ಕೆ.ಆರ್.ನಗರ : ಪ್ರತಿಯೊಬ್ಬ ನಾಗರಿಕನೂ ಆರ್ಥಿಕ ಅಭಿವೃದ್ಧಿ ಹೊಂದಿದಾಗ ಮಾತ್ರ ಸಾಮಾಜಿಕ ನ್ಯಾಯ ವನ್ನು ಪಡೆಯಲು ಸಾಧ್ಯವಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ಪಟ್ಟಣದ ವಾಸವಿ ಮಹಲ್‌ನಲ್ಲಿ ನಡೆದ ಅಂಬೇಡ್ಕರ್ ವಿವಿಧೋದ್ಧೇಶ ಸಹಕಾರ ಸಂಘದ 2020-21ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಎಲ್ಲರೂ ಸಹಕಾರ ಸಂಘಗಳಲ್ಲಿ ಷೇರು ದಾರ ರಾಗಿ ತಮ್ಮ ಆರ್ಥಿಕ ಚಟುವಟಿಕೆ ನಡೆಸಬೇಕು ಎಂದರು.
ಸಲಹೆ, ಸಹಕಾರ ನೀಡಿ: ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಬೇಡ್ಕರ್ ವಿವಿದೋದ್ಧೇಶ ಸಹಕಾರ ಸಂಘದ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸುವುದರ ಜತೆಗೆ ಹಣಕಾಸಿನ ವಹಿವಾಟನ್ನು 100 ಕೋಟಿಗೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕೆ ಪ್ರತಿಯೊಬ್ಬರೂ ಅಗತ್ಯ ಸಲಹೆ ಮತ್ತು ಸಹಕಾರ ನೀಡಬೇಕು ಎಂದು ತಿಳಿಸಿದರು.
ಉತ್ತಮ ಸಂಘಟನೆ: 2012ರಲ್ಲಿ ಆರಂಭವಾದ ನಮ್ಮ ಸಂಘವು ರಾಜ್ಯದಲ್ಲಿಯೇ ಉತ್ತಮವಾದ ಸಂಘಟನೆ ಎಂಬ ಪ್ರಶಸ್ತಿ ಪಡೆದಿದ್ದು, ಮೂರು ವರ್ಷಗಳ ಹಿಂದೆ ಪ್ರಾರಂಭವಾದ ಕೆ.ಆರ್.ನಗರ ಶಾಖೆಯು ಅದ್ಭುತವಾದ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. 3.28 ಲಕ್ಷ ರೂ. ನಿವ್ವಳ ಲಾಭ: ಸಂಘದ ಅಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ, ಸಂಘದ ಕೆ.ಆರ್. ನಗರ ಶಾಖೆಯು ಕಳೆದ 3 ವರ್ಷಗಳಲ್ಲಿ 3.28 ಲಕ್ಷ ರೂ., ನಿವ್ವಳ ಲಾಭ ಗಳಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಸದಸ್ಯರನ್ನು ಸೇರ್ಪಡೆ ಮಾಡಿಕೊಂಡು ಕಾರ್ಯ ಚಟುವಟಿಕೆ ವಿಸ್ತಾರ ಮಾಡಲಾಗುತ್ತದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಕಡ್ಡಾಯವಾಗಿ ನಮ್ಮ ಸಂಘದ ಸದಸ್ಯತ್ವ ಪಡೆದು ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಆರ್ಥಿಕ ಚಟುವಟಿಕೆ ಯಲ್ಲಿ ಪಾಲ್ಗೊಂಡು ಸ್ವಾವಲಂಬನೆ ಸಾಧಿಸಬೇಕು ಎಂದು ಸಲಹೆ ನೀಡಿದರು. ಜಿಪಂ ಮಾಜಿ ಸದಸ್ಯ ಅಚ್ಯುತಾನಂದ ಮಾತನಾಡಿ ದರು.
ಐಐಟಿಯಲ್ಲಿ ಉತ್ತಮ ಸಾಧನೆ ಮಾಡಿದ ಲಾಳನಹಳ್ಳಿ ಗ್ರಾಮದ ವಿದ್ಯಾರ್ಥಿನಿ ರಂಜಿತಾಳನ್ನು ಸ್ವಾಮೀಜಿ ಸನ್ಮಾನಿಸಿದರು. ದಲಿತ ಮುಖಂಡ ಹನಸೋಗೆನಾಗರಾಜು, ಲೇಖಕ ಎನ್.ಆರ್.ಶಿವರಾಮು, ತಾಪಂ ಮಾಜಿ ಸದಸ್ಯ ಎಂ.ತಮ್ಮಣ್ಣ, ನಿವೃತ್ತ ಶಿಕ್ಷಕ ಹೆಚ್. ಬಿ.ಸಂಪತ್, ಮುಖಂಡ ಶ್ರೀನಿವಾಸ್ ಹಾಜರಿದ್ದರು.