ಯಳಂದೂರು: ತಾಲೂಕಿನಲ್ಲಿ ಬಹಿಷ್ಕಾರ ಪಿಡುಗು ಹೋಗುತ್ತಿಲ್ಲ ಎನ್ನುವುದಕ್ಕೆ ಮತ್ತೂಂದು ಸಾಮಾಜಿಕ ಬಹಿಷ್ಕಾರ ಸಾಕ್ಷಿಯಾಗಿದೆ. ಇತ್ತೀಚೆಗೆ ತಾಲೂಕಿನ ಹೊನ್ನೂರು, ಗಣಿಗನೂರು ಗ್ರಾಮದಲ್ಲಿ ಪ್ರಕರಣಗಳು ನಡೆದಿತ್ತು. ಇದು ಮರೆ ಮಾಚುವ ಮುನ್ನವೇ ದುಗ್ಗಹಟ್ಟಿ ಗ್ರಾಮದಲ್ಲಿ ಮತ್ತೂಂದು ಇಂತಹದ್ದೆ ಅಮಾನವೀಯ ಘಟನೆ ನಡೆದಿದೆ.
ಗ್ರಾಮದ ಪರಿಶಿಷ್ಟ ಜಾತಿಯ ಬೀದಿಯ ನಿವಾಸಿ ನಂಜುಂಡಸ್ವಾಮಿ, ಸರೋಜಮ್ಮ ದಂಪತಿ ಕುಟುಂಬಕ್ಕೆ ಸ್ವಜಾತಿಯವರೇ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ತಹಶೀಲ್ದಾರ್ ಹಾಗೂ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಬಹಿಷ್ಕಾರದ ಹಿನ್ನೆಲೆ: ದುಗ್ಗಹಟ್ಟಿ ಗ್ರಾಮದ ಹೊರ ಭಾಗದಲ್ಲಿರುವ ನಂಜುಂಡಸ್ವಾಮಿಗೆ ಸೇರಿರುವ ಸರ್ವೆ ನಂ 9/7ರಲ್ಲಿನ 1.01 ಎಕರೆ ಜಮೀನನ್ನು ನಿವೇಶನ ಮಾಡುವಂತೆ ಇದೇ ಜನಾಂಗದ ಗ್ರಾಮ ಮುಖಂಡರು ಒತ್ತಡ ಹಾಕಿದ್ದರು. ಆದರೆ, ಇದಕ್ಕೆ ನಂಜುಂಡಸ್ವಾಮಿ ಒಪ್ಪದಿದ್ದಾಗ ಗ್ರಾಮದ ಚರಂಡಿ ನೀರನ್ನು ಕೃಷಿ ಭೂಮಿಗೆ ತುಂಬಿಸಿದ್ದಾರೆ. ಇದರಿಂದ ಈ ವ್ಯವಸಾಯದ ಭೂಮಿಯಲ್ಲಿ ಯಾವುದೇ ಫಸಲನ್ನು ಬೆಳೆಯಲು ಆಗುತ್ತಿಲ್ಲ. ಇದಕ್ಕಾಗಿ ಈ ಜನಾಂಗದ ಮುಖಂಡರು ನಂಜುಂಡ ಸ್ವಾಮಿ ಕುಟುಂಬವನ್ನು ಕೂಲಿ ಕೆಲಸಕ್ಕೆ ಕರೆಯಬಾರದು, ಶುಭ ಕಾರ್ಯಗಳಿಗೆ ಆಹ್ವಾನಿಸಬಾರದು, ಅಂಗಡಿಗಳಲ್ಲಿ ಸಾಮಗ್ರಿಗಳನ್ನು ನೀಡಬಾರದು. ಇವರನ್ನು ಮಾತನಾಡಿಸಿದರೆ 10 ಸಾವಿರ ರೂ. ದಂಡವನ್ನು ವಿಧಿಸುವಂತೆ ಫರ್ಮಾನು ಹೊರಡಿಸಿದ್ದಾರೆ. ಹಾಗಾಗಿ ನಮ್ಮ ಕುಟುಂಬ ಗ್ರಾಮದಲ್ಲಿ ವಾಸವಾಗಿರುವ ನಮ್ಮ ಕುಟುಂಬಕ್ಕೆ ಜೀವನ ಸಾಗಿಸುವುದು ಕಷ್ಟವಾಗಿದೆ ಎಂದು ಈ ದಂಪತಿ ದೂರು ಸಲ್ಲಿಸಿದ್ದಾರೆ.
ನಿರ್ಬಂಧ ಹೇರಿಲ್ಲ: ಈ ಬಗ್ಗೆ ಗ್ರಾಮದ ಮುಖಂಡರು ಪ್ರತಿಕ್ರಿಯಿಸಿ, ಗ್ರಾಮದಲ್ಲಿ ನಂಜುಂಡಸ್ವಾಮಿ ಕುಟುಂಬಕ್ಕೆ ನಾವು ಯಾವುದೇ ನಿರ್ಬಂಧ ಹೇರಿಲ್ಲ. ಇವರ ಆರೋಪ ನಿರಾಧಾರವಾಗಿದೆ. ವೈಯುಕ್ತಿಕ ವಿಚಾರವಾಗಿ ಗೊಂದಲ ಇರುವುದರಿಂದ ಇವರು ಆರೋಪಿಸುತ್ತಿರುವುದು ಸಮಂಜಸವಲ್ಲ ಎಂದು ತಿಳಿಸಿದ್ದಾರೆ.
ಈ ಹಿಂದೆ ಜಾಗದ ವಿಚಾರವಾಗಿ 2015 ರಲ್ಲೇ ದೂರು ದಾಖಲಾಗಿದೆ. ಈ ಬಗ್ಗೆ ಈಗಾಗಲೇ ನಂಜುಂಡಸ್ವಾಮಿ ನೀಡಿರುವ ದೂರು ದಾಖಲಿಸಿಕೊಳ್ಳಲಾಗಿದ್ದು, ಸೋಮವಾರ ಇಬ್ಬರನ್ನೂಕೂರಿಸಿ ಈ ಸಮಸ್ಯೆಯನ್ನು ಬಗೆಹರಿಸಲುಕ್ರಮ ವಹಿಸಲಾಗುವುದು.
– ಸುದರ್ಶನ್, ತಹಶೀಲ್ದಾರ್