Advertisement

ಶಿಕ್ಷಣ ಇಲಾಖೆಯಿಂದ ಸಾಮಾಜಿಕ ತಾಣ

11:23 PM Feb 06, 2022 | Team Udayavani |

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಜನಸ್ನೇಹಿ, ಶಿಕ್ಷಕಸ್ನೇಹಿ ಹಾಗೂ ವಿದ್ಯಾರ್ಥಿಸ್ನೇಹಿಯಾಗಿ ಮಾಡಬೇಕೆಂಬ ಉದ್ದೇಶದಿಂದ ಇಲಾಖೆಯ ಸಾಮಾಜಿಕ ತಾಣಗಳನ್ನು ತೆರೆಯಲು ಸಿದ್ಧತೆ ನಡೆಸಿದೆ.

Advertisement

ಶಿಕ್ಷಣ ಇಲಾಖೆಯಲ್ಲಿ 1ರಿಂದ 10ನೇ ತರಗತಿ ವರೆಗೆ ಒಂದು ಕೋಟಿಗೂ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ. ಎರಡೂವರೆ ಲಕ್ಷ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಕ್ಷಣ ಇಲಾಖೆಯ ಆದೇಶಗಳು, ಕಾರ್ಯವೈಖರಿ, ಸೌಲಭ್ಯಗಳನ್ನು ಒಳಗೊಂಡ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ತಿಳಿಸುವ ಉದ್ದೇಶದಿಂದ ಸಾಮಾಜಿಕ ತಾಣ ತೆರೆಯಲು ಮುಂದಾಗಿದೆ. ಸದ್ಯ ಸ್ಕೂಲ್‌ ಎಜುಕೇಶನ್‌ ವೆಬ್‌ಸೈಟ್‌ ಮಾತ್ರ ಇದ್ದು, ಕೆಲವು ಸಲ ಆದೇಶಗಳು ಜಾರಿಗೆ ಬಂದ ಅನಂತರ ಅವುಗಳನ್ನು ಅಪ್‌ಲೋಡ್‌ ಮಾಡಲಾಗುತ್ತಿದೆ.

ಯಾವೆಲ್ಲ ಮಾಧ್ಯಮಗಳು?
ಶಾಲೆ ಆರಂಭ, ಖಾಸಗಿ ಶಾಲೆಗಳಿಗೆ ಅನುಮತಿ, ಶುಲ್ಕ ನಿಗದಿ, ತರಗತಿಗಳ ಪ್ರಾರಂಭ, ಶಿಕ್ಷಕರ ಸಮಸ್ಯೆಗಳು, ವರ್ಗಾವಣೆ, ಪರೀಕ್ಷೆಗಳು, ಫ‌ಲಿತಾಂಶ ಪ್ರಕಟಿಸುವುದು ಸೇರಿದಂತೆ ವರ್ಷಪೂರ್ತಿ ಚಟುವಟಿಕೆಗಳಿಂದ ಕೂಡಿರುತ್ತದೆ. ಇಂತಹ ಸಮಯದಲ್ಲಿ ಇಲಾಖೆಯ ಆದೇಶಗಳು ಹಾಗೂ ಕೆಲವು ಮಾಹಿತಿಗಳು ಜನರಿಗೆ ತಲುಪುತ್ತಿಲ್ಲ. ಮಾತ್ರವಲ್ಲದೆ ಶಿಕ್ಷಕರು ಮತ್ತು ಹೆತ್ತವರನ್ನು ದಾರಿತಪ್ಪಿಸುವ ಕೆಲಸಗಳು ಕೂಡ ಅಲ್ಲಲ್ಲಿ ನಡೆಯುತ್ತಿವೆ.ಹೀಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಜನರನ್ನು ತಲುಪುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಲಾಖೆಯಲ್ಲಿ ಕೈಗೊಳ್ಳುವ ನಿರ್ಣಯಗಳನ್ನು ಸಾಮಾಜಿಕ ತಾಣಗಳಾದ ಟ್ವಿಟರ್‌, ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಕೂ, ಟೆಲಿಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಲಾಗುತ್ತದೆ. ಇದಕ್ಕಾಗಿ ತಂಡವನ್ನು ರಚಿಸಲು ಸಹ ಚಿಂತನೆ ನಡೆಸಲಾಗುತ್ತಿದೆ.

ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ
ಸಾಮಾಜಿಕ ತಾಣ ಆರಂಭ ಮಾಡುವುದರಿಂದ ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇಲಾಖೆಯಲ್ಲಿ ಆರ್‌ಟಿಇ ಅರ್ಜಿ ಪ್ರಕ್ರಿಯೆ, ಶಾಲಾ ಆರಂಭ ಮತ್ತು ಪ್ರವೇಶ ಪಡೆಯಲು ಕೊನೆಯ ದಿನಾಂಕ, ವರ್ಗಾವಣೆ ಪ್ರಮಾಣ ಪತ್ರ (ಟಿಸಿ) ನೀಡುವಲ್ಲಿ ಖಾಸಗಿ ಶಾಲೆಗಳ ಕಿರಿಕಿರಿ, ಸರಕಾರ ನಿಗದಿ ಮಾಡಿರುವುದಕ್ಕಿಂತ ಖಾಸಗಿ ಶಾಲೆಗಳಲ್ಲಿ ದುಪ್ಪಟ್ಟು ಶುಲ್ಕ ಪಡೆಯುವುದು ಸಹಿತ ಅನೇಕ ದೂರುಗಳನ್ನು ಇಲಾಖೆಗೆ ತಿಳಿಸಲು ಸಾಮಾಜಿಕ ಜಾಲತಾಣವು ಸುಲಭ ಮಾರ್ಗವಾಗಲಿದೆ.

ಪ್ರಾಥಮಿಕ ಶಿಕ್ಷಣ ಇಲಾಖೆಯು ದೊಡ್ಡದಾಗಿರುವುದರಿಂದ ಸಾಮಾಜಿಕ ತಾಣಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ. ಈ ಮೂಲಕ ತುಂಬ ತ್ವರಿತವಾಗಿ ಮಾಹಿತಿಯನ್ನು ಸಾರ್ವಜನಿಕರಿಗೆ ಹಂಚಿಕೊಳ್ಳಲು ಸೂಕ್ತ ವೇದಿಕೆಯಾಗಲಿದೆ.
– ಬಿ.ಸಿ. ನಾಗೇಶ್‌,
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

Advertisement
Advertisement

Udayavani is now on Telegram. Click here to join our channel and stay updated with the latest news.

Next