ಮುಂಬಯಿ : ಮುಂಬಯಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ತುಳು ಕನ್ನಡಿಗರಿಗಾಗಿ ರಾಜ್ಯ ಮಟ್ಟದ ಹೊನಲು ಬೆಳಕಿನ “ತುಂಗಾ ಕ್ರಿಕೆಟ್ ಪಂದ್ಯಾಟ 2017′ ನ್ನು ಮಾ. 5ರಂದು ಸಾಂತಾಕ್ರೂಜ್ ಕಲಿನಾದ ಏರ್ ಇಂಡಿಯಾ ನ್ಪೋರ್ಟ್ಸ್ಕ್ಲಬ್‌ನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದು, ಸ್ಥಾನೀಯ ಶಾಸಕ ಸಂಜಯ್ ಜಿ. ಪೋತ್ನಿಸ್ ದೀಪ ಬೆಳಗಿಸಿ ಅನಂತರ ಕ್ರಿಕೆಟ್ ಪಿಚ್‌ನಲ್ಲಿ ತೆಂಗಿನಕಾಯಿ ಒಡೆದು, ರಿಬ್ಬನ್ ಕತ್ತರಿಸಿ ಬ್ಯಾಟಿಂಗ್ ಮಾಡುವ ಮುಖೇನ ಪಂದ್ಯಾಟ ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಪಾರಿವಾಳವನ್ನು ಹಾರಿಸಿ. ಟಾಸ್ ಎತ್ತುವ ಮೂಲಕ ಪಂದ್ಯಾಟಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಗೌರವ ಅತಿಥಿಗಳಾಗಿ ಚಂದ್ರಹಾಸ ಗುರುಸ್ವಾಮಿ ಇನ್ನಂಜೆ, ಸ್ಥಳಿಯ ನಗರ ಸೇವಕ ಸಗುಣ್ ನಾಯಕ್, ವಿದ್ಯಾದಾಯಿನಿ ಸಭಾ ಅಧ್ಯಕ್ಷ ಜೆ. ಎಂ. ಕೋಟ್ಯಾನ್, ಸಮಾಜ ಸೇವಕಿ ಸನಾ ಖುರೇಶಿ, ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ ಬಿ. ಭಂಡಾರಿ, ಕಾರ್ಯಾಧ್ಯಕ್ಷ ಸಂಜೀವ ಪಿ. ಹೆಗ್ಡೆ, ಕನ್ನಡ ಅಸೋಸಿಯೇಶನ್ ಘೋಡ್‌ಬಂದರ್ ರೋಡ್ ಇದರ ಅಧ್ಯಕ್ಷ ವಿಕ್ರಮಾನಂದ ಶೆಟ್ಟಿ, ಉದ್ಯಮಿಗಳಾದ ಹರೀಶ್ ಸಾಲ್ಯಾನ್ ಘೋಡ್‌ಬಂದರ್, ಶೇಖರ ಗೌಡ ವಕೋಲ ಮತ್ತಿತರರು ಉಪಸ್ಥಿತರಿದ್ದರು.
ಶಾಸಕ ಪೋತ್ನಿಸ್, ಪ್ರಭಾಕರ ಶೆಟ್ಟಿ, ಸಗುಣ್ ನಾಯಕ್, ಸನಾ ಖುರೇಶಿ, ಚಂದ್ರಹಾಸ ಇನ್ನಂಜೆ ಸಂದಭೋìಚಿತವಾಗಿ ಮಾತನಾಡಿ ಪಂದ್ಯಾಟಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಪ್ರಧಾನ ಸಂಘಟಕ ಯುವರಾಜ್ ಶೆಟ್ಟಿ ಹೆರಂಜೆ ಸ್ವಾಗತಿಸಿದರು. ಸಂಜೀವಿನಿ ಸೋಶಿಯಲ್ ವೆಲ್ಪೇರ್ ಟ್ರಸ್ಟ್ ಬೆಂಗಳೂರು ಅಧ್ಯಕ್ಷ ಯೋಗೀಶ್ ಹೆಗ್ಡೆ, ಮುಂಬಯಿ ಅಧ್ಯಕ್ಷ ಉದಯ್ ಕೋಟೇಶ್ವರ, ಪವನ್ ರಾವ್ ಕಲೀನಾ, ವೇಣುಗೋಪಾಲ್ ಶೆಟ್ಟಿ ಇರಾ, ಲೊಕೇಶ್ ಪೂಜಾರಿ, ಎಸ್. ದಯಾನಂದ್ ಅತಿಥಿಗಳಿಗೆ ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಕೆಬಿಎಸ್ ಮೊಹಮ್ಮದ್ ಗಝಲಿ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘಟಕ, ಸಂಜೀವಿನಿ ಟ್ರಸ್ಟ್‌ನ ಮುಂಬಯಿ ಕಾರ್ಯದರ್ಶಿ ಸಂದೀಪ್ ಹೆಗ್ಡೆ ವಂದಿಸಿದರು.
ಪಂದ್ಯಾಟದ ಆದಿಯಲ್ಲಿ ರಾಷ್ಟ್ರದ ಅಗಲಿದ ಸರ್ವ ಸೈನಿಕರಿಗೆ ಹಾಗೂ ವಿಶೇಷವಾಗಿ ಇತ್ತೀಚೆಗೆ ಮಡಿದ ಯೋಧ ಸಂದೀಪ್ ನಾಯ್ಕ ಹಾಸನ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ರಾಷ್ಟ್ರಗೀತೆಯೊಂದಿಗೆ ಪಂದ್ಯಾಟ ಆರಂಭಗೊಂಡಿದ್ದು ಮಹಾನಗರದಲ್ಲಿನ ನೂರಾರು ಸಂಖ್ಯೆಯ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ಪ್ರಕಾಶ್ ಶೆಟ್ಟಿ ಬೆಳಗೋಡು, ಎ. ಕೆ. ಶೆಟ್ಟಿ ನಡೂರು ಮತ್ತು ಅಫ್ರಾನ್ ಫಾರೂಕ್ ವೀಕ್ಷಕ ವಿವರಣೆಯಲ್ಲಿ ಸಹಕರಿಸಿದರು. ಸುಮಾರು 20ಕ್ಕೂ ಅಧಿಕ ತಂಡಗಳು ಪಂದ್ಯಾಟದಲ್ಲಿ ಪಾಲ್ಗೊಂಡಿದ್ದು, ಕರ್ನಾಟಕ ವಿಶ್ವಕರ್ಮ ತಂಡ ಹಾಗೂ ಸಾನ್ವಿ ಸ್ಟಾರ್ ತಂಡಗಳು ಆರಂಭಿಕ ಪಂದ್ಯಾಟದಲ್ಲಿ ಸೆಣೆಸಾಡಿದವು. ಪೂರ್ವಾಹ್ನ ಆರಂಭಗೊಂಡ ಪಂದ್ಯಾಟವು ತಡರಾತ್ರಿ ಹೊನಲು ಬೆಳಕಿನೊಂದಿಗೆ ಸಮಾಪನಗೊಂಡಿತು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್