Advertisement

ಸುತ್ತೂರು ಶ್ರೀಗಳ ಸಾಮಾಜಿಕ ಕಾರ್ಯ ಮಹತ್ತರ

10:27 AM Jan 12, 2019 | |

ಶಿವಮೊಗ್ಗ: ನನಗೆ ಜಪಾನ್‌ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ವಿಮಾನದಲ್ಲಿ ಹೋಗಲು ಹಣ ಇರಲಿಲ್ಲ. ಅದನ್ನು ನೀಡಿದ್ದು ಸುತ್ತೂರು ಶ್ರೀಗಳು ಎಂದು ಅಂತಾರಾಷ್ಟ್ರೀಯ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಯುವ ವಿಜ್ಞಾನಿ ಎನ್‌.ಎಂ.ಪ್ರತಾಪ್‌ ಹೇಳಿದರು.

Advertisement

ಸುತ್ತೂರು ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1059ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಪಾನ್‌ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಹೊರಟಾಗ ವಿಮಾನದಲ್ಲಿ ಸಾಗಿಸುವ ಲಗೇಜ್‌ಗೆ ಪ್ರತ್ಯೇಕ ದರ ವಿಧಿಸುವುಸುದು ಗೊತ್ತಿರಲಿಲ್ಲ.ಅದಕ್ಕೆ ಅಪ್ಪನ ಹತ್ತಿರ ಹಣ ಕೇಳಿದಾಗ ಇಲ್ಲ ಅಂದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿತ್ತು. ಅಮ್ಮನ ಹತ್ತಿರ ಕೇಳಿದಾಗ ಯೋಚನೆ ಮಾಡದೇ ಮಾಂಗಲ್ಯ ಸರ ತೆಗೆದುಕೊಟ್ಟರು. ಅದರಿಂದ ಬಂದ ಹಣದಲ್ಲಿ ಜಪಾನ್‌ಗೆ ತೆರಳಿದೆ ಎಂದರು.

ಮತ್ತೋರ್ವ ಸನ್ಮಾನಿತರಾದ ಡಾ| ಆಶಾ ಬೆನಕಪ್ಪ ಮಾತನಾಡಿ, ನಾನು ಇದೇ ಜಿಲ್ಲೆಯವಳೇ. ಇದೇ ನೆಲದಲ್ಲಿ ಸನ್ಮಾನ ಸಂತಸ ತಂದಿದೆ ಎಂದು ಗದ್ಗದಿತರಾದರು.

ಜಿಲ್ಲಾ ರಕ್ಷಣಾಧಿಕಾರಿ ಅಭಿನವ ಖರೆ ಮಾತನಾಡಿ, ಇಲ್ಲಿ ನಡೆದಿರುವ ಮಹೋತ್ಸವದಲ್ಲಿ ಪ್ರವಚನ ಆಲಿಸಲು 40-50 ವರ್ಷದವರೇ ಬಂದಿದ್ದೀರಿ. ನಿಮ್ಮ ಮಕ್ಕಳು, ಮೊಮ್ಮಕ್ಕಳು ಎಲ್ಲಿದ್ದಾರೆ? ಇಂತಹ ಪ್ರವಚನ ಮಕ್ಕಳು, ಮೊಮ್ಮಕ್ಕಳಿಗೆ ಅಗತ್ಯವಿದೆ. ನಾನು ಮಧ್ಯಪ್ರದೇಶದಿಂದ ಬಂದವನು. ಅಲ್ಲಿ ಯಾವುದೇ ಮಠಗಳಿಂದ ಶಾಲೆಗಳು ನಡೆಯುವುದಿಲ್ಲ. ಕರ್ನಾಟಕದಲ್ಲಿ ಮಾತ್ರ ಈ ಸಂಸೃ್ಕತಿ ಇದೆ. ರಾಜ್ಯದ ಅಭಿವೃದ್ಧಿಯಲ್ಲಿ ಮಠಗಳು ಅಮೂಲ್ಯ ಪಾತ್ರ ನಿಭಾಯಿಸುತ್ತಿವೆ ಎಂದರು.

Advertisement

ಸುತ್ತೂರು ಶ್ರೀ ಮೆಚ್ಚುಗೆ: ಈ ನೆಲದಲ್ಲಿ ಆಗಿ ಹೋದ ಅಲ್ಲಮ ಹಾಗೂ ಅಕ್ಕಮ್ಮ ಎಂದಿಗೂ ಅಜರಾಮರ. ಇಲ್ಲಿಂದ ಹೊರಟ ಅಲ್ಲಮ ಕಲ್ಯಾಣಕ್ಕೆ ಹೋದಾಗ ಅವರ ಅಂತಃಶಕ್ತಿಯ ಪರಿಚಯ ಇಡೀ ಜೀವ ಸಂಕುಲಕ್ಕೆ ತಿಳಿದಿತ್ತು. ಅಕ್ಕಮಹಾದೇವಿಯ ತಾತ್ವಿಕ ಶಕ್ತಿಯ ಪರಿಚಯವಾಗಿದ್ದೂ ಕಲ್ಯಾಣದಲ್ಲೇ. ಹೀಗಾಗಿ ಶಿವಮೊಗ್ಗ ವಿಶೇಷ ಸ್ಥಳ ಎನಿಸಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ರೈತ ಸಂಘಕ್ಕೆ ಶಕ್ತಿ ನೀಡಿದ್ದು ಶಿವಮೊಗ್ಗ. ಇಂದು ರಾಜ್ಯದೆಲ್ಲೆಡೆ ಹಸಿರು ಶಾಲು ಹೊದ್ದು ರೈತರು ಸಂಘಟಿತರಾಗಿ ಹೊರಾಟ ನಡೆಸುತ್ತಿದ್ದರೆ ಅದಕ್ಕೆ ಬಲ ನೀಡಿದ್ದು ಶಿವಮೊಗ್ಗ ಜಿಲ್ಲೆ. ರುದ್ರಪ್ಪನವರ ಸಂಘಟನಾ ಚತುರತೆಯಿಂದಾಗಿ ರೈತ ಸಂಘ ಸದೃಢವಾಗಿ ಬೆಳೆದಿತ್ತು ಎಂದು ತಿಳಿಸಿದರು.

ಬಿಎಸ್‌ವೈ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇತ್ತು. ಕೃಷಿಗೆ ನೀರಿಲ್ಲದೇ ಗುಳೆ ಹೋಗುತ್ತಿದ್ದರು. ಅಂದು ಅವರು ರೂಪಿಸಿದ ಯೋಜನೆಯಿಂದ ಅಂತರ್ಜಲ ಮಟ್ಟ ಹೆಚ್ಚಿಸಿದೆ ಎಂದರು.

ಮಳವಳ್ಳಿಯಲ್ಲಿ ಮುಂದಿನ ಮಹೋತ್ಸವ..

ಸುತ್ತೂರು ಆದಿ ಜಗದ್ಗುರುಗಳ 1060 ನೇ ಮಹೋತ್ಸವ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ನಡೆಯಲಿದೆ. ಸಹಾಯಕ ಪ್ರಾಧ್ಯಾಪಕ ಸದಾಶಿವಮೂರ್ತಿ ಮಾತನಾಡಿ, ಅರಸೀಕೆರೆ, ರಾಮನಗರ ಸೇರಿದಂತೆ ಅನೇಕ ಕಡೆಗಳಿಂದ ಮಹೋತ್ಸವ ಏರ್ಪಡಿಸಲು ಅವಕಾಶ ಕೋರಿದ್ದಾರೆ. ಸುತ್ತೂರು ಶ್ರೀಗಳ ಅಧ್ಯಕ್ಷತೆಯಲ್ಲಿ ಗುರುವಾರ ಈ ಬಗ್ಗೆ ಚರ್ಚಿಸಿ ಮಳವಳ್ಳಿಯಲ್ಲಿ ಮುಂದಿನ ಮಹೋತ್ಸವ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ ಎಂದರು.

ಅಧಿಕಾರ ಇಲ್ಲದಿದ್ದರೂ ಬಿಎಸ್‌ವೈ ಸಿಎಂ

ಹೀಗೆಂದು ಹೇಳಿದ್ದು ಹುಬ್ಬಳ್ಳಿ ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ. ಬೌದ್ಧ ಧರ್ಮಕ್ಕೆ ಅಶೋಕ ಚಕ್ರವರ್ತಿ ನೀಡಿದಂತೆ ರಾಜ್ಯದ ಎಲ್ಲ ಧರ್ಮಗಳ, ಜಾತಿಗಳ ಮಠಕ್ಕೆ ಸಹಾಯ ನೀಡಿದ್ದು ಬಿ.ಎಸ್‌. ಯಡಿಯೂರಪ್ಪನವರು. ಅವರು ಸಿಎಂ ಆಗಿದ್ದಾಗ ಮಠಗಳಿಗೆ ಆರ್ಥಿಕ ಶಕ್ತಿ ತುಂಬಿದರು. ಅಧಿಕಾರ ಇದ್ದಾಗ ಮಾತ್ರ ಯಡಿಯೂರಪ್ಪ ಮುಖ್ಯಮಂತ್ರಿಯಲ್ಲ. ಅಧಿಕಾರ ಇಲ್ಲದಿದ್ದರೂ ಅವರೇ ಸಿಎಂ ಎಂದರು.

ಸುತ್ತೂರು ಶ್ರೀಗಳ ಜಯಂತಿ ಮಹೋತ್ಸವ ನಭೂತೋ ನ ಭವಿಷ್ಯತಿ ಎಂಬಂತೆ ನಡೆದಿದೆ. ನೂರಾರು ಜನರ ಪರಿಶ್ರಮದಿಂದ ಯಶಸ್ವಿ ಆಗಿದೆ. ಒಂದು ವಾರದಿಂದ ಧರ್ಮ ಪ್ರಜ್ಞೆ ಬೆಳೆಸಲು, ನಮಗಾಗಿ ಬದುಕದೇ ಸಮಾಜಕ್ಕಾಗಿ ಬದುಕಬೇಕು ಎಂಬುದು ಕಲಿಸಿದೆ. ಜ್ಞಾನ ದಾಸೋಹದ ಜತೆಗೆ ಅನ್ನ ದಾಸೋಹ ನಡೆದಿದೆ.
ಬಿ.ಎಸ್‌.ಯಡಿಯೂರಪ್ಪ, ಮಹೋತ್ಸವ ಮಹಾ ಪೋಷಕ.

Advertisement

Udayavani is now on Telegram. Click here to join our channel and stay updated with the latest news.

Next