Advertisement

ಸಾಮಾಜಿಕ ಭದ್ರತೆ ಯೋಜನೆ

03:30 PM Oct 20, 2017 | Sharanya Alva |

ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಜನಸಾಮಾನ್ಯರನ್ನು ತಲುಪಲು ಇನ್ನಿಲ್ಲದ ಕಸರತ್ತು ನಡೆಸುತ್ತಲೇ ಬಂದಿದೆ. ಕಳೆದ ಮೂರೂವರೆ ವರ್ಷಗಳ ಅವಧಿಯಲ್ಲಿ ಸರಕಾರ ಜಾರಿಗೆ ತಂದ ಹತ್ತು ಹಲವು ಮಹತ್ತರ ಯೋಜನೆಗಳು ಪ್ರಚಾರದ ಅಬ್ಬರದಲ್ಲಿ ತೇಲಿ ಹೋದವೇ ಹೊರತು ಜನಸಾಮಾನ್ಯರನ್ನು ತಲುಪುವಲ್ಲಿ ಅಷ್ಟೊಂದು ಸಫ‌ಲವಾಗಲಿಲ್ಲ. ನೋಟುಗಳ ಅಪನಗದೀಕರಣ, ಜಿಎಸ್‌ಟಿ ಜಾರಿ, ಪೆಟ್ರೋಲಿಯಂ
ಉತ್ಪನ್ನಗಳ ಬೆಲೆ ಹೆಚ್ಚಳ..ಮತ್ತಿತರ ಕಠಿಣ ನಿರ್ಧಾರಗಳು ಸರಕಾರದ ಪಾಲಿಗೆ ಒಂದಿಷ್ಟು ಹಿನ್ನಡೆ ಉಂಟು ಮಾಡಿರುವುದಂತೂ ಸುಳ್ಳಲ್ಲ.

Advertisement

ಇವೆಲ್ಲವೂ ದೂರಗಾಮಿ ಪರಿಣಾಮ ಬೀರಬಲ್ಲ ನಿರ್ಧಾರಗಳು ಎಂದು ಸರಕಾರ ಸಮರ್ಥಿಸಿಕೊಂಡರೂ ದೇಶದ ಬಡಜನರ ಜೀವನದ ಮೇಲೆ ಇವು ಬರೆ ಎಳೆದಿರುವುದು  ನಿಜ. ಇದು ಸಹಜವಾಗಿಯೇ ವಿಪಕ್ಷಗಳ ಪಾಲಿಗೆ ಬಿಜೆಪಿ ನೇತೃತ್ವದ ಸರಕಾರವನ್ನು ಹಳಿಯಲು ಅಸ್ತ್ರವಾಗಿಬಿಟ್ಟಿದೆ.
ದೇಶದ ಆರ್ಥ ವ್ಯವಸ್ಥೆಯ ನಿರ್ವಹಣೆಯ ಬಗೆಗಂತೂ ಸರಕಾರದ ವಿರುದ್ಧ ಸಾರ್ವತ್ರಿಕವಾಗಿ ಟೀಕೆಗಳು ಕೇಳಿಬರತೊಡಗಿರುವಂತೆಯೇ ಎಚ್ಚೆತ್ತುಕೊಂಡಿರುವ ಕೇಂದ್ರ ನಿಧಾನವಾಗಿ ಕೆಲವೊಂದು ಸುಧಾರಣಾ ಕ್ರಮಗಳನ್ನು ಜಾರಿಗೆ ತರುತ್ತಾ ಆರ್ಥಿಕತೆಯನ್ನು ಹಳಿಗೆ ತರುವ ಪ್ರಯತ್ನಕ್ಕೆ ಮುಂದಾಗಿದೆ.

ತೈಲೋತ್ಪನ್ನಗಳ ಮೇಲಣ ಸುಂಕದಲ್ಲಿ ಒಂದಿಷ್ಟು ಕಡಿತ, ಜಿಎಸ್‌ಟಿ ದರದಲ್ಲಿ ಇಳಿಕೆ…ಹೀಗೆ ಕೆಲ ಮಹತ್ತರ ಸುಧಾರಣಾ ಕ್ರಮಗಳನ್ನು ಕೈಗೊಂಡು ಜನಸಾಮಾನ್ಯರ ಮನಗೆಲ್ಲಲು ಮುಂದಾಗಿರುವ ಕೇಂದ್ರ ಸರಕಾರ ಇದೀಗ ಇಡೀ ದೇಶದ ಜನರನ್ನು ಒಳಗೊಂಡಂತೆ ಸಾಮಾಜಿಕ ಭದ್ರತೆ ಯೋಜನೆಯೊಂದನ್ನು ಶೀಘ್ರದಲ್ಲಿಯೇ ಜಾರಿಗೆ ತರಲು ಉದ್ದೇಶಿಸಿದೆ. ಚುನಾವಣಾ ಪೂರ್ವದಲ್ಲಿ “ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಎಂಬ ಘೋಷವಾಕ್ಯದೊಂದಿಗೆ ಮತದಾರರ ಬಳಿಗೆ ತೆರಳಿದ್ದ ಬಿಜೆಪಿ ಇದೀಗ ಇದನ್ನು ಅಕ್ಷರಶಃ ಕಾರ್ಯಗತಗೊಳಿಸಲು ಮುಂದಾಗಿದೆ. ದೇಶದಲ್ಲಿನ ಕಡುಬಡವರಿಂದ ಹಿಡಿದು ಶ್ರೀಮಂತ ವರ್ಗದವರಿಗಿನ ಜನರನ್ನು ಗಮನದಲ್ಲಿರಿಸಿ ಅವರವರ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಈ ಬೃಹತ್‌ ಸಾಮಾಜಿಕ ಭದ್ರತಾ ಯೋಜನೆಯ ಕರಡನ್ನು ಸಿದ್ಧಪಡಿಸಲಾಗಿದೆ.

ಈ ಸಾಮಾಜಿಕ ಭದ್ರತಾ ಯೋಜನೆಯನ್ವಯ ದೇಶದಲ್ಲಿರುವ ಶೇ.20ರಷ್ಟು ಕಡುಬಡವರು ಸರಕಾರದಿಂದ ನೇರ ಹಣಕಾಸು ನೆರವು ಪಡೆಯಲಿದ್ದರೆ ಶ್ರೀಮಂತರು ತಾವೇ ಈ ಯೋಜನೆಯ ಚಂದಾದಾರರಾಗಬಹುದು. ಇನ್ನು ಅಸಂಘಟಿತ ವಲಯದ ಕಾರ್ಮಿಕರು ಕಡಿಮೆ ಪ್ರಮಾಣದ ಮೊತ್ತವನ್ನು ಈ ಯೋಜನೆಯಲ್ಲಿ ತೊಡಗಿಸಿ ಪಿಂಚಣಿ, ವಿಮೆ ಸಹಿತ ವಿವಿಧ ಸೌಲಭ್ಯ ಪಡೆಯಬಹುದಾಗಿದೆ.

ಅಸಂಘಟಿತ ವಲಯದ ಕಾರ್ಮಿಕರ ಪಾಲಿಗೆ ಈ ಸಾಮಾಜಿಕ ಭದ್ರತೆ ಯೋಜನೆ ಒಂದು ವರದಾನವಾಗಲಿದೆ. ದೇಶದಲ್ಲಿ ಒಟ್ಟು 45 ಕೋ. ಕಾರ್ಮಿಕರಿದ್ದು ಈ ಪೈಕಿ ಶೇ.10ರಷ್ಟು ಕಾರ್ಮಿಕರು ಮಾತ್ರವೇ ಸಂಘಟಿತ ವಲಯದಲ್ಲಿದ್ದಾರೆ, ಭವಿಷ್ಯನಿಧಿ, ಇಎಸ್‌ಐ, ವಿಮೆ ಸಹಿತ ವಿವಿಧ ಸಾಮಾಜಿಕ ಭದ್ರತೆಗಳನ್ನು ಹೊಂದಿದ್ದಾರೆ. ಉಳಿದಂತೆ ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಿಗೆ ಕನಿಷ್ಠ ವೇತನದ ಸಹಿತ ಇನ್ಯಾವುದೇ ಸಾಮಾಜಿಕ ಭದ್ರತೆಗಳೂ ಇಲ್ಲವಾಗಿರುವುದರಿಂದ ಕೇಂದ್ರ ಸರಕಾರ ಈ ಯೋಜನೆಯನ್ನು ಜಾರಿಗೊಳಿಸಲು ಮುಂದಾಗಿದೆ.

Advertisement

ಎರಡು ಸ್ತರಗಳಲ್ಲಿ ಈ ಯೋಜನೆ ಜಾರಿಯಾಗಲಿದ್ದು ಮೊದಲನೇ ಸ್ತರದಲ್ಲಿ ಕಡ್ಡಾಯ ಪಿಂಚಣಿ, ವಿಮೆ ಮತ್ತು ಮಾತೃತ್ವ ಸೌಲಭ್ಯಗಳು ಜನರಿಗೆ ಲಭಿಸಲಿದ್ದರೆ ಎರಡನೇ ಸ್ತರದಲ್ಲಿ ವೈದ್ಯಕೀಯ, ಆರೋಗ್ಯ ಮತ್ತು ನಿರುದ್ಯೋಗ ಭತ್ಯೆ ಸೌಲಭ್ಯಗಳು ಲಭಿಸಲಿವೆ. ಸದ್ಯ ಕಾರ್ಮಿಕ ಖಾತೆಯು ರೂಪಿಸಿರುವ ಸಾಮಾಜಿಕ ಭದ್ರತಾ ಯೋಜನೆಯ ಕರಡನ್ನು ಶೀಘ್ರವೇ ಹಣಕಾಸು ಖಾತೆಗೆ ರವಾನಿಸಿ ಇಲಾಖೆಯ ಒಪ್ಪಿಗೆ ಪಡೆದು ಮುಂದಿನ ವರ್ಷದಿಂದಲೇ ಜಾರಿಗೆ ತರುವ ಚಿಂತನೆ ಸರಕಾರದ್ದಾಗಿದೆ.

ಈ ಮೂಲಕ 2019ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನ ಈ ಯೋಜನೆಯನ್ನು ಅ ತ್ಯಂತ ಸೂಕ್ತ ರೀತಿಯಲ್ಲಿ ಅನುಷ್ಠಾನಕ್ಕೆ ತರುವ ಮೂಲಕ ದೇಶದ ಅತೀ ದೊಡ್ಡ ವರ್ಗವಾಗಿರುವ ಕಾರ್ಮಿಕ  ಶಕ್ತಿಯ ಬೆಂಬಲವನ್ನು ತನ್ನ ಹಿಡಿತದಲ್ಲಿರಿಸಿಕೊಳ್ಳುವುದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ಇರಾದೆ. ಸದ್ಯ ಸಿದ್ಧಪಡಿಸಲಾಗಿರುವ ಸಾಮಾಜಿಕ ಭದ್ರತೆ ಯೋಜನೆಯ ಕರಡಿನ ಉದ್ದೇಶ ಸಮರ್ಥನೀಯ ಮಾತ್ರವಲ್ಲದೇ ಅನಿವಾರ್ಯವೂ ಆಗಿದೆ. ಆದರೆ ಯೋಜನೆಯ ಉದ್ದೇಶ, ಆಶಯಗಳು ಅಕ್ಷರಶಃ ಅನುಷ್ಠಾನಗೊಂಡಲ್ಲಿ ಮಾತ್ರ ಸರಕಾರದ ನೈಜ ಕಳಕಳಿ ಈಡೇರುತ್ತದೆ. ಕಡು ಬಡವರು ಮಾತ್ರವಲ್ಲದೇ ಅಸಂಘಟಿತ ವಲಯದ ಕೋಟ್ಯಂತರ ಕಾರ್ಮಿಕರು ಈ ಯೋಜನೆಯ ನೇರ ಫ‌ಲಾನುಭವಿಗಳಾಗಲಿದ್ದಾರೆ. ಸರಕಾರದ ಸದ್ಯದ ಚಿಂತನೆಯ ಪ್ರಕಾರ ಈ ಯೋಜನೆಯಲ್ಲಿ ಕಡುಬಡವರನ್ನು ಹೊರತುಪಡಿಸಿದಂತೆ ಜನರನ್ನೂ ಪಾಲುದಾರರನ್ನಾಗಿಸುವುದರಿಂದ ಯೋಜನೆಯ ಯಶಸ್ಸು ಕೇವಲ ಸರಕಾರದ ಪ್ರಯತ್ನವನ್ನು ಮಾತ್ರವಲ್ಲದೆ ಜನರ ಸಹಭಾಗಿತ್ವವನ್ನೂ ಅವಲಂಬಿಸಲಿರಲಿದೆ. ಆದರೆ ಈ ಯೋಜನೆಯ ಅನುಷ್ಠಾನಕ್ಕೆ ವಾರ್ಷಿಕ 1.2 ಲ.ಕೋ. ರೂ.ಗಳಷ್ಟು ಬೃಹತ್‌ ಮೊತ್ತದ ಅಗತ್ಯ ಇರುವುದರಿಂದ
ಸಂಪನ್ಮೂಲ ಕ್ರೋಡಿಕರಣ ಸರಕಾರಕ್ಕೆ ಬಲುದೊಡ್ಡ ಸವಾಲೇ ಸರಿ.

Advertisement

Udayavani is now on Telegram. Click here to join our channel and stay updated with the latest news.

Next