Advertisement

ಮೌಸ್‌ ಹಿಡಿವ ಕೈಯಲ್ಲಿ ಪೇಂಟಿಂಗ್‌ ಬ್ರಷ್‌

11:15 AM Mar 13, 2021 | Team Udayavani |

ಬೆಂಗಳೂರು: “ಅಯ್ಯೋ ಏನ್ರೀ, ಮುಂದೆ ಹಂಪ್‌ ಇರೋದು ಕಾಣಿಸಲಿಲ್ವಾ? ಹಂಪ್‌ ಇರುವ ಕಡೆ ಗುರುತು ಮಾಡೋಕೆ ಏನು ರೋಗ ಈ ಆಡಳಿತಕ್ಕೆ.. ಎಂದು ಶಪಿಸುವ ಘಟನೆಗಳು ಅನುಭವಕ್ಕೆ ಬಂದಿರಬೇಕು ಅಲ್ಲವೇ?ಹೌದು, ಬೈಕ್‌, ಕಾರು, ಆಟೋ ಸೇರಿದಂತೆ ಇತರೆ ವಾಹನಗಳಲ್ಲಿ ಪ್ರಯಾಣಿಸುವಾಗ ಸ್ಪೀಡ್‌ ಬ್ರೇಕರ್‌ ಗುರುತು ಕಾಣದೆ, ವಾಹನ ಚಾಲಕರು ಈ ರೀತಿಯ ಘಟನೆ ಎದುರಿಸಿಯೇ ಇರುತ್ತಾರೆ. ಇದನ್ನೆಲ್ಲಾ, ಗಮನಿಸಿದ ಬೆಂಗಳೂರಿನ ಜೆ.ಪಿ.ನಗರದ ಯುವ ಉದ್ಯಮಿ ಮತ್ತು ಸಹೋದ್ಯೋಗಿಗಳು (ಕೋಡ್‌ ಆಫ್ ಕಂಡಕ್ಟ್-ಡಿಜಿಟಲ್‌ ಮಾರ್ಕೆಟಿಂಗ್‌ ಕಂಪನಿ ಉದ್ಯಮಿಗಳು) ರಾಜಧಾನಿಯಲ್ಲಿ ಸದ್ದಿಲ್ಲದೇ, ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

Advertisement

ಸದ್ದಿಲ್ಲದೆ ಸೇವೆ: ಸಿಲಿಕಾನ್‌ ಸಿಟಿಯಲ್ಲಿ ಎಲ್ಲೆಲ್ಲಿ ಸ್ಪೀಡ್‌ ಬ್ರೇಕರ್‌, ಜೀಬ್ರಾ ಕ್ರಾಸಿಂಗ್‌ ಇವೆ. ಅಲ್ಲಿ ಗುರುತು ಮಾಡಲಾಗಿದೆಯೇ? ಇಲ್ಲವೇ ಎಂಬ ಬಗ್ಗೆ ಉದ್ಯಮಿಗಳು, ಮೊದಲು ಮಾಹಿತಿ ಸಂಗ್ರಹಿಸುತ್ತಾರೆ. ಬಳಿಕ, ತಮ್ಮ ವೈಯಕ್ತಿಕ ಹಣ ಬಳಸಿಕೊಂಡು ಸ್ವತಃ ತಾವೇ, ಕೈಯಲ್ಲಿ ಹಗ್ಗ, ಪೇಯಿಂಟ್‌ ಡಬ್ಬ, ಬ್ರಷ್‌ ಹಿಡಿಡು ಗುರುತು ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಆ ಮೂಲಕ ವಾಹನ ಸವಾರರು, ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿಯೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಇವರು ವೈಯಕ್ತಿಕ ಹಣ ವ್ಯಯ ಮಾಡಿ, ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿದ್ದಾರೆ.

ಅಪಘಾತಕ್ಕೆ ಆಹ್ವಾನ?: ಬೆಂಗಳೂರಿನಲ್ಲಿ ಜೀಬ್ರಾ ಕ್ರಾಸಿಂಗ್‌ ಮತ್ತು ಹಂಪ್‌ ಗುರುತು ಕಾಣದ ಸಾಕಷ್ಟು ರಸ್ತೆಗಳಿವೆ. ಇಲ್ಲಿ ಅನೇಕ ಅಪಘಾತಗಳು ನಡೆದಿದ್ದು, ಕೆಲವಾಹನ ಸವಾರರು ಪ್ರಾಣ ತೆತ್ತ ಘಟನೆಯೂ ನಡೆದಿದೆ. ಬೈಕ್‌ ಸವಾರರು ಹೆಚ್ಚು ಈ ಅಪಘಾತಗಳಿಗೆ ಆಹ್ವಾನಿತರಾಗಿದ್ದಾರೆ. ಸೊಂಟ ಮುರಿತ, ಕೈ ನೋವು, ಹಲ್ಲು ಮುರಿತ ಮತ್ತು ತಲೆಗೆ ಪೆಟ್ಟು ಮಾಡಿಕೊಂಡವರ ಪಟ್ಟಿಯೂ ದೊಡ್ಡದಿದೆ. ಕಾರು ಹಾಗೂ ಬಸ್‌ನ ಮುಂಬದಿ ಸೀಟ್‌ನಲ್ಲಿ ಕುಳಿತವರು ಈ ರೀತಿಯ ಅನುಭವಕ್ಕೆ ಒಳಗಾಗಿದ್ದಾರೆ.

ಜನಪ್ರತಿಧಿಗಳು ಕಣ್ತೆರೆಯಲಿ: ಚುನಾವಣೆ ವೇಳೆ ಮತಕ್ಕಾಗಿ ನಾಗರಿಕರೆಡೆ ಹೆಜ್ಜೆ ಹಾಕುವ ಜನಪ್ರತಿನಿಧಿ ಗಳು, ಬಳಿಕ ಕೈಗೆಟುಕದಂತಾಗುತ್ತಾರೆ. ನಾಗರಿಕರ ಸಮಸ್ಯೆ ಆಲಿಸಿ ಸುಮ್ಮನಾಗುವ ಆಡಳಿತ ರಸ್ತೆ ನಿಯಮ ಫ‌ಲಕಗಳು, ಗುರುತು ಸೇರಿದಂತೆ ವಿವಿಧ ನಿತ್ಯ ಕಾರ್ಯಗಳ ಬಗ್ಗೆ ಅಗತ್ಯವಾಗಿ ಗಮನ ಹರಿಸಬೇಕಿದೆ.

250 ಕಡೆ ಪೇಂಟಿಂಗ್‌ ಗುರಿ ;

Advertisement

ನಗರದ ಜಯನಗರ 9ನೇ ಬ್ಲಾಕ್‌, ಜೆ.ಪಿ.ನಗರ, ಜೆ.ಪಿ.ನಗರ ಮಿನಿ ಫಾರೆಸ್ಟ್‌ ರಸ್ತೆ, ಜಯನಗರ ಈಸ್ಟ್‌, ಉತ್ತರಹಳ್ಳಿ ಮುಖ್ಯ ರಸ್ತೆ, ತಿಲಕ್‌ ನಗರ, ಭೈಸಂದ್ರ, ಪುಟ್ಟೇನಹಳ್ಳಿ ಸೇರಿಂತೆ ಈಗಾಗಲೇ 31 ಕಡೆ ಗುರುತೇ ಕಾಣದ ಸ್ಪೀಡ ಬ್ರೇಕರ್‌ ಹಾಗೂ ಜೀಬ್ರಾ ಕ್ರಾಸಿಂಗ್‌ಗಳಿಗೆ ಪೇಂಟಿಂಗ್‌ ಮಾಡಲಾಗಿದೆ. ಈ ರೀತಿಯ ಸಮಸ್ಯೆ ಕುರಿತು ಸಾಕಷ್ಟು ಸಾರ್ವಜನಿಕರಿಂದ ಮಾಹಿತಿ ಲಭ್ಯವಾಗಿದ್ದು, 250 ಕಡೆ ಗುರುತು ಮಾಡವ ಗುರಿ ಹೊಂದಲಾಗಿದೆ ಎಂದು ಯುವ ಉದ್ಯಮಿ ಅರ್ಜುನ್‌ ಎಂ.ಎಸ್‌ ತಿಳಿಸಿದರು.

ಒಮ್ಮೆ ಉತ್ತರಹಳ್ಳಿ ರಸ್ತೆಯಲ್ಲಿ ಜನ ಗುಂಪು ಕಟ್ಟಿದ್ದರು. ಸ್ಥಳಕ್ಕೆ ಹೋಗಿ ನೋಡಿದಾಗ, ವೃದ್ಧ ದಂಪತಿ ಅಪಘಾತಕ್ಕೆ ಒಳಗಾಗಿದ್ದರು. ಹಂಪ್‌ ಗುರುತು ಕಾಣದೆ, ದಿಢೀರನೆ ಬ್ರೇಕ್‌ ಹಾಕಿದ ಪರಿಣಾಮ ಹಿಂದಿನಿಂದ ಬಂದ ವಾಹನವೊಂದು ವೃದ್ಧ ದಂಪತಿ ಬೈಕ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿರುವುದು ತಿಳಿಯಿತು. ಈ ಘಟನೆ ನಮ್ಮ ಕೆಲಸಕ್ಕೆ ಪ್ರೇರಣೆ –ಅರ್ಜುನ್‌ ಎಂ.ಎಸ್‌., ಯುವ ಉದ್ಯಮಿ, ಜೆ.ಪಿ.ನಗರ

 

ವಿಕಾಸ್‌ ಆರ್‌.

Advertisement

Udayavani is now on Telegram. Click here to join our channel and stay updated with the latest news.

Next