Advertisement
ಇತ್ತೀಚಿನ ದಿನಗಳಲ್ಲಿ ಮೈತ್ರಿ ಸರ್ಕಾರದ ಮಂತ್ರಿಗಳು ಮತ್ತು ಎರಡೂ ಪಕ್ಷಗಳ ನಾಯಕರು ಅವಕಾಶ ಸಿಕ್ಕಾಗಲೆಲ್ಲಾ ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ಟೀಕಾಸ್ತಸ್ತ್ರ ಪ್ರಯೋಗಿಸುತ್ತಿದ್ದರೆ, ಯಾವುದೇ ಸಂದರ್ಭದಲ್ಲಿ ಬಿಜೆಪಿ ಬಗ್ಗೆ ಟೀಕೆ ಮಾಡದೆ ಮೃದುಧೋರಣೆ ತಳೆದಿರುವ ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಜಿ.ಟಿ.ದೇವೇಗೌಡ ಅವರು, ಕೇಂದ್ರ ಸರ್ಕಾರದ ನಿರ್ಧಾರಗಳು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರ ಬಗ್ಗೆ ಟೀಕೆ ಮಾಡದೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸುತ್ತಾ ಬಂದಿದ್ದಲ್ಲದೆ, ಬಿಜೆಪಿ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದರೆ ಬಿಜೆಪಿ ಸೇರುತ್ತೇನೆ ಎಂದು ಅರ್ಥವಲ್ಲ ಎಂದು ಸಮಜಾಯಿಷಿ ನೀಡುತ್ತಲೇ ಬಂದಿದ್ದಾರೆ.
Related Articles
Advertisement
ಉನ್ನತ ಶಿಕ್ಷಣ ಇಲಾಖೆಯಲ್ಲಷ್ಟೇ ಅಲ್ಲದೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ತಾವಾದರೂ ಬೇರೆಯವರು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು. ಆದರೂ ಬೀದಿ ರಂಪ ಮಾಡದೆ ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದರು.
ಭವಿಷ್ಯಕ್ಕಾಗಿ ಹುಡುಕಾಟ: 70ರ ದಶಕದಲ್ಲಿ ಸಹಕಾರ ಚಳವಳಿಯ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಜೊತೆಗೆ ರಾಜಕೀಯಕ್ಕೆ ಬಂದು ಎಪಿಎಂಸಿ, ಜಿಲ್ಲಾ ಪರಿಷತ್ ಅಧ್ಯಕ್ಷ, ಶಾಸಕ ಹೀಗೆ ಹಂತ ಹಂತವಾಗಿ ಉನ್ನತ ಸ್ಥಾನಕ್ಕೇರಿರುವ ಜಿಟಿಡಿ, ತಮ್ಮ ಪುತ್ರ ಜಿ.ಡಿ.ಹರೀಶ್ ಗೌಡ ಅವರನ್ನು ರಾಜಕೀಯವಾಗಿ ಬೆಳೆಸಲು ವೇದಿಕೆ ಸಿದ್ಧಗೊಳಿಸಿ, ಈಗಾಗಲೇ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರಾಗಿಸಿದ್ದಾರೆ.
ಜೊತೆಗೆ ಈ ಹಿಂದೆ ಜಿಟಿಡಿ ಪ್ರತಿನಿಧಿಸಿದ್ದ ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಾಕಷ್ಟು ಪೂರ್ವ ತಯಾರಿ ನಡೆಸಿದ್ದು, 2018ರ ವಿಧಾನಸಭೆ ಚುನಾವಣೆಯಲ್ಲೇ ಹುಣಸೂರು ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಆ ಸಂದರ್ಭದಲ್ಲಿ ಹುಣಸೂರು ಕ್ಷೇತ್ರದಲ್ಲಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ಓಡಾಟ, ಕಡೆಗೆ ಕಾಂಗ್ರೆಸ್ ತ್ಯಜಿಸಿ ಬಂದ ಎಚ್.ವಿಶ್ವನಾಥ್ ಅವರಿಗೆ ಕ್ಷೇತ್ರ ಬಿಟ್ಟು ಕೊಡಬೇಕಾಯಿತು.
ಚಾಮುಂಡೇಶ್ವರಿ ಕ್ಷೇತ್ರದಿಂದ ಶಾಸಕರಾಗಿದ್ದರೂ ಹುಣಸೂರು ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತ ಹೊಂದಿರುವ ಜಿಟಿಡಿ ಮತ್ತವರ ಕುಟುಂಬ, ಪಕ್ಷದ ಸೂಚನೆ ಮೇರೆಗೆ ಎಚ್.ವಿಶ್ವನಾಥ್ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತ್ತು.
2008ರ ವಿಧಾನಸಭೆ ಚುನಾವಣೆ ವೇಳೆ ಜೆಡಿಎಸ್ ತೊರೆದು ಬಿಜೆಪಿ ಸೇರಿ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಿಟಿಡಿ, ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ ವಿರುದ್ಧ ಸೋತರಾದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು.
ಸಿದ್ದರಾಮಯ್ಯ ಅವರು ತೊರೆದಿದ್ದ ಚಾಮುಂಡೇಶ್ವರಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಜಿಟಿಡಿ, 2013ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಆಯ್ಕೆಯಾದರು. 2018ರಲ್ಲಿ ವರುಣಾ ಕ್ಷೇತ್ರವನ್ನು ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಟ್ಟು, ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿದು ಜಯಭೇರಿ ಬಾರಿಸಿದ್ದರು.
ಜಿಟಿಡಿಗೆ ಸ್ವಾಗತ: ಸೋಮವಾರ ಸಚಿವ ಜಿಟಿಡಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದ್ದಾರೆ. ಅಪ್ಪ-ಮಕ್ಕಳ ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಮರಳಿ ಬರುತ್ತಿರುವ ಸಚಿವ ಜಿ.ಟಿ.ದೇವೇಗೌಡರಿಗೆ ಸುಸ್ವಾಗತ. ನಮ್ಮ ದೇಶದ ನೆಚ್ಚಿನ ಪ್ರಧಾನಿ ಶ್ರೀ ನರೇಂದ್ರಮೋದಿ ಜೀ ರವರು ದೇಶಕ್ಕೆ ನೀಡುತ್ತಿರುವ ಅಪಾರ ಯೋಜನೆಗಳನ್ನು ಇಷ್ಟಪಟ್ಟು ಬಿಜೆಪಿಗೆ ಸೇರುತ್ತಿರುವ ಜಿಟಿಡಿ ರವರಿಗೆ ಸುಸ್ವಾಗತ.
ನಿಮ್ಮ ಪುತ್ರ ಜಿ.ಡಿ.ಹರೀಶ್ ಗೌಡರಿಗೆ ಚುನಾವಣೆಗೆ ಟಿಕೆಟ್ ನೀಡದ ಜೆಡಿಎಸ್ ಪಕ್ಷ ಇದ್ದು ಸತ್ತಂತೆ. ಬಿಜೆಪಿಗೆ ಬಂದು ತಮ್ಮ ಚಾಮುಂಡೇಶ್ವರಿ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಮಾಡಬೇಕೆಂದು ಬಿಜೆಪಿಗೆ ಬರುತ್ತಿರುವ ಜಿಟಿಡಿ ಅವರಿಗೆ ಸುಸ್ವಾಗತ ಎಂದು ಬರೆದಿರುವ ಸಾಲು ಸಾಲು ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
* ಗಿರೀಶ್ ಹುಣಸೂರು