Advertisement
ಎಲ್ಲವೂ ಅಂದುಕೊಂಡಂತೆ ನಡೆದರೆ, ಮುಂದಿನ ತಿಂಗಳಿನಿಂದ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ನೂತನ ವಾಟ್ಸ್‌ಆ್ಯಪ್ ಗುಂಪುಗಳು ರಚನೆಯಾಗಲಿದ್ದು, ಸರಕಾರದ ಗ್ರಾಮೀಣಾಭಿವೃದ್ಧಿ ಮಾಹಿತಿ ಆಯಾ ಗ್ರಾ.ಪಂ. ವ್ಯಾಪ್ತಿಯ ಜನರಿಗೆ ಮೊಬೈಲ್‌ನಲ್ಲೇ ತಿಳಿದುಬರಲಿದೆ. ಆಯಾ ಗ್ರಾ.ಪಂ.ನಲ್ಲಿ ಆರಂಭವಾಗಲಿರುವ ವಾಟ್ಸ್‌ಆ್ಯಪ್ ಗುಂಪಿಗೆ ಅಲ್ಲಿನ ಪಿಡಿಒ ಅಡ್ಮಿನ್.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ರಾಜ್ಯದ ಆರ್‌ಡಿಪಿಆರ್ ಗ್ರಾಮವಾಣಿಯ ಮೊಬೈಲ್ ಸಂಖ್ಯೆಗೆ ಮೇ 31ರ ಒಳಗೆ ರಾಜ್ಯದ ಎಲ್ಲ ಪಿಡಿಒಗಳು ತಮ್ಮ ಹೆಸರು, ಹುದ್ದೆ, ಗ್ರಾ.ಪಂ., ತಾಲೂಕು, ಜಿಲ್ಲೆಯ ವಿವರಗಳನ್ನು ಮೆಸೇಜ್ ಮಾಡಬೇಕಿದೆ. ಇದು ಸ್ವೀಕೃತಿ ಆದ ಬಳಿಕ ಗ್ರಾಮವಾಣಿಯ ಪಟ್ಟಿಯಲ್ಲಿ ಸಂಬಂಧಿತ ಪಿಡಿಒಗಳು ಸೇರಲಿದ್ದಾರೆ. ಬಳಿಕ ಪ್ರತೀ ದಿನ ಗ್ರಾಮೀಣಾಭಿವೃದ್ಧಿ ಯೋಜನೆ, ಸ್ವತ್ಛತೆ, ಕುಡಿಯುವ ನೀರು ಸೇರಿದಂತೆ ವಿವಿಧ ಕಾರ್ಯಕ್ರಮ, ಚಟುವಟಿಕೆಗಳ ಬಗ್ಗೆ ಮಾಹಿತಿ, ಅಪ್‌ಡೇಟ್‌ಗಳನ್ನು ಪಿಡಿಒಗಳು ಪಡೆಯಲಿದ್ದಾರೆ.
ಹೀಗೆ ತಮಗೆ ರವಾನೆಯಾಗುವ ಮಾಹಿತಿ, ಅಪ್‌ಡೇಟ್‌ಗಳನ್ನು ಅವರು ಗ್ರಾ.ಪಂ. ಮಟ್ಟದ ವಾಟ್ಸ್‌ಆ್ಯಪ್ ಗುಂಪಿನ ಮೂಲಕ ಮರುಪ್ರಸಾರ ಮಾಡಬೇಕು. ಗುಂಪಿನಲ್ಲಿ ಯಾರ್ಯಾರು?
ಗ್ರಾ.ಪಂ. ವ್ಯಾಪ್ತಿಯ ಗ್ರಾ.ಪಂ., ತಾ.ಪಂ., ಜಿ.ಪಂ. ಚುನಾಯಿತ ಸದಸ್ಯರು, ಗ್ರಾ.ಪಂ, ಮಟ್ಟದ ಸರಕಾರಿ ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರ ವೃಂದ, ಯುವಕ-ಯುವತಿ ಮಂಡಳಿ, ವಿವಿಧ ಇಲಾಖೆಗಳ ಸಮಿತಿಗಳು, ವಿವಿಧ ಸಹಕಾರ ಸಂಘಗಳು, ಸರಕಾರೇತರ ಸಂಸ್ಥೆಗಳ ಸದಸ್ಯರು, ಸ್ವಚ್ಛಾಗ್ರಹಿಗಳು, ಸಮಾಲೋಚಕರ ಸಹಿತ ಇತರರನ್ನು ಒಳಗೊಂಡ ಕನಿಷ್ಠ 200 (ಗರಿಷ್ಠ ಮಿತಿಯಿಲ್ಲ) ಸದಸ್ಯರು ವಾಟ್ಸ್‌ಆ್ಯಪ್ ಗುಂಪಿನಲ್ಲಿ ಇರಲಿದ್ದಾರೆ.
Related Articles
ಕೇಂದ್ರದ ಸ್ವತ್ಛ ಭಾರತ್ ಮಿಷನ್ ಯೋಜನೆಯಡಿ ಜೂನ್ ತಿಂಗಳಿಡೀ ಗ್ರಾಮ ಮಟ್ಟದಲ್ಲಿ “ಸ್ವತ್ಛ ಮೇವ ಜಯತೇ’ ಎಂಬ ವಿಶೇಷ ಆಂದೋಲನ ನಡೆಯುವ ಸಂದರ್ಭದಲ್ಲಿ ಈ ವಾಟ್ಸ್‌ಆ್ಯಪ್ ಗುಂಪುಗಳು ಪರಿಣಾಮ ಬೀರಲಿವೆ. ಸದ್ಯ ಎಲ್ಲ ಪಿಡಿಒಗಳನ್ನು ಒಳಗೊಂಡಂತೆ ಗ್ರಾಮ ಸ್ವರಾಜ್, ಸ್ವತ್ಛ ಭಾರತ್ ಸೇರಿದಂತೆ ವಿವಿಧ ವಾಟ್ಸ್‌ಆ್ಯಪ್ ಗುಂಪುಗಳು ಜಿ.ಪಂ. ಸಿಇಒ ಅಡ್ಮಿನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ತಾಲೂಕು ಮಟ್ಟದಲ್ಲಿಯೂ ಇಂತಹ ಗುಂಪುಗಳಿದ್ದು, ಇದೇ ಮೊದಲ ಬಾರಿಗೆ ಗ್ರಾಮ ಮಟ್ಟದಲ್ಲಿ ಆರಂಭಿಸಲಾಗುತ್ತಿದೆ.
Advertisement
ವಾಟ್ಸ್‌ಆ್ಯಪ್ ಗುಂಪು ರಚನೆಗೆ ನಿರ್ದೇಶನಗ್ರಾಮೀಣಾಭಿವೃದ್ಧಿ ಕಾರ್ಯಕ್ರಮ, ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಗ್ರಾಮ ಮಟ್ಟದಲ್ಲಿ ಬಿತ್ತರಿಸಲು ವಾಟ್ಸ್‌ಆ್ಯಪ್ ಗುಂಪುಗಳನ್ನು ರಚನೆ ಮಾಡಲು ಸರಕಾರದಿಂದ ನಿರ್ದೇಶನ ಬಂದಿದೆ. ಗ್ರಾಮ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಇಂತಹ ಪರಿಕಲ್ಪನೆಯನ್ನು ಜಾರಿಗೊಳಿಸಲಾಗುತ್ತಿದೆ.
ಡಾ| ಸೆಲ್ವಮಣಿ ಆರ್. ದ.ಕ. ಜಿ.ಪಂ. ಸಿಇಒ ದಿನೇಶ್ ಇರಾ