ರೋಣ: ತಾಲೂಕಿನ ಕರಮುಡಿ ಗ್ರಾಮದ ದಲಿತರು ಹಾಗೂ ಸವರ್ಣಿಯರ ನಡುವೆ ನಡೆದ ಅಸ್ಪೃಶ್ಯತೆ ಜಗಳ ತಾರಕಕ್ಕೇರಿದಾಗ ಉಡುಪಿ ಶ್ರೀಕೃಷ್ಣ ಮಠದ ಯತಿವರೇಣ್ಯರಾದ ಪೇಜಾವರ ಶ್ರೀಗಳು 2013ರಲ್ಲಿ ಕರಮುಡಿ ಗ್ರಾಮಕ್ಕೆ ಭೇಟಿ ನೀಡಿದ್ದರು.
ದಲಿತರು ಮತ್ತು ಸವರ್ಣಿಯರನ್ನು ಒಂದೇ ಕಡೆ ಸೇರಿಸಿ ರಾಜಿ ಸಂಧಾನ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದ ಶ್ರೀಗಳ ಅಗಲಿಕೆ ನೆನಪು ಇಲ್ಲಿನ ಜನರನ್ನು ಕಾಡುತ್ತಿದೆ.
ಮೌಡ್ಯತೆ ಹೋಗಲಾಡಿಸಿದ ಶ್ರೀ: ಸಮಾನತೆ-ಸಹಕಾರ ಮೂರ್ತಿಯಾಗಿದ್ದ ಪೇಜಾವರ ಶ್ರೀಗಳು ಗ್ರಾಮದಲ್ಲಿ ದಲಿತರು ಹಾಗೂ ಮೇಲ್ವರ್ಗದ ಜನರ ಜಗಳದಿಂದ ಅಶಾಂತವಾಗಿದ್ದ ಗ್ರಾಮಕ್ಕೆ ಭೇಟಿ ನೀಡಿ ಎರಡೂ ಬಣಗಳನ್ನು ಒಂದೇ ವೇ ದಿಕೆಯಲ್ಲಿ ಕೂಡಿಸಿ ಅವರಲ್ಲಿದ್ದ ಮೌಡ್ಯತೆ ಹೋಗಲಾಡಿಸಿ ಗ್ರಾಮದಲ್ಲಿದ್ದ ಕ್ಷೌರದಂಗಡಿ, ಕೆರೆ, ದೇವಸ್ಥಾನ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ದಲಿತರನ್ನು ಪ್ರವೇಶಿಸಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ.
ಭಾವೈಕ್ಯತೆ ಮೆರೆದ ಯತಿಗಳು ಜ್ಞಾನ ವೈರಾಗ್ಯದ ಜೊತೆಗೆ ಜಗತ್ತಿಗೆ ಶಾಂತಿ ಸಾರಿದ ಮಹಾನ್ ಸಂತರು. ಸಣ್ಣ ಗ್ರಾಮದ ಕಾರ್ಯಕ್ರಮಕ್ಕೆ ಕರೆಯೋಲೆ ನೀಡಿದಾಗ ಸಹಕಾರ ಮನೋಭಾವದಿಂದ ಒಪ್ಪಿಕೊಂಡರು. ನಂತರ ಬಂದು ಕಾರ್ಯಕ್ರಮ ಯಶಸ್ವಿಗೊಳಿಸಿ ಭಕ್ತರಿಗೆ ಆಶೀರ್ವದಿಸಿದ್ದು ಅವರ ದೊಡ್ಡತನ ಎನ್ನುತ್ತಾರೆ ಸೂಡಿ ಚಿಂದಬರ ಮಠದ ಅರ್ಚಕ ಭುಜಂಗಶರ್ಮ ಜೋಶಿ.