Advertisement

Social Media; ಎಚ್ಚರದಿಂದ ನಿರ್ವಹಿಸಿದರೆ ಪ್ರಚಾರ,ಇಲ್ಲವಾದರೆ ಅಪಪ್ರಚಾರ !

12:57 PM Apr 17, 2023 | Team Udayavani |

ಉಡುಪಿ: ಮತದಾರರನ್ನು ತಲುಪಲು ಪ್ರತಿ ಪಕ್ಷಗಳೂ ಸಾಮಾಜಿಕ ಮಾಧ್ಯಮಗಳನ್ನು ಬಳಸುತ್ತಿದ್ದು, ಅವುಗಳ ಅಪಾಯದ ಕುರಿತೂ ತಮ್ಮ ಕಾರ್ಯಕರ್ತರಲ್ಲಿ ಅರಿವು ಮೂಡಿಸಲು ಹೆಚ್ಚು ಗಮನ ಕೊಡತೊಡಗಿವೆ. ಸಾಮಾಜಿಕ ಮಾಧ್ಯಮ ಎರಡು ಅಲಗಿನ ಕತ್ತಿ ಎಂಬುದನ್ನೂ ಮನದಟ್ಟು ಮಾಡಲಾಗುತ್ತಿದೆ.

Advertisement

ಅಭ್ಯರ್ಥಿಯ ಪ್ರಚಾರ ದೃಷ್ಟಿಯಿಂದ ಸಾಮಾಜಿಕ ಮಾಧ್ಯಮಗಳನ್ನು ಬಳಸಬೇಕು. ಕೊಂಚ ಎಚ್ಚರ ತಪ್ಪಿದರೆ ಪಕ್ಷದ ಅಭ್ಯರ್ಥಿಗೆ ಪ್ರಚಾರಕ್ಕಿಂತ ಅಪಪ್ರಚಾರ ವಾಗಬಹುದು ಎಂಬ ಆತಂಕದಲ್ಲಿರುವ ಬಿಜೆಪಿ ಸೇರಿದಂತೆ ಬಹುತೇಕ ಪಕ್ಷಗಳ ಸಾಮಾಜಿಕ ಮಾಧ್ಯಮ ನಿರ್ವಹಣ ಪರಿಣಿತರು, ಈ ಕುರಿತು ಕಾರ್ಯಕರ್ತರಿಗೆ ಪಾಠ ಮಾಡತೊಡಗಿದ್ದಾರೆ.

ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮಗಳಲ್ಲಿರುವವರು ತಮಗೆ ಬಂದ ಪೋಸ್ಟ್‌ಗಳನ್ನೆಲ್ಲಾ ಹಂಚಿಕೊಳ್ಳುವುದು, ಫಾರ್ವರ್ಡ್‌ ಮಾಡುವುದು ಅಥವಾ ಕಾಮೆಂಟ್‌ ಮಾಡುವುದು ಸಾಮಾನ್ಯ. ಕೆಲವೊಮ್ಮೆ ಅವು ವಿವಾದಕ್ಕೂ ಕಾರಣವಾಗಬಹುದು ಅಥವಾ ವಾಗ್ವಾದಕ್ಕೆ ಕಾರಣವಾಗಿ ಕಾಳ್ಗಿಚ್ಚಿನಂತೆ ಹರಡಬಹುದು. ಆಗ ನಮ್ಮ ವಿರೋಧಿಗಳು ಅವುಗಳನ್ನು ನಮ್ಮನ್ನೇ ಹಣಿಯಲು ಬಳಸಿಕೊಳ್ಳಬಹುದು. ನಾವೇ ಅವರ ಕೈಗೆ ಅಸ್ತ್ರ ಕೊಟ್ಟಂತಾಗುತ್ತದೆ. ಹಾಗಾಗಿ ಇದರ ಕುರಿತು ಸದಾ ಎಚ್ಚರದಿಂದ ಇದ್ದು ಅಭ್ಯರ್ಥಿಯ ಪರವಾಗಿ ಧನಾತ್ಮಕ ಪ್ರಚಾರಕ್ಕಷ್ಟೇ ಬಳಸಬೇಕು ಎಂಬುದನ್ನು ವಿವರಿಸಿ ಹೇಳಲಾಗುತ್ತಿದೆ.

ಯಾವುದೇ ಕಾರಣಕ್ಕೂ ತಮ್ಮ ಅಭ್ಯರ್ಥಿ ಅಥವಾ ಪಕ್ಷಕ್ಕೆ ನಕಾರಾತ್ಮಕವಾಗಬಲ್ಲ ಯಾವುದೇ ಪೋಸ್ಟ್‌ ಗಳಿಗೆ ಪ್ರತಿಕ್ರಿಯೆ ಇತ್ಯಾದಿ ಮಾಡಲೇ ಕೂಡದು ಎಂದು ಕಟ್ಟುನಿಟ್ಟಾದ ಸೂಚನೆ ನೀಡುತ್ತಿವೆ. ಪ್ರಚಾರದ ಭರಾಟೆಯಲ್ಲಿ ಪ್ರತಿಸ್ಪರ್ಧಿಗೆ ಲಾಭವಾಗದಂತೆ ಎಚ್ಚರ ವಹಿಸುವುದು ಹೇಗೆ? ಯಾವುದನ್ನು ಮರು ಟ್ವೀಟ್‌ ಮಾಡಬೇಕು? ಯಾವುದನ್ನು ಮಾಡಬಾರದು? ಯಾವುದಕ್ಕೆ ಪ್ರತಿಕ್ರಿಯಿಸಬೇಕು? ಯಾವುದಕ್ಕೆ ಪ್ರತಿಕ್ರಿಯಿಸಬಾರದು? ಯಾವುದನ್ನು ಇತರರಿಗೆ ಹಂಚಬೇಕು? ಯಾವುದನ್ನು ಹಂಚಬಾರದು? ಇತ್ಯಾದಿ ಸಂಗತಿಗಳ ಕುರಿತು ಅಪಾಯದ ಪ್ರಮಾಣವನ್ನೂ ಮನದಟ್ಟು ಮಾಡಿಕೊಡಲಾಗುತ್ತಿದೆ.

ಇದರೊಂದಿಗೆ ಕಾರ್ಯಕರ್ತರಿಗೆ ಸಾಮಾಜಿಕ ಮಾಧ್ಯಮಗಳನ್ನು ಬಳಸಬೇಕು, ಅದರಲ್ಲಿ ಪಾಲ್ಗೊಳ್ಳಬೇಕು ಎಂದೂ ಸೂಚಿಸಲಾಗುತ್ತಿದೆ. ಪಕ್ಷವು ಪ್ರಕಟಿಸುವ ಸಂಗತಿಗಳನ್ನು ಪ್ರಚಾರ ಮಾಡಬೇಕು, ಅಭ್ಯರ್ಥಿಗಳಿಗೂ ಇಂಥ ಪೋಸ್ಟ್‌ಗಳನ್ನು ಮಾತ್ರ ಹಾಕಬೇಕು ಇತ್ಯಾದಿ ಸೂಚನೆಯನ್ನೂ ನೀಡಲಾಗುತ್ತಿದೆ.

Advertisement

ಇದಲ್ಲದೇ ಅಭ್ಯರ್ಥಿಯ ಸಾಮಾಜಿಕ ಜಾಲತಾಣ ಅಥವಾ ಸಾಮಾಜಿಕ ಮಾಧ್ಯಮಗಳ ನಿರ್ವಹಣೆಗೆ ಬಿಜೆಪಿಯು ಪ್ರತ್ಯೇಕ ತಂಡವನ್ನು ನಿಯೋಜಿಸಿದೆ. ಜತೆಗೆ ಸಾಮಾಜಿಕ ಮಾಧ್ಯಮ ನಿರ್ವಹಣೆ ತಂಡಕ್ಕೆ ರಾಜ್ಯ ಹಾಗೂ ವಿಭಾಗ ಮಟ್ಟದಲ್ಲಿ ಪ್ರತ್ಯೇಕ ತರಬೇತಿ ನೀಡಲಾಗಿದೆ.

ಮೌನವೇ ಕ್ಷೇಮ
ಅಭ್ಯರ್ಥಿಗಳ ವಿರುದ್ಧ ಸಾಕ್ಷ್ಯಾಧಾರ ಇಲ್ಲದೇ ಆರೋಪಗಳು, ಕೆಟ್ಟ ರೀತಿಯಲ್ಲಿ ಬಿಂಬಿಸುವ ಪೋಸ್ಟರ್‌ಗಳನ್ನು ಹರಿಬಿಡಲಾಗುತ್ತದೆ. ಮಾನಹಾನಿಯಾಗುವಂಥ ಪೋಸ್ಟರ್‌ಗಳಿದ್ದಲ್ಲಿ ತತ್‌ಕ್ಷಣವೇ ದೂರು ದಾಖಲಿಸಬೇಕು. ಆದರೆ ಉದ್ದೇಶಪೂರ್ವಕವಾಗಿ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಡಿದ್ದರೆ, ಪ್ರತಿಕ್ರಿಯಿಸಬಾರದು. ಪ್ರತಿ ಪ್ರತಿಕ್ರಿಯೆಯೂ ಪ್ರತಿ ಸ್ಪರ್ಧಿಗೆ ಪ್ರಚಾರ ಅಸ್ತ್ರ ಆದೀತು. ಹೀಗಾಗಿ ಎಚ್ಚರ ಅವಶ್ಯ ಎಂದೂ ಹೇಳಲಾಗುತ್ತಿದೆ.

ಪ್ರಚಾರ ಶುರು
ಕರಾವಳಿ ಭಾಗದ ಎಲ್ಲ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದಾರೆ. ನಿತ್ಯವೂ ಹತ್ತಾರು ರೀತಿಯ ಪೋಸ್ಟ್‌ಗಳನ್ನು ಸಿದ್ಧಪಡಿಸಿ ಫೇಸ್‌ಬುಕ್‌, ಟ್ವಿಟರ್‌, ವಾಟ್ಸ್‌ಆ್ಯಪ್‌ ಇತ್ಯಾದಿಗಳಲ್ಲಿ ಹರಿ ಬಿಡಲಾಗುತ್ತಿದೆ. ಅಲ್ಲದೆ ಕಾರ್ಯಕರ್ತರು, ಬೆಂಬಲಿಗರು ಅಭ್ಯರ್ಥಿಗಳ ಪೋಸ್ಟ್‌ಗಳನ್ನು ವ್ಯಾಪಕ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ.

ಕಾಂಗ್ರೆಸ್‌ ಕೂಡ ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಎಚ್ಚರಿಕೆಯಿಂದ ಬಳಸುವ ನಿಟ್ಟಿನಲ್ಲಿ ಸಾಕಷ್ಟು ಶ್ರಮಿಸುತ್ತಿದೆ. ತಮ್ಮ ನಾಯಕರ ಪರ ಹಾಗೂ ವಿರುದ್ಧವಾಗಿ ಆಗುತ್ತಿರುವ ಟ್ರೋಲ್ , ವೈರಲ್‌ ವೀಡಿಯೋಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲು ಪ್ರತ್ಯೇಕ ತಂಡಗಳನ್ನು ರೂಪಿಸಿಕೊಂಡಿವೆ. ಕೆಲವು ಅಭ್ಯರ್ಥಿಗಳು ತಾವಾಗಿಯೇ ತಂಡ ರಚಿಸಿಕೊಂಡಿದ್ದರೆ, ಇನ್ನು ಕೆಲ ಅಭ್ಯರ್ಥಿಗಳು ಪಕ್ಷದ ನೆಲೆಯಲ್ಲಿ ಇರುವ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿದ್ದಾರೆ.

*ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next