಂದು ಟೀಕಿಸಿದರು.
ನಾನು ಸಮಾಜಕ್ಕಾಗಿ ಸ್ವಾರ್ಥವಿಲ್ಲದೆ ದುಡಿಯುತ್ತಿದ್ದೇನೆ. ಸರ್ಕಾರದ ಸೌಲಭ್ಯ ಕಲ್ಪಿಸಲು ಶ್ರಮಿಸುತ್ತಿದ್ದೇನೆ. ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ನಿರಂತರ 18 ವರ್ಷ ಹೋರಾಡಲಾಯಿತು. ಅಂಥ ವೇಳೆ ಸಮಾಜ ವಿಘಟಿಸುವ ಶಕ್ತಿಗಳು ಎಲ್ಲಿದ್ದವು? ಎಂದು ಪ್ರಶ್ನಿಸಿದರು.
ಇರಕಲ್‌ನ ಬಸವಪ್ರಸಾದ ಶರಣರು, ಜವಳಗೇರಾದ ನಾಗಲಿಂಗಸ್ವಾಮಿ ಮಠದ ಶ್ರೀ ಸೂರ್ಯನಾರಾಯಣ ಸ್ವಾಮೀಜಿ, ಸುಲೇಪೇಟ್‌ನ ಸ್ವಾಮೀಜಿ, ಬಿಜೆಪಿ ಮುಖಂಡ ಎನ್.ಶಂಕರಪ್ಪ ವಕೀಲ ಮಾತನಾಡಿದರು. ವಿಶ್ವಕವ್ಯ ಮಹಾಸಭಾ ಜಿಲ್ಲಾಧ್ಯಕ್ಷ ಬ್ರಹ್ಮಗಣೇಶ, ಯುವ ಘಟಕದ ಜಿಲ್ಲಾಧ್ಯಕ್ಷ ರವೀಂದ್ರಕುಮಾರ, ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿರ್ದೇಶಕ ಎಂ.ಮಂಜುನಾಥ ಸೇರಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಇಂದು ಸಮಾಜಕ್ಕೆ ಅಭಿವೃದ್ಧಿ ನಿಗಮ ಸ್ಥಾಪಿಸಿದರೂ ಕೇವಲ 5 ಕೋಟಿ ಅನುದಾನ ನೀಡಲಾಗಿದೆ. ರಾಜ್ಯದಲ್ಲಿ 45 ಲಕ್ಷ ವಿಶ್ವಕರ್ಮ ಸಮಾಜದವರಿದ್ದು, ಈ ಅನುದಾನ ಹೆಚ್ಚಿಸುವಂತೆ ತಾಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡಬೇಕು.
ಕೆ.ಪಿ. ನಂಜುಂಡಿ,ಅಖೀಲ ಕರ್ನಾಟಕ ವಿಶ್ವಕರ್ಮ ಮಹಾಸಭಾರಾಜ್ಯಾಧ್ಯಕ್ಷ