ವಿಜಯಪುರ: ಕೋವಿಡ್ ಸೋಂಕಿತನ ಕುಟುಂಬಕ್ಕೆ ಸ್ಥಳೀಯರು ಸಾಮಾಜಿಕ ಬಹಿಷ್ಕಾರ ಹಾಕಿದ ಕಾರಣ ಜೀವನ ನಿರ್ವಹಣೆ ಯಸಮಸ್ಯೆಗೆ ಸಿಲುಕಿದ ಸೋಂಕಿತನ ಕುಟುಂಬ ಪ್ರಧಾನಿ, ಮುಖ್ಯಮಂತ್ರಿ, ಆರೋಗ್ಯ ಸಚಿವರಿಗೆ ಟ್ವೀಟ್ ಮಾಡಿ ರಕ್ಷಣೆಗೆ ಮೊರೆ ಇಟ್ಟಿದೆ.
ವಿಜಯಪುರ ಮಹಾನಗರದ ಚಾಲುಕ್ಯ ನಗರದಲ್ಲಿ ಪುಣೆಯಿಂದ ಮರಳಿದ ವ್ಯಕ್ತಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಸೋಂಕು ದೃಢಪಟ್ಟಿರುವ ವ್ಯಕ್ತಿಯನ್ನು ಮನೆಯ ಮೊದಲ ಮಹಡಿಯಲ್ಲಿ ಪ್ರತ್ಯೇಕಿಸಿ ಐಸೋಲೇಟ್ ಮಾಡಿದ್ದಾರೆ. ಸೋಂಕಿತನಿಗೆ ಆರೋಗ್ಯ ಇಲಾಖೆ ಮಾತ್ರೆ, ಔಷಧ ನೀಡಿದೆ. ಸೋಂಕಿತನ ಸಂಪರ್ಕದಲ್ಲಿದ್ದ ಕುಟುಂಬದ ಇತರೆ 6 ಜನ ನೆಲಮಾಳಿಗೆ ಮನೆಯಲ್ಲಿ ವಾಸ ಇದ್ದಾರೆ.
ಸೋಂಕಿತನ ಕುಟುಂಬದ ಜೊತೆ ಯಾರೂ ಸಂಪರ್ಕ ಇರಿಸಿಕೊಳ್ಳಬಾರದು, ಸೋಂಕಿತನ ಮನೆಗೆ ಹಾಲು, ತರಕಾರಿ, ಪೇಪರ್ ಸೇರಿದಂತೆ ಯಾವುದೇ ಅಗತ್ಯ ವಸ್ತು ಪೂರೈಕೆ ಮಾಡಬಾರದು ಎಂದು ಸ್ಥಳೀಯ ಕೆಲವರು ತಕರಾರು ಮಾಡಿದ್ದಾರೆ. ಸಾಲದ್ದಕ್ಕೆ ಮನೆ ಕೆಲಸಗಾರರಿಗೂ ಕೆಲಸಕ್ಕೆ ಬರದಂತೆ ಅಡಚಣೆ ಮಾಡಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ಇದರಿಂದ ತೀವ್ರವಾಗಿ ಕಂಗಾಲಾದ ಸೋಂಕಿತನ ಕುಟುಂಬದ ಸದಸ್ಯರೊಬ್ಬರು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ಟ್ವೀಟ್ ಮಾಡಿ ನೆರವಿಗೆ ಮೊರೆ ಇಟ್ಡಿದೆ.
ಈ ವಿಷಯ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಕೂಡಲೇ ಸ್ಥಳಕ್ಕೆ ಮಹಾನಗರ ಪಾಲಿಕೆ ಆಯುಕ್ತರನ್ನು ಕಳಿಸಿದ್ದು, ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗಿದೆ.
ಈ ಮಧ್ಯೆ ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ್ದು, ತಕ್ಷಣ ಈ ಕುರಿತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.