Advertisement

ಸಾಮಾಜಿಕ ಪಿಡುಗು ತೊಲಗಿಸುವುದು ಎಲ್ಲರ ಜವಾಬ್ದಾರಿ

02:46 PM Aug 22, 2017 | |

ಸಿಂದಗಿ: ಬಾಲ್ಯವಿವಾಹ, ಬಾಲ ಕಾರ್ಮಿಕ, ಜೀತ ಪದ್ಧತಿ ಈ ಎಲ್ಲ ಸಮಾಜದ ಪಿಡುಗುಗಳು ಹೋಗಲಾಡಿಸಲು ಮಕ್ಕಳಿಗೆ ಶಿಕ್ಷಣ ನೀಡುವುದು ಮುಖ್ಯ ಮಾರ್ಗವಾಗಿದೆ ಎಂದು ಶಿಕ್ಷಣ ಸಂಯೋಜಕ ವಿ.ಎಸ್‌. ಪಾಟೀಲ ಹೇಳಿದರು. ಸೋಮವಾರ ಪಟ್ಟಣದ ತಹಶೀಲ್ದಾರ್‌ ಕಚೇರಿಯ ಆವರಣದಲ್ಲಿ ಬಿಆರ್‌ಪಿ, ಸಿಆರ್‌ಪಿ, ವಸತಿ ನಿಲಯಗಳ ಮೇಲ್ವಿಚಾರಕರು ಹಾಗೂ ಅಂಗನವಾಡಿ ಮೇಲ್ವಿಚಾರಕರಿಗೆ ಮಕ್ಕಳ ಸಂರಕ್ಷಣೆ ಕುರಿತು ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಶಾಲೆಯಿಂದ ಹೊರಗುಳಿದ, ಅನಾಥ, ಚಿಂದಿ ಆಯುವ, ಎಚ್‌ಐವಿ ಸೊಂಕಿತ ಮಕ್ಕಳು, ಅಂಗವಿಕಲ ಮಕ್ಕಳನ್ನು ಗುರುತಿಸಿ ಅವರಿಗೆ ಸರಕಾರಿ ಶಾಲೆಯಲ್ಲಿ ಅಲ್ಲದೇ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆರ್‌ಟಿಇ ಅಡಿಯಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ ಅವರಿಗೆ ಶಿಕ್ಷಣ ನೀಡಲಾಗುತ್ತಿದೆ ಎಂದರು. ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಮಕ್ಕಳು
ಜಾಗೃತರಾಗುತ್ತಾರೆ. ಸಮಾಜಕ್ಕೆ ಉತ್ತಮ ಪ್ರಜೆಯನ್ನು ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಬೇರೆ ಬೇರೆ ಹಂತದಲ್ಲಿ ಮಕ್ಕಳಿಗೆ ಶಿಕ್ಷನ ನೀಡುವ ಜೊತೆಗೆ ಅವರ ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸುತ್ತಿದೆ. ನಾವೇಲ್ಲರೂ ಮಕ್ಕಳ ರಕ್ಷಣೆಗಾಗಿ ಕಂಕಣಬದ್ಧರಾಗೋಣ ಎಂದರು. ಕಾರ್ಯಾಗಾರ ಉದ್ಘಾಟಿಸಿ ಸಿಪಿಐ ಎಸ್‌.ಎಂ. ನ್ಯಾಮಣ್ಣವರ ಮಾತನಾಡಿ, ಮಕ್ಕಳ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿ, ಶಾಲಾ-ಕಾಲೇಜಿನ ಮುಖ್ಯಾಧ್ಯಾಪಕ ಹಾಗೂ ಪ್ರಾಚಾರ್ಯರು ಹೀಗೆ ಎಲ್ಲರೂ ಬಾಲ್ಯವಿವಾಹ ತಡೆಗಟ್ಟುವ ಅಧಿಕಾರ ಹೊಂದಿದ್ದಾರೆ. ನಾವೆಲ್ಲರೂ ಸೇರಿ ಬಾಲ್ಯವಿವಾಹ ತಡೆಯೋಣ ಎಂದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿ ಗೀತಾ ಗುತ್ತರಗಿಮಠ ಮಾತನಾಡಿ, ಜೀವನದಲ್ಲಿ ಬಾಲ್ಯ ಮುಖ್ಯವಾದದ್ದು. ಈ ಹಂತದಲ್ಲಿ ಮಕ್ಕಳ ರಕ್ಷಣೆ ಅತ್ಯವಶ್ಯಕ. ಅವರ ಭವಿಷತ್ತಿಗಾಗಿ ಜೀವನ ರೂಪಿತವಾಗಬೇಕು. ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ನೀಡುವ ಜೊತೆಗೆ ಅವರ ಹಕ್ಕುಗಳನ್ನು ಅಣುಭವಿಸಲು ಅವಕಾಶ ಮಾಡಿಕೊಡಬೇಕು ಎಂದರು. ಸಮಾಜದಲ್ಲಿ ಬಾಲಕಾರ್ಮಿಕ, ಜೀತ ಪದ್ದತಿ, ಬಾಲ್ಯವಿವಾಹ, ಲೈಂಗಿಕ ದೌರ್ಜನ್ಯ ಮುಂತಾದ ಅನಿಷ್ಠ ಪದ್ಧತಿ, ಕಾರ್ಯಗಳು ನಡೆಯುತ್ತಲಿವೆ. ಈ ಕೃತ್ಯಗಳು ತಡೆಯಲು ಸಾಕಷ್ಟು ಕಾನೂನುಗಳು ಇದ್ದರೂ ನಡೆಯುತ್ತಿರುವುದು ಕಾನೂನುಗಳ ಅರಿವಿನ ಕೊರತೆ ಕಾರಣವಾಗಿದೆ. ಬಾಲಕಾರ್ಮಿಕ, ಬಾಲ್ಯವಿವಾಹ, ಲೈಂಗಿಕ ದೌರ್ಜಜನ್ಯಗಳನ್ನು ತಡೆಯಲು ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದರು. ಸಮಾಜದಲ್ಲಿ ಅನಾಥ ಮಕ್ಕಳು, ನಿರ್ಗತಿಕರು, ಎಚ್‌ಐವಿ ಸೋಂಕಿತ ಮಕ್ಕಳು, ಬಾಲಕಾರ್ಮಿಕ ಮಕ್ಕಳು ಕಂಡು ಬಂದಲ್ಲಿ ಸಾರ್ವಜನಿಕರು ಜಿಲ್ಲೆಯಲ್ಲಿನ ಮಕ್ಕಳ ಕಲ್ಯಾಣ ಸಮಿತಿ ಅಥವಾ ಮಕ್ಕಳ ಕಲ್ಯಾಣ ರಕ್ಷಣಾ ಘಟಕಕ್ಕೆ ತಿಳಿಸಬೇಕು. ಅಂಥ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಅವರಿಗೆ ಮಕ್ಕಳ ವಾತಾವರ್ಣ ಕಲ್ಪಿಸಿಕೊಡಲಾಗುವುದು. ಅವರ ಉತ್ತಮ ಭವಿಷ್ಯ ನಿರ್ಮಾಣ ಮಾಡುವ ಜವಾಬ್ದಾರ ನಮ್ಮದಾಗಿದೆ ಎಂದರು. ಸಂಪನ್ಮೂಲ ವ್ಯಕ್ತಿಗಳಾದ ರಾಯಚೂರಿನ ಯುನಿಸೆಫ್‌ ಮಕ್ಕಳ ರಕ್ಷಣಾ ಘಟಕದ ಸುದರ್ಶನ, ಕೊಪ್ಪಳದ ಯುನಿಸೆಫ್‌ ಮಕ್ಕಳ ರಕ್ಷಣಾ ಘಟಕದ ತರಬೇತಿ ಸಂಯೋಜಕ ಶಿವರಾಮ ಅವರು ಮಕ್ಕಳ ರಕ್ಷಣೆ ಕುರಿತು ಉಪನ್ಯಾಸ ಮಾಡಿದರು. ಸಿಂದಗಿಯ ಸಾಂತ್ವಾನ ಕೇಂದ್ರದ ಸುಜಾತಾ ಕಲಬುರ್ಗಿ, ಬಿಆರ್‌ಪಿ ಎಂ.ಬಿ.ಯಡ್ರಾಮಿ, ಎಸ್‌.ಕೆ.ಗುಗ್ಗರಿ, ಸಿಆರ್‌ಪಿ ಎಚ್‌.ನಾಗಣಸೂರ, ರವಿ ರಾಠೊಡ, ಬಿಸಿಎಂ ವಸತಿ ನಿಲಯದ ಮೇಲ್ವಿಚಾರಕರಾದ ಎಸ್‌.ಎ.ಮುಲ್ಲಾ, ಎ.ಎಸ್‌. ಆಜುರ, ಪಿ.ಬಿ.ಬಿರಾದಾರ, ದಶರಥ ರಾಠೊಡ, ಐ.ಸಿ.ಅಂದೇವಾಡಿ, ಎಸ್‌.ಜಿ.ಪಾಟೀಲ, ಎನ್‌.ಜಿ.ನಾಸಿ, ಎಂ.ಡಿ.ನಂದಗೇರಿ, ನಂದಪ್ಪ ವೀರೇಶ ಬಡಿಗೇರ ಸೇರಿದಂತೆ ತಾಲೂಕಿನ ಬಿಆರ್‌ಪಿ, ಸಿಆರ್‌ಪಿ, ವಸತಿ ನಿಲಯಗಳ ಮೇಲ್ವಿಚಾರಕರು ಹಾಗೂ ಅಂಗನವಾಡಿ ಮೇಲ್ವಿಚಾರಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಗೀತಾ ಪುರಂದರಿ ಪ್ರಾರ್ಥನೆ ಹಾಡಿದರು. ಮಕ್ಕಳ ರಕ್ಷಣಾಧಿಕಾರಿ ಗೀತಾ ಗುತ್ತರಗಿಮಠ ಸ್ವಾಗತಿಸಿದರು. ಗುರುರಾಜ ಇಟ್ಟಗಿ
ನಿರೂಪಿಸಿದರು. ಬಸರಿ ಪೆಂಡಾರಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next