ಮಕ್ಕಳನ್ನು ಕೂಲಿಗೆ ಕಳುಹಿಸದೇ ಶಾಲೆಗೆ ಕಳುಹಿಸಬೇಕು. ಮಕ್ಕಳ ಭವಿಷ್ಯದ ಏಳಿಗೆಗೆ ಮಹತ್ವ ಕೊಡಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದು ಮಾಜಿ ಸಚಿವ ರೇವು ನಾಯ್ಕ ಬೆಳಮಗಿ ಹೇಳಿದರು.
Advertisement
ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಘಟಕದಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜರ 279ನೇಜಯಂತ್ಯುತ್ಸವ ಪ್ರಯುಕ್ತ ರವಿವಾರ ಇಲ್ಲಿನ ಪೊಲೀಸ್ ಠಾಣೆ ಪಕ್ಕದಲ್ಲಿನ ಬಯಲಿನಲ್ಲಿ ನಡೆದ ಬಂಜಾರ ಉತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಮಸ್ಕಿ ಕ್ಷೇತ್ರದ ವ್ಯಾಪ್ತಿಯಲ್ಲಿ 30 ತಾಂಡಾಗಳು ಬರುತ್ತಿದ್ದು, ಈಗಾಗಲೇ 15 ತಾಂಡಾಗಳಲ್ಲಿ ಸಂತ ಸೇವಾಲಾಲ್‌ರ ಭವನ ನಿರ್ಮಿಸಲಾಗಿದೆ. ತಾಂಡಾಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲಾಗಿದೆ. ಉಳಿದ ತಾಂಡಾಗಳಲ್ಲಿಯೂ ಬಂಜಾರ ಸಮಾಜದ ಸೇವಲಾಲ್ ಭವನ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬಂಜಾರ ಸಮಾಜ ಜಿಲ್ಲಾಧ್ಯಕ್ಷ ಹರೀಶಚಂದ್ರ ವಕೀಲ ಪ್ರಾಸ್ತಾವಿಕ ಮಾತನಾಡಿ, ಸಮಾಜ ಬಾಂಧವರು ದುಶ್ಚಟದಿಂದ ದೂರವಿರಬೇಕು. ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ತನ್ಮೂಲಕ ದೇಶ ಕಟ್ಟುವಲ್ಲಿ ಕೊಡುಗೆ ನೀಡಬೇಕು ಎಂದರು. ಬಿಜಿಪಿ ಮುಖಂಡ ಆರ್. ಬಸನಗೌಡ ತುರುವಿಹಾಳ, ಜೆಡಿಎಸ್ ಮುಖಂಡ ರಾಜಾ ಸೋಮನಾಥ ನಾಯ್ಕ, ರಾಜ್ಯ ಬಂಜಾರ ಸಮಾಜದ ಕಾರ್ಯದರ್ಶಿ ಪಾಂಡುರಂಗ ಪಮ್ಮಾರ ಮಾತನಾಡಿದರು.
ಜವಳಿ ಹಾಗೂ ಮುಜರಾಯಿ ಸಚಿವ ರುದ್ರಪ್ಪ ಲಮಾಣಿ ಗೈರಾಗಿದ್ದರೂ ಅವರು ಕಳುಹಿಸಿದ್ದ ಅಭಿನಂದನಾ ಸಂದೇಶವನ್ನು ಓದಿ ಸಭೆಗೆ ತಿಳಿಸಲಾಯಿತು. ಲಿಂಗಸುಗೂರಿನ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಗಬ್ಬೂರಪಾಡಿಯ ಬಳಿರಾಮ್ ಮಹಾರಾಜ, ನೀಲಾ ನಗರದ ಕುಮಾರ ಮಹಾರಾಜ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಐಬಿಎಸ್‌ಎಸ್ ರಾಜ್ಯಾಧ್ಯಕ್ಷ ಸುಭಾಷ ರಾಥೋಡ್, ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಉಪಾಧ್ಯಕ್ಷ ರವಿಕುಮಾರ ಪಾಟೀಲ್, ಅಂದಾನೆಪ್ಪ ಗುಂಡಳ್ಳಿ, ಬಸವಂತರಾಯ ಕುರಿ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳು ಹಾಗೂ ಗಣ್ಯರು, ಬಂಜಾರ ಸಮಾಜದ ಸಾವಿರಾರು ಜನ ಭಾಗವಹಿಸಿದ್ದರು.
ವೈಭವದ ಮೆರವಣಿಗೆಮಸ್ಕಿ: ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ತಾಲೂಕು ಘಟಕದಿಂದ ಸಂತ ಶ್ರೀ ಸೇವಾಲಾಲ್ ಮಹಾರಾಜರ 279ನೇ ಜಯಂತ್ಯುತ್ಸವ ಪ್ರಯುಕ್ತ ರವಿವಾರ ಹಮ್ಮಿಕೊಂಡ ಬಂಜಾರ ಉತ್ಸವದ ಅಂಗವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂತ ಸೇವಾಲಾಲ್‌ರ ಭಾವಚಿತ್ರ ಮೆರವಣಿಗೆಯನ್ನು ವೈಭವದಿಂದ ನಡೆಸಲಾಯಿತು. ಪೊಲೀಸ್ ಠಾಣೆ ಪಕ್ಕದಲ್ಲಿನ ಸಮಾವೇಶದ ಸ್ಥಳದಿಂದ ಆರಂಭವಾದ ಸಂತ ಸೇವಾಲಾಲ್‌ರ ಭಾವಚಿತ್ರ ಮೆರವಣಿಗೆಯಲ್ಲಿ ಬಂಜಾರ ಸಮಾಜದ ನೂರಾರು ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಕುಂಭಗಳನ್ನು ಹೊತ್ತು, ಕಳಶಗಳನ್ನು ಹಿಡಿದುಕೊಂಡು ಸಾಗಿದರು. ತೀಜ್, ಡೊಳ್ಳು, ಭಜನೆ, ವೀರಗಾಸೆ ನೃತ್ಯ ಮುಂತಾದ ವಾದ್ಯ ವೈಭವದೊಂದಿಗೆ ನಡೆದ ಮೆರವಣಿಗೆ ಕನಕ ವೃತ್ತ, ತೇರ ಬಜಾರ, ದೈವದಕಟ್ಟೆ, ಡಾ| ಖಲೀಲ್ ವೃತ್ತ, ಅಗಸಿ, ಅಶೋಕ ವೃತ್ತ, ಹಳೆ ಬಸ್ ನಿಲ್ದಾಣ ಮಾರ್ಗವಾಗಿ ಮರಳಿ ಸಮಾವೇಶದ ಸ್ಥಳಕ್ಕೆ ಆಗಮಿಸಿತು. ಇದೇ ವೇಳೆ ಬಂಜಾರ ಸಮಾಜದ ಧರ್ಮಗುರುಗಳನ್ನು ಸಾರೋಟದಲ್ಲಿ ಸಮಾವೇಶದ ಸ್ಥಳಕ್ಕೆ ಬರಮಾಡಿಕೊಳ್ಳಲಾಯಿತು. ಮೆರವಣಿಗೆಯಲ್ಲಿ ಬಂಜಾರ ಸಮಾಜದ ಯುವಕರು, ಯುವತಿಯರು, ಮಹಿಳೆಯರು ಲಂಬಾಣಿ ಪದಗಳನ್ನು ಹಾಡುತ್ತ, ಸಾಂಪ್ರದಾಯಿಕ ನೃತ್ಯ ಮಾಡುತ್ತ ಮೆರವಣಿಗೆಯ ಮೆರಗು ಹೆಚ್ಚಿಸಿದ್ದರು. ಹೈದ್ರಾಬಾದನ ಬಂಜಾರ ಕಲಾ ತಂಡ ಬಂಜಾರ ಸಮಾಜದ
ಸಂಪ್ರಾದಾಯಿಕ ಹಾಡುಗಳನ್ನು ಹಾಡುತ್ತಾ, ನೃತ್ಯ ಪ್ರದರ್ಶಿಸಿದರು. ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಹರೀಶಚಂದ್ರ ಬಿ.ರಾಠೊಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮರೇಶ ಅಂತರಗಂಗಿ, ಅಮರೇಶ ಅಡವಿಬಾವಿ ತಾಂಡಾ, ಭೀಮೇಶಪ್ಪ ಪೂಜಾರಿ ಹಡಗಲಿ ತಾಂಡಾ, ಹನುಮಂತ ರಾಠೊಡ, ಶಿವಾನಂದ, ದೇವಣ್ಣ ಮಸ್ಕಿ, ತಿಪ್ಪಣ್ಣ ರಾಠೊಡ, ಕೃಷ್ಣಪ್ಪ ಮಸ್ಕಿತಾಂಡಾ, ಉಮಾಪತಿ ಮಾರಲದಿನ್ನಿ ತಾಂಡಾ, ವಿಠಲ್ ಡಿಸಿ, ಶ್ರೀನಿವಾಸ ಚೌಹಾಣ, ಲಕ್ಷ್ಮಣ ರಾಠೊಡ ಟೇಲರ್, ಲೋಕೇಶ ರಾಠೊಡ, ಚಂದ್ರು ಕಲಕ ಬೆಂಚಮರಡಿ ತಾಂಡಾ ಸೇರಿದಂತೆ ಯುವಕರು, ಮಹಿಳೆಯರು ಸೇರಿದಂತೆ ಸಾವಿರಾರು ಜನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.