Advertisement
ಪೀಠಾಧಿಪತಿಯ ಸಾಮಾಜಿಕ ಜವಾಬ್ದಾರಿ: 1978. ಆಂಧ್ರದಲ್ಲಿ ಚಂಡಮಾರುತದಿಂದಾಗಿ ಹಂಸಲದೀವಿಯ ಜನ ಮನೆ-ಮಾರು ಕಳೆದುಕೊಂಡು ಬೀದಿಪಾಲಾದರು. ಶ್ರೀಪಾದರ ಹೃದಯ ಕರಗಿತು. ಅವರು ತಮ್ಮ ಮಠದ ಕಡೆಯಿಂದ 150 ಮನೆಗಳನ್ನು ಕಟ್ಟಿಸಿದರು. 26-7-1978ರಂದು ಅವುಗಳ ಉದ್ಘಾಟನೆಯಾಗಿ ಮನೆಯಿಲ್ಲದವರು “ಮನೆವಂತ’ರಾದರು. ಕರ್ನಾಟಕದಲ್ಲಿ ನೆರೆ ಹಾವಳಿಯಿಂದ ಹೀಗೆಯೇ ಸಾವಿರಾರು ಮಂದಿ ಬೀದಿಯಲ್ಲಿ ನಿಂತಾಗಲೂ ಶ್ರೀಪಾದರು ನೆರವಿಗೆ ನಿಂತರು. ಪೀಠಾಧಿಪತಿ ಸಾಮಾಜಿಕವಾಗಿ ಹೇಗೆ ಸ್ಪಂದಿಸಬೇಕು ಎನ್ನುವುದಕ್ಕೆ ಮಾದರಿಯಾದರು.
Related Articles
Advertisement
ದಲಿತರ ಕೇರಿಗೆ ಭೇಟಿ: ಶ್ರೀ ವಿಶ್ವೇಶತೀರ್ಥರು ದಲಿತರ ಕೇರಿಗೆ ಭೇಟಿ ನೀಡಿದ ಘಟನೆಯ ಪರಿಣಾಮವನ್ನು ಪಾ.ವೆಂ. ಆಚಾರ್ಯರು ಹೀಗೆ ಗುರುತಿಸಿದ್ದಾರೆ- ಶ್ರೀಪಾದರ ಈ ಹರಿಜನ ಸಂಪರ್ಕದ ಕಾರ್ಯ ಎರಡು ರೀತಿಗಳಿಂದ ಪ್ರಭಾವ ಬೀರುತ್ತಿದೆ. 1) ಬಗೆಬಗೆಯ ಸಂಕಟ, ಅವಮಾನಗಳಿಂದ ಪೀಡಿತರಾದ ದಲಿತರಲ್ಲಿ ಹಿಂದೂ ಧರ್ಮದಲ್ಲಿ ತಮಗೆ ಇನ್ನೂ ಗೌರವದ ಸ್ಥಾನ ಸಂಪಾದನೆ ಸಾಧ್ಯವಿದೆ. ಆತ್ಮಗೌರವವನ್ನು ಸಂಪಾದಿಸುವುದಕ್ಕೆ ತಮ್ಮ ಮಾತೃಧರ್ಮದ ಬೇರುಗಳನ್ನು ಕತ್ತರಿಸಿಕೊಳ್ಳಬೇಕಾಗಿಲ್ಲ ಎಂಬ ಆಶೋದಯವನ್ನುಂಟುಮಾಡಿದೆ. ಇನ್ನೊಂದೆಡೆ ಸವರ್ಣೀಯ ಹಿಂದೂಗಳಲ್ಲಿ ಹರಿಜನ ಸಮಸ್ಯೆಯ ತುರ್ತನ್ನು ಅದು ತೀವ್ರವಾಗಿ ಬಿಂಬಿಸುತ್ತಿದೆ. ಈ ದೀನ ದಲಿತರನ್ನು ಅಲಕ್ಷಿಸುತ್ತಲೇ ಇದ್ದರೆ ಇಡೀ ಹಿಂದೂ ಸಮಾಜವೇ ಹೇಗೆ ವಿಸ್ತರಿಸಲಾರದ ಅಪಾಯಕ್ಕೆ ಗುರಿಯಾದೀತೆಂಬುದನ್ನು ಸವರ್ಣೀಯರ ಗಮನಕ್ಕೆ ಅದು ತಂದುಕೊಡುತ್ತಿದೆ.
ಗೋ ಪ್ರೇಮದ ಈ ಪರಿ: 1985ನೇ ಇಸವಿ. ರಾಜ್ಯದಲ್ಲೆಲ್ಲ ಭೀಕರ ಬರ. ಶ್ರೀಪಾದರು ಆಗ ಪರ್ಯಾಯ ಪಟ್ಟದಲ್ಲಿ ಆಸೀನರಾಗಿದ್ದರು. ಪರ್ಯಾಯ ಪೀಠದಲ್ಲಿರುವುದರಿಂದ ಅವರು ಪ್ರವಾಸ, ಪಾದಯಾತ್ರೆ, ನಿಧಿ ಸಂಗ್ರಹ ಮಾಡುವಂತಿರಲಿಲ್ಲ. ಅವರು ತಮ್ಮ ವಿವಶತೆಯನ್ನು ತಿಳಿಸಿ, 10 ಸಾವಿರ ರೂ.ಗಳನ್ನು ನೀಡಿದರು. ಗೋರಕ್ಷಾ ಕೇಂದ್ರ ನಡೆಸಲು ಒಂದು ದಿನಕ್ಕೂ ಸಾಲದ ಮೊತ್ತವಿದು. ಆದರೆ ವಿಹಿಂಪಕ್ಕೆ ಇದು ಮೂಲಧನವಾಯಿತು. ರೋಣ ತಾಲೂಕು ಕುರುವಿನಕೊಪ್ಪದಲ್ಲಿ ಮೊದಲನೆಯ ಗೋರಕ್ಷಾ ಕೇಂದ್ರವನ್ನು ಆರಂಭಿಸಲಾಯಿತು. ಮುಂದೆ ರಾಜ್ಯದಲ್ಲೆಲ್ಲ 13 ಗೋರಕ್ಷಾ ಕೇಂದ್ರಗಳನ್ನೂ 20 ಗಂಜಿಕೇಂದ್ರಗಳನ್ನೂ ಆರಂಭಿಸಲಾಯಿತು. ಅನೇಕ ದಾನಿಗಳು ಮುಂದೆ ಬಂದರು. ಪಾದಯಾತ್ರೆಗಳ ಮೂಲಕ ಲಕ್ಷಾವಧಿ ನಿಧಿ ಸಂಗ್ರಹಿಸಲಾಯಿತು.
ಯಾವ ಕೆಲಸವನ್ನು ನಿಸ್ವಾರ್ಥದಿಂದ ಮಾಡುತ್ತೇವೋ ಅವೆಲ್ಲವೂ ಮೋಕ್ಷಕ್ಕೆ ಪೂರಕ.-ಶ್ರೀ ವಿಶ್ವೇಶ ತೀರ್ಥರು