Advertisement

ನಿಮಗೆ ಕೆಲಸ ಬೇಕೇ?

06:00 AM Aug 28, 2018 | |

ಮಾಡೋ ಕೆಲಸ ಬಿಟ್ಟು ಫೇಸ್‌ಬುಕ್‌ ನೋಡೋದು ಒಂದು ಕಡೆಯಾದರೆ, ಮಾಡೋಕೆ ಒಂದು ಕೆಲಸ ಹುಡುಕಲೆಂದೇ ಫೇಸ್‌ಬುಕ್‌ ನೋಡುವುದು ಇನ್ನೊಂದು ಕಡೆ. ಇದು ಸಾಮಾಜಿಕ ಜಾಲತಾಣಗಳ ಎರಡು ವಿಭಿನ್ನ ಮುಖಗಳು. ಮನರಂಜನೆಯ ಜೊತೆಗೆ, ಅಗತ್ಯ ಮಾಹಿತಿಗಳನ್ನು ನೀಡುವ ಸಾವಿರಾರು ಎಫ್ಬಿ ಪೇಜುಗಳಲ್ಲಿ, “ನಿರುದ್ಯೋಗಿಗಳ ಪೇಜ್‌’ ಕೂಡ ಒಂದು. ಇಲ್ಲಿ ಎಲ್ಲ ಮಾಹಿತಿಗಳೂ ಕನ್ನಡದಲ್ಲಿಯೇ ಲಭ್ಯ ಎಂಬುದು ಈ ಪೇಜ್‌ನ ವೈಶಿಷ್ಟ್ಯ. 

Advertisement

ಯಾವಾಗಲೂ ಫೇಸ್‌ಬುಕ್‌ ನೋಡುತ್ತಲೇ ಇರುವವರಿಗೆ, “ನಿಂಗೇನು ಮಾಡೋಕೆ ಬೇರೆ ಕೆಲಸ ಇಲ್ವಾ?’ ಅಂತ ಕೇಳುವುದುಂಟು. ಮಾಡೋ ಕೆಲಸವನ್ನೆಲ್ಲ ಬಿಟ್ಟು ಎಫ್ಬಿ ಜಾಲಾಡುವವರಿಗೆ, ಕೆಲಸದ ಮಧ್ಯೆ ಪದೇಪದೆ ಏನನ್ನಾದರೂ ಪೋಸ್ಟ್‌, ಕಮೆಂಟ್‌, ಶೇರ್‌ ಮಾಡುತ್ತಲೇ ಇರುವವರಿಗೆ ಎದುರಾಗೋ ಪ್ರಶ್ನೆ ಇದು. “ಹೌದಪ್ಪಾ, ನನಗೆ ಮಾಡೋಕೆ ಕೆಲಸ ಇಲ್ಲ. ಅದಕ್ಕೇ ಫೇಸ್‌ಬುಕ್‌ ನೋಡ್ತಾ ಇದ್ದೀನಿ’ ಅಂತ ಧೈರ್ಯವಾಗಿ ಹೇಳಬಹುದು. ಯಾಕಂದ್ರೆ, ನಿರುದ್ಯೋಗಿಗಳಿಗೆ ಕೆಲಸದ ಮಾಹಿತಿ ನೀಡಲೆಂದೇ ಎಫ್ಬಿಯಲ್ಲಿ ನೂರಾರು ಪೇಜ್‌ಗಳಿವೆ. ಎಲ್ಲೆಲ್ಲಿ ಕೆಲಸ ಖಾಲಿ ಇದೆ, ಯಾವ ಇಲಾಖೆಯಲ್ಲಿ ಯಾವ ಹುದ್ದೆಗೆ ಅರ್ಜಿ ಕರೆಯಲಾಗಿದೆ, ಸ್ಪರ್ಧಾತ್ಮಕ ಪರೀಕ್ಷೆ ಪಾಸು ಮಾಡೋದು ಹೇಗೆ… ಎಂಬಿತ್ಯಾದಿ ವಿಷಯಗಳು ಒಂದೆಡೆ ಲಭ್ಯ.

  ಕೇಂದ್ರ ಸರ್ಕಾರಿ ನೌಕರಿಗಳ ಮಾಹಿತಿ ನೀಡಲು, ಐಟಿ, ಬಿಟಿ ಕ್ಷೇತ್ರದ ಉದ್ಯೋಗಾವಕಾಶಗಳನ್ನು ತಿಳಿಸಿಕೊಡುವ ಪೇಜ್‌ಗಳು ಇಂಗ್ಲಿಷ್‌, ಹಿಂದಿಯಲ್ಲಿದ್ದರೆ, ಕೆಲವು ಜಾಲತಾಣಿಗರು ಕನ್ನಡದಲ್ಲಿಯೇ ಮಾಹಿತಿ ನೀಡುತ್ತಿದ್ದಾರೆ. ಅಚ್ಚ ಕನ್ನಡಿಗರಿಗಾಗಿಯೇ ಇರುವ ಪೇಜ್‌ಗಳಲ್ಲಿ “ನಿರುದ್ಯೋಗಿಗಳ ಪೇಜ್‌’ ಕೂಡ ಒಂದು. ಉದ್ಯೋಗ ಮಾಹಿತಿಗಳನ್ನೆಲ್ಲ ಒಂದೆಡೆ ಕಲೆ ಹಾಕಿ, ಆ ಮಾಹಿತಿಯನ್ನು ಕನ್ನಡದಲ್ಲಿಯೇ ನೀಡಲು ಬದ್ಧವಾದ ಈ ಪೇಜ್‌ಗೆ ಸುಮಾರು 31 ಸಾವಿರ ಜನ ಫಾಲೋವರ್ಗಳಿದ್ದಾರೆ. ಉದ್ಯೋಗ ಮಾಹಿತಿಯ ಜೊತೆಗೇ, ಸಾಮಾಜಿಕ ಕಳಕಳಿಯ ವಿಡಿಯೊ, ಮಾಹಿತಿಗಳನ್ನು ಪೇಜ್‌ನಲ್ಲಿ ಶೇರ್‌ ಮಾಡಲಾಗುತ್ತದೆ. ಇತ್ತೀಚೆಗೆ ಈ ಪೇಜ್‌ನಲ್ಲಿ ಶೇರ್‌ ಆದ ಒಂದು ವಿಡಿಯೊ, ಲಕ್ಷಾಂತರ ಜನರನ್ನು ತಲುಪಿ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿತ್ತು. ಎಂಜಿನಿಯರಿಂಗ್‌ ಓದುತ್ತಿದ್ದ ಹುಡುಗಿಯೊಬ್ಬಳು, ತಾಯಿ ತನ್ನನ್ನು ಮನೆಯಿಂದ ಹೊರಹಾಕಿದ್ದಾಳೆಂದು ವಿಡಿಯೊ ಮಾಡಿ ಎಫ್ಬಿಯಲ್ಲಿ ಹಾಕಿದ್ದಳು. ಆ ವಿಡಿಯೊವನ್ನು ನೂರಾರು ಜನ ಶೇರ್‌ ಮಾಡಿದರು. ನಿರುದ್ಯೋಗಿಗಳ ಪೇಜ್‌ನಲ್ಲೂ ಆ ವಿಡಿಯೊ ಶೇರ್‌ ಆಯ್ತು. ಆ ಮೂಲಕ ಹುಡುಗಿಯ ನೋವಿನ ಕಥೆ ಲಕ್ಷಾಂತರ ಮಂದಿಯನ್ನು ತಲುಪಿತು. ವಿಷಯ ತಿಳಿದ ವಿದ್ಯಾರ್ಥಿ ಸಂಘಟನೆಗಳು ಆ ಹುಡುಗಿಯ ವಿಳಾಸ ಪಡೆದುಕೊಂಡು, ನ್ಯಾಯ ಒದಗಿಸಲು ನಿಂತರು. ಮಾಧ್ಯಮಗಳಲ್ಲಿಯೂ ಹುಡುಗಿಯ ಕಥೆ ಸುದ್ದಿಯಾಗಿ, ಆಕೆಯ ತಾಯಿಯನ್ನು ಕರೆದು ಬುದ್ಧಿ ಹೇಳುವಲ್ಲಿಗೆ ಕತೆ ಸುಖಾಂತ್ಯವಾಯ್ತು.

  ಹೀಗೆ ಯುವಜನರನ್ನು ಒಂದಲ್ಲಾ ಒಂದು ರೀತಿಯಲ್ಲಿ ಕೈಹಿಡಿಯುವ ಈ ಪೇಜ್‌, ಅನೇಕರಿಗೆ ಕೆಲಸವನ್ನೂ ಒದಗಿಸಿಕೊಟ್ಟಿದೆ.

ಯಾರು ಈ ಪೇಜ್‌ನ ರೂವಾರಿ?
ಫೇಸ್‌ಬುಕ್‌ನಲ್ಲಿ ಒಂದು ಪೇಜ್‌ ನಡೆಸುವುದು ಸುಲಭದ ವಿಷಯವಲ್ಲ. ನಾಲ್ಕೈದು ಜನರ ತಂಡವಾದರೂ ಜೊತೆಗಿರಬೇಕು. ಅಲ್ಲಲ್ಲಿ ಸಿಗುವ ಉದ್ಯೋಗ ಮಾಹಿತಿಗಳನ್ನು ಕಲೆ ಹಾಕಿ, ಜನರಿಗೆ ನೀಡುವುದಕ್ಕೆ ಅಪಾರ ತಾಳ್ಮೆ, ಸಮಯ ಬೇಕು. ಆದರೆ, “ನಿರುದ್ಯೋಗಿ ಪೇಜ್‌’ನ ಹಿಂದಿರುವುದು “ಒನ್‌ ಮ್ಯಾನ್‌ ಆರ್ಮಿ’. ಅವರೇ, ಉಮೇಶ ಎಂ.ಕೆ. ಮೈಸೂರು ಜಿಲ್ಲೆ, ಹುಣಸೂರು ತಾಲೂಕಿನ ಉಮೇಶ್‌, ಡಿಪ್ಲೊಮಾ ಓದಿ, ಸ್ವಂತ ಉದ್ಯೋಗದಲ್ಲಿದ್ದಾರೆ. ಯಾವತ್ತೂ ಸರ್ಕಾರಿ ಕೆಲಸ ಪಡೆಯಬೇಕೆಂಬ ಕನಸು ಕಾಣದ ಇವರಿಗೆ, ನಿರುದ್ಯೋಗದ ಬಿಸಿ ತಟ್ಟಿಲ್ಲವಂತೆ. ಆದರೆ, ಗೆಳೆಯರ ಬಳಗದಲ್ಲಿ ಅನೇಕರು ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಲು ಒದ್ದಾಡಿದ್ದನ್ನು, ಕೆಲಸ ಸಿಗದೆ ಹತಾಶರಾಗಿದ್ದನ್ನು ನೋಡಿದ್ದರು. ಕೆಲಸ ಹುಡುಕುತ್ತಿರುವವರಿಗೆ ಕೈಲಾದ ಸಹಾಯ ಮಾಡಬೇಕೆಂಬ ಯೋಚನೆ ಮೂಡಿದಾಗ ನೆನಪಾಗಿದ್ದು ಫೇಸ್‌ಬುಕ್‌. ಬಹುತೇಕ ಎಲ್ಲರೂ ಬಳಸುವ ಈ ಮಾಧ್ಯಮವನ್ನು ಬಳಸಿಕೊಂಡೇ ಉದ್ಯೋಗ ಮಾಹಿತಿ ನೀಡಲು ಒಂದು ವರ್ಷದ‌ ಹಿಂದೆ, “ನಿರುದ್ಯೋಗಿಗಳ ಪೇಜ್‌’ ಅನ್ನು ಸೃಷ್ಟಿಸಿದರು. 

Advertisement

ಎಲ್ಲಿಯೂ ಹೆಸರು ಹೇಳಿಲ್ಲ…
ದಿನಪತ್ರಿಕೆ, ಸರ್ಕಾರಿ ವೆಬ್‌ಸೈಟ್‌ಗಳು, ಟಿ.ವಿ, ಸಾಮಾಜಿಕ ಜಾಲತಾಣಗಳಿಂದ ಉದ್ಯೋಗ ಮಾಹಿತಿಗಳನ್ನು ಸಂಗ್ರಹಿಸುವ ಉಮೇಶ್‌, ಸುದ್ದಿಯ ಖಚಿತತೆಯ ಬಗ್ಗೆಯೂ ಸಾಕಷ್ಟು ಗಮನ ವಹಿಸುತ್ತಾರೆ. ತಾನು ಕೊಡುವ ಯಾವ ಮಾಹಿತಿಯೂ ಸುಳ್ಳಾಗಬಾರದು ಎಂದು ಯೋಚಿಸಿ ಕೊಡುವ ಲಿಂಕ್‌, ಫೋನ್‌ ನಂಬರ್‌ ಎಲ್ಲವೂ ಸರಿ ಇದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೇಗೆ ತಯಾರಿ ನಡೆಸಬೇಕು, ಯಾವ ರೀತಿಯ ಪ್ರಶ್ನೆಗಳು ಬರುತ್ತವೆ, ಯಾವೆಲ್ಲಾ ದಾಖಲೆಗಳು ಬೇಕಾಗುತ್ತವೆ ಎಂಬಿತ್ಯಾದಿ ಮಾಹಿತಿಗಳೂ ಈ ಪೇಜ್‌ನಲ್ಲಿವೆ. ತಮ್ಮ ಸ್ವಂತ ಪರಿಚಯವನ್ನು ಎಲ್ಲಿಯೂ ಹೇಳಿಕೊಳ್ಳದ ಉಮೇಶ್‌, ಇನ್‌ಬಾಕ್ಸ್ ನಲ್ಲಿ ಮಾಹಿತಿ ಕೇಳುವವರಿಗೂ ಉತ್ತರ ನೀಡುತ್ತಾರೆ. ಇದಕ್ಕೆಲ್ಲಾ ಜಾಸ್ತಿ ಹಣ ಖರ್ಚಾಗದಿದ್ದರೂ, ಸಾಕಷ್ಟು ಸಮಯ, ತಾಳ್ಮೆ ಬೇಕು. ಸ್ವಂತ ಲಾಭವಿಲ್ಲದೆ, ಬೇರೆಯವರಿಗೆ ಸಹಾಯವಾಗಲಿ ಎಂದು ದಿನದ ಒಂದಷ್ಟು ಸಮಯವನ್ನು ಅವರು ಈ ಪೇಜ್‌ನ ನಿರ್ವಹಣೆಗಾಗಿ ಎತ್ತಿಟ್ಟಿದ್ದಾರೆ. “ನೀವು ನೀಡಿದ ಮಾಹಿತಿಯಿಂದ ತುಂಬಾ ಉಪಕಾರವಾಯಿತು. ಥ್ಯಾಂಕ್ಸ್‌’ ಎನ್ನುವ ಮಾತುಗಳೇ ತಮಗೆ ಸ್ಫೂರ್ತಿ ಎನ್ನುತ್ತಾರೆ ಉಮೇಶ್‌.

ಕೆಲಸ ಕೊಡಿಸುವ ಆ್ಯಪ್‌ಗ್ಳು
1. ಉದ್ಯೋಗ ಬಿಂದು
2. ಕರ್ನಾಟಕ ಗವರ್ನ್ಮೆಂಟ್‌ ಜಾಬ್ಸ್ (karnataka government jobs)
3. ಕರ್ನಾಟಕ ಜಾಬ್ಸ್ (karnataka jobs)
4. ನೌಕರಿ ಮಾಹಿತಿ (Naukari mahithi)
5. ನೌಕರಿ ಗುರು (Naukari guru)
6. ಉದ್ಯೋಗ ಮಾಹಿತಿ 
7. ಕೋಸ್ಟಲ್‌ ಹಟ್‌.ಕಾಂ (Coastal hut.com)

ಎಲ್ಲಿದೆ ಜಾಬ್‌? ಹೇಳುವ ಯೂಟ್ಯೂಬ್‌!
1. ಉದ್ಯೋಗ ಬಿಂದು 
2. ಉದ್ಯೋಗ ನ್ಯೂಸ್‌ ಟಿವಿ
3. Ampua Jobs
4. ಉದ್ಯೋಗ ರಾಜ್‌
5. ಉದ್ಯೋಗ ವಾಹಿನಿ
6. ಜಾಬ್‌ ನ್ಯೂಸ್‌

ನೀವು ನಿರುದ್ಯೋಗಿಯಾಗಿದ್ದರೆ, ಇಲ್ಲಿ ಹೆಸರು ನೊಂದಾಯಿಸಿಕೊಳ್ಳಿ…
1. ಎಂಪ್ಲಾಯ್‌ಮೆಂಟ್‌ ಬ್ಯೂರೋ
1.ನೌಕರಿ.ಕಾಂ
3. ಫ‌ಸ್ಟ್‌ ನೌಕರಿ.ಕಾಂ (ಫ್ರೆಶರ್)
4. ಶೈನ್‌.ಕಾಂ
5. ಮಾನ್‌ಸ್ಟರ್‌ಇಂಡಿಯಾ.ಕಾಂ
6.ಟೈಮ್ಸ್‌ಜಾಬ್ಸ್.ಕಾಂ

ಕೇಂದ್ರ ಸರ್ಕಾರಿ ಕೆಲಸ ಬೇಕೇ?
1. ಗವರ್ನ್ಮೆಂಟ್‌ ಜಾಬ್‌ ನೋಟಿಫಿಕೇಶನ್‌- https://tinyurl.com/y9or8wdq
2. ಆಲ್‌ ಗವರ್ನ್ಮೆಂಟ್‌ ಆ್ಯಂಡ್‌ ಐಟಿ ಜಾಬ್ಸ್- https://tinyurl.com/ycnpdq62
3. ಗವರ್ನ್ಮೆಂಟ್‌ ಜಾಬ್‌ ಅಲರ್ಟ್‌- https://tinyurl.com/yb2zq2qm
4. ಗವರ್ನ್ಮೆಂಟ್‌ ಜಾಬ್‌ ಇನ್ಫೋ- https://tinyurl.com/y8q24wq9
5. ಗವರ್ನ್ಮೆಂಟ್‌ ಜಾಬ್‌ ನೋಟಿಫಿಕೇಶನ್‌- https://tinyurl.com/ybvjcyhg

ಎಚ್ಚರ ಮಿತ್ರರೇ…
1. ವೆಬ್‌ಸೈಟ್‌ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಉದ್ಯೋಗ ಮಾಹಿತಿಗಳು ಖಚಿತವೇ ಎಂದು ತಿಳಿದುಕೊಳ್ಳಿ. ಅಭ್ಯರ್ಥಿಗಳಿಂದ ಹಣ ತೆಗೆದುಕೊಂಡು ಮೋಸ ಮಾಡುವವರ ಬಗ್ಗೆ ಎಚ್ಚರವಿರಲಿ.
2. ನೀವು ಸೇರಲು ಬಯಸುತ್ತಿರುವ ಕಂಪನಿ, ಅಲ್ಲಿ ನೀವು ಮಾಡಬೇಕಾದ ಕೆಲಸದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿ.
3. ನಿಮ್ಮ ವಿದ್ಯಾರ್ಹತೆಗೆ ತಕ್ಕುದಾದ ಉದ್ಯೋಗ ಹುಡುಕಿ. ಕೆಲಸ ಸಿಗಲಿಲ್ಲವೆಂಬ ಹತಾಶೆಯಲ್ಲಿ ನಿಮ್ಮ ಮನಸ್ಸಿಗೆ ಇಷ್ಟವಿಲ್ಲದ ಕೆಲಸಕ್ಕೆ ಸೇರಿ, ನಂತರ ಪರಿತಪಿಸಬೇಡಿ. ತಾಳ್ಮೆ ಇರಲಿ.
4. ಕೆಲವು ಸಲ ವಾಟ್ಸಾಪ್‌ಗ್ಳಲ್ಲಿ ಬರುವಂಥ ಜಾಬ್‌ನ್ಯೂಸ್‌ಗಳೂ ಔಟ್‌ಡೇಟೆಡ್‌ ಆಗಿರುತ್ತವೆ. ನಿಮಗೆ ಬಂದಿರುವ ಸುದ್ದಿ ಹಳೆಯ ದಿನಧ್ದೋ ಹೇಗೆ ಎಂದು ಖಾತ್ರಿಪಡಿಸಿಕೊಳ್ಳಿ.

     
ಕೆಲಸ ಇಲ್ಲ ಅಂತ ಖನ್ನತೆಗೆ ಜಾರದಿರಿ…
ಎಷ್ಟೇ ಪ್ರಯತ್ನಪಟ್ಟರೂ ಕೆಲಸ ಸಿಗುತ್ತಿಲ್ಲ ಎಂದು ಖನ್ನತೆಗೆ ಜಾರುವವರಿದ್ದಾರೆ. ಆದರೆ, ಇದು ಕೊರಗುತ್ತಾ ಕೂರುವ ಸಮಯವಲ್ಲ. ನಿಮ್ಮನ್ನು ನೀವು ಒರೆಗೆ ಹಚ್ಚಿಕೊಳ್ಳುವ ಸಮಯ. ಈ ವೇಳೆ ನೀವು ಮಾಡಬೇಕಾದದ್ದು ಇಷ್ಟೇ…

– ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನೂರು ಹುದ್ದೆಗೆ ಸಾವಿರ ಜನ ಅರ್ಜಿ ಹಾಕುತ್ತಾರೆ. ಯಾರು ಅರ್ಹರೋ ಅವರಿಗೇ ಕಂಪನಿಗಳು ಮಣೆ ಹಾಕುವುದು. ಹಾಗಾಗಿ “ನನಗೇಕೆ ಕೆಲಸ ಸಿಗುತ್ತಿಲ್ಲ? ಬೇರೆಯವರಿಗಿಂತ ನಾನು ಯಾವುದರಲ್ಲಿ ಕಡಿಮೆಯಿದ್ದೇನೆ?’ ಎಂದು ಪ್ರಶ್ನಿಸಿಕೊಳ್ಳಿ. ಯಾಕೆಂದರೆ, ಎಲ್ಲಿ ಸೋಲುತ್ತಿದ್ದೀರೆಂದು ಒಮ್ಮೆ ಗೊತ್ತಾಗಿಬಿಟ್ಟರೆ, ಅದನ್ನು ಸರಿಪಡಿಸಿಕೊಳ್ಳುವುದು ಸುಲಭ.

– ನಿಮ್ಮ ಪ್ರತಿಭೆ, ಕೌಶಲಗಳಲ್ಲಿರುವ ಕೊರತೆಗಳನ್ನು ಗುರುತಿಸಿ, ಸರಿಪಡಿಸಿಕೊಳ್ಳಿ. ನೆನಪಿರಲಿ, ಇದು ಆತ್ಮಾವಲೋಕನವಾಗಬೇಕೇ ಹೊರತು “ಅಯ್ಯೋ, ನನಗೆ ಏನೂ ಗೊತ್ತಿಲ್ಲ’ ಎಂಬ ಕೀಳರಿಮೆಯಾಗಬಾರದು.

– ಕೆಲವು ಕೆಲಸಗಳಿಗೆ ಕಂಪ್ಯೂಟರ್‌ ಜ್ಞಾನ ಅಗತ್ಯ. ಅದಕ್ಕಾಗಿ ಬೇಸಿಕ್‌ ಕಂಪ್ಯೂಟರ್‌ ಕೋರ್ಸ್‌ಗಳನ್ನು ತೆಗೆದುಕೊಳ್ಳಿ.

– ನಿಮ್ಮ ಇಂಗ್ಲಿಷ್‌ ಕೌಶಲವನ್ನು ಹೆಚ್ಚಿಸಿಕೊಳ್ಳಿ. ಕನ್ನಡಿಯ ಮುಂದೆ ನಿಂತು ನಿಮ್ಮಷ್ಟಕ್ಕೆ ನೀವೇ ಇಂಗ್ಲಿಷ್‌ನಲ್ಲಿ ಮಾತನಾಡಿ. ಇದು ನಿಮ್ಮ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ.

– ಸೋಲೇ ಗೆಲುವಿನ ಸೋಪಾನ ಎಂಬುದನ್ನು ಮರೆಯದೆ, ಆತ್ಮವಿಶ್ವಾಸದಿಂದ ಮುನ್ನುಗ್ಗಿ.

ಪ್ರಿಯಾಂಕಾ ಎನ್‌.

Advertisement

Udayavani is now on Telegram. Click here to join our channel and stay updated with the latest news.

Next