Advertisement

ಬಾಲ್ಯವಿವಾಹ ತಡೆಗೆ ರಾಜ್ಯಾದ್ಯಂತ ಸ್ಫೂರ್ತಿ: ಹೆಚ್ಚುತ್ತಿರುವ ಪಿಡುಗು ನಿಯಂತ್ರಣಕ್ಕೆ ಈ ಕ್ರಮ

11:37 PM Jun 24, 2022 | Team Udayavani |

ಬೆಂಗಳೂರು: ಸಾಮಾಜಿಕ ಪಿಡುಗು ಆಗಿರುವ ಬಾಲ್ಯ ವಿವಾಹವನ್ನು ತಡೆಗಟ್ಟಲು ಕೊಪ್ಪಳ ಜಿಲ್ಲೆಯಲ್ಲಿ ಜಾರಿಗೆ ತರಲಾದ “ಸ್ಫೂರ್ತಿ’ ಯೋಜನೆಯನ್ನು ರಾಜ್ಯದ ಇತರ ಜಿಲ್ಲೆಗಳಿಗೂ ವಿಸ್ತರಿಸಲು ಸರಕಾರ ಮುಂದಾಗಿದೆ.

Advertisement

ಬಾಲ್ಯ ವಿವಾಹ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಇದರ ನಿರ್ಮೂಲಕ್ಕೆ ಸರಕಾರಗಳು ಅನೇಕ ಯೋಜನೆ ಹಾಕಿಕೊಂಡಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಕೊರೊನಾ ಕಾಲದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚು ವರದಿಯಾಗಿವೆ. ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಮಾಣ ಶೇ. 21 ಇದೆ. ಈ ಹಿನ್ನೆಲೆಯಲ್ಲಿ ಸ್ಫೂರ್ತಿ ಯೋಜನೆಯನ್ನು ವಿಸ್ತರಿಸಲು ಸರಕಾರ ತೀರ್ಮಾನಿಸಿದೆ.

ಯೋಜನೆಯನ್ನು ವಿಸ್ತರಿಸಲಾಗು ವುದು ಎಂದು 2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಅದರಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಆರ್ಥಿಕ ಇಲಾಖೆಗೆ ಪ್ರಸ್ತಾವ ಕೊಪ್ಪಳದಲ್ಲಿ
2015ರಲ್ಲಿ “ಕರ್ನಾಟಕ ಹೆಲ್ತ್‌ ಪ್ರಮೋಷನ್‌ ಟ್ರಸ್ಟ್‌’ (ಕೆಎಚ್‌ಪಿಟಿ) ಎಂಬ ಸರಕಾರೇತರ ಸಂಸ್ಥೆ “ಸ್ಫೂರ್ತಿ’ ಯೋಜನೆಯನ್ನು ಜಾರಿಗೆ ತಂದಿತ್ತು. ಅದೇ ಮಾದರಿಯನ್ನು ಸರಕಾರ ಕೈಗೆತ್ತಿಕೊಂಡು ಮುಂದುವರಿಸಲು ತೀರ್ಮಾನಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಳುಹಿಸಿದ ಕೆಎಚ್‌ಪಿಟಿ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯ ಅನುಮೋದನೆ ಸಿಕ್ಕಿದ ತತ್‌ಕ್ಷಣ ಯೋಜನೆಯನ್ನು ಬೇರೆ ಜಿಲ್ಲೆಗಳಲ್ಲಿಯೂ ಅನುಷ್ಠಾನಗೊಳಿಸಲಾಗುತ್ತದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಏನಿದು “ಸ್ಫೂರ್ತಿ’ ಯೋಜನೆ?
ಹದಿಹರೆಯದ ಹೆಣ್ಣು ಮಕ್ಕಳ ಮೂಲಕವೇ ಇತರ ಬಾಲಕಿಯರು ಮತ್ತು ಹೆತ್ತವರಲ್ಲಿ ಜಾಗೃತಿ ಮೂಡಿಸುವುದು, ಶಿಕ್ಷಣ ನೀಡುವುದು, ಆತ್ಮವಿಶ್ವಾಸ ತುಂಬುವುದು ಸಹಿತ ಅನೇಕ ಸಮುದಾಯ ಆಧಾರಿತ ಕಾರ್ಯಕ್ರಮಗಳ ಅನುಷ್ಠಾನ “ಸ್ಫೂರ್ತಿ’ ಯೋಜನೆಯ ಮುಖ್ಯ ಉದ್ದೇಶ. ಕೊಪ್ಪಳ ಜಿಲ್ಲೆಯ ಆಯ್ದ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ 13ರಿಂದ 16 ವರ್ಷ ವಯಸ್ಸಿನ 3,600ಕ್ಕೂ ಹೆಚ್ಚು ಹದಿಹರೆಯದ ಹೆಣ್ಣುಮಕ್ಕಳನ್ನು ಗುರುತಿಸಿ ಅವರ ಮೂಲಕ ಸಮೀಕ್ಷೆ, ಜಾಗೃತಿ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಈ ಹಳ್ಳಿಗಳಲ್ಲಿ 30 ಸಾವಿರಕ್ಕೂ ಕುಟುಂಬಗಳು, 1.55 ಲಕ್ಷ ವ್ಯಕ್ತಿಗಳನ್ನು ಸಂದರ್ಶಿ ಸಲಾಯಿತು. 2014-15ರಲ್ಲಿ ಬಾಲ್ಯ ವಿವಾಹದಲ್ಲಿ ರಾಜ್ಯಕ್ಕೆ ನಂಬರ್‌ ವನ್‌ ಆಗಿದ್ದ ಕೊಪ್ಪಳ ಜಿಲ್ಲೆ ಸದ್ಯ ಏಳನೇ ಸ್ಥಾನಕ್ಕೆ ಇಳಿದಿದೆ ಎಂದು ಕರ್ನಾಟಕ ಹೆಲ್ತ್‌ ಪ್ರಮೋಷನ್‌ ಟ್ರಸ್ಟ್‌ನ ಪ್ರತಿನಿಧಿ ನಾರಾಯಣ ಹೇಳಿದ್ದಾರೆ.

ಬಾಲ್ಯ ವಿವಾಹ ತಡೆಗಟ್ಟುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿರುವ “ಸ್ಫೂರ್ತಿ’ ಯೋಜನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಹೆಣ್ಣುಮಕ್ಕಳ ಸಶಕ್ತೀಕರಣಕ್ಕಾಗಿ ಬಾಲ್ಯ ವಿವಾಹದಂಥ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆಗಳನ್ನು ಇರಿಸಿದೆ.
– ಹಾಲಪ್ಪ ಆಚಾರ್‌,
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ

Advertisement

-ರಫೀಕ್‌ ಅಹ್ಮದ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next