ಗೊರೇಬಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಲ್ಲ ವರ್ಗಗಳ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದು, ಸಾಮಾಜಿಕ ನ್ಯಾಯ ಕಾಪಾಡಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಹಂಪನಗೌಡ ಬಾದರ್ಲಿ ಹೇಳಿದರು.
ಸಿಂಧನೂರು ತಾಲೂಕಿನ ಚನ್ನಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಚನ್ನಳ್ಳಿ ಗ್ರಾಮಕ್ಕೆ ಶಾಲಾ ಕಟ್ಟಡ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. ಈಗಾಗಲೇ 20 ಲಕ್ಷ ರೂ. ವೆಚ್ಚದ ಪ್ರೌಢಶಾಲಾ ಕಟ್ಟಡ, 25 ಲಕ್ಷ ವೆಚ್ಚದ ಸಮುದಾಯ ಭವನ, 83 ಲಕ್ಷ ವೆಚ್ಚದ ಸಿಸಿ ರಸ್ತೆಗೆ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಯಾವುದೇ ಜಾತಿಗೆ ಸೀಮಿತವಾಗಿಲ್ಲ. ತನ್ನದೇ ಆದ ತತ್ವ ಸಿದ್ದಾಂತ, ವಿಚಾರದಲ್ಲಿ ನಡೆಯುತ್ತಿದೆ. ಬೇರೆ ಪಕ್ಷದವರು ಒಂದು ಮಾಡಿದರೆ ನೂರು ಹೇಳುತ್ತಾರೆ. ಆದರೆ ನಾವು ಪ್ರಚಾರಕ್ಕೆ ಆದ್ಯತೆ ಕೊಟ್ಟಿಲ್ಲ. ಪ್ರತಿಯೊಬ್ಬರ ರಕ್ಷಣೆ ನಮ್ಮ ಸರ್ಕಾರದ ಆದ್ಯತೆಯಾಗಿದೆ. ವಿಶೇಷವಾಗಿ ಪರಿಶಿಷ್ಟ ಜಾತಿ, ತುಳಿತಕ್ಕೊಳಗಾದ ಪಂಗಡದ ಅಭಿವೃದ್ಧಿಗಗೆ ವಿಶೇಷ ಕಾನೂನು ರೂಪಿಸುವ ಮೂಲಕ ದೇಶದಲ್ಲಿ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದೆ.
ಹೈ-ಕ ಭಾಗದ ಅಸಮಾನತೆ ತೊಲಗಿಸಲು ವಿಶೇಷ ಸ್ಥಾನಮಾನ ನೀಡಲು ಸಂವಿಧಾನದ ಕಲಂ 371(ಜೆ)ಗೆ ತಿದ್ದುಪಡಿ ತಂದು ಈ ಭಾಗದ ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ಉದ್ಯೋಗದಲ್ಲಿ ಶೇ.80 ಹಾಗೂ ಶಿಕ್ಷಣದಲ್ಲಿ ಶೇ.75ರಷ್ಟು ಮೀಸಲಾತಿ ನೀಡಿದ್ದು ಕಾಂಗ್ರೆಸ್ ಕೊಡುಗೆಯಾಗಿದೆ. ಹೈಕ ಭಾಗದಲ್ಲಿ ಸುಮಾರು 30 ಸಾವಿರ ಹುದ್ದೆಗಳು ಖಾಲಿಯಿದ್ದು, ಅದರಲ್ಲಿ 12 ಸಾವಿರ ಹುದ್ದೆಗಳನ್ನು
ಈಗಾಗಲೇ ಭರ್ತಿ ಮಾಡಲಾಗಿದೆ. ಶೇ.80ರಷ್ಟು ಹುದ್ದೆಗಳು ಈ ಭಾಗದವರಿಗೆ ದೊರೆಯುತ್ತವೆ ಎಂದು ವಿವರಿಸಿದರು.
ಜಿಪಂ ಸದಸ್ಯ ಬಸವರಾಜ ಹಿರೇಗೌಡರ ಮಾತನಾಡಿ, ಶಾಸಕರು ರೌಡಕುಂದಾ ಜಿಪಂ ಕ್ಷೇತ್ರಕ್ಕೆ ಬರುವ ಎಲ್ಲ ಗ್ರಾಮಗಳಿಗೆ ಸಿಸಿ ರಸ್ತೆ, ಚರಂಡಿ, ಪ್ರೌಢಶಾಲೆಗಳು, ಶುದ್ಧ ಕುಡಿಯುವ ನೀರಿನ ಘಟಕಗಳು, ಶಾಲಾ ಕಂಪೌಂಡ್ ಸೇರಿ ಹಲವು ಕಾಮಗಾರಿಗೆ ಅನುದಾನ ನೀಡಿದ್ದಾರೆ. ಇದನ್ನು ಸಹಿಸದ ಕೆಲ ಪಕ್ಷಗಳವರು ಜಾತಿ ಹೆಸರಿನಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಎಂದು ಆರೋಪಿಸಿದರು. ಗ್ರಾಮದ ಮುಖಂಡರು, ಮುಖ್ಯ ಗುರುಗಳು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.