ಕೋವಿಡ್ ವೈರಸ್ ಹರಡುವಿಕೆ ತಡೆಗಟ್ಟುವಲ್ಲಿ ಕೈಗೊಳ್ಳುವ ಮುನ್ನೆಚ್ಚರಿಕೆಗಳು ಹೇಗೆ ಪರಿಣಾಮಕಾರಿ ಎಂಬುದನ್ನು ಯುಎಇಯಲ್ಲಿರುವ ಕೇರಳದ ಆರು ಯುವಕರು ತೋರಿಸಿಕೊಟ್ಟಿದ್ದಾರೆ.
ಅಬುಧಾಬಿಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಈ ಯುವಕರು ಒಂದೇ ಬಾಡಿಗೆ ರೂಮಿನಲ್ಲಿ ವಾಸವಾಗಿದ್ದರು. ಅವರಲ್ಲೊಬ್ಬನಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಸ್ಯಾಂಪಲ್‌ಗಳನ್ನು ಟೆಸ್ಟ್‌ಗೆ ಕಳುಹಿಸಲಾಗಿತ್ತು.
ತತ್ ಕ್ಷಣವೇ ಜಾಗೃತರಾದ ಉಳಿದ ಐವರು ಮುನ್ನೆಚ್ಚರಿಕೆಗಳನ್ನು ಕೈಗೊಂಡರು. ನೆಲಕ್ಕೆ ಟೇಪ್ ಅಂಟಿಸುವ ಮೂಲಕ ಕೊಠಡಿಯನ್ನು ಆರು ಭಾಗಗಳಾಗಿ ವಿಂಗಡಿಸಿ, ಒಬ್ಬೊಬ್ಬರೂ ಒಂದೊಂದು ಭಾಗದಲ್ಲಿ ಇರಲಾರಂಭಿಸಿದರು. ಜ್ವರದಲ್ಲಿದ್ದವನನ್ನು ಸರದಿ ಪ್ರಕಾರ ನೋಡಿಕೊಂಡರು.
ಮಾಸ್ಕ್, ಗ್ಲೌಸ್‌ಗಳನ್ನು ಸದಾ ಕಾಲ ಧರಿಸಿದರು. ಅಡುಗೆ ಪಾತ್ರೆಗಳನ್ನು ಪ್ರತ್ಯೇಕವಾಗಿಸಿಕೊಂಡರು. ಕೊಠಡಿಯ ನೆಲ ಮತ್ತಿತರ ಸಾಮಗ್ರಿಗಳನ್ನು ಪ್ರತಿಯೊಬ್ಬರು ಗಂಟೆಗೊಮ್ಮೆ ಕ್ರಿಮಿನಾಶಕಗಳಿಂದ ಸ್ವಚ್ಛಗೊಳಿಸುತ್ತಿದ್ದರು. ಕೊಠಡಿಯಲ್ಲಿದ್ದ ಒಂದೇ ಶೌಚಾಲಯವನ್ನು ಯಾರೇ ಬಳಸಲಿ, ಬಳಸಿದ ತತ್ ಕ್ಷಣವೇ ಅದನ್ನು ಕ್ರಿಮಿ ನಾಶಕಗಳಿಂದ ಸ್ವಚ್ಛಗೊಳಿಸುತ್ತಿದ್ದರು. ಇದೆಲ್ಲದರ ಪರಿಣಾಮವಾಗಿ, ಅವರೆಲ್ಲರೂ ಕೋವಿಡ್ ಟೆಸ್ಟ್‌ನಲ್ಲಿ ಪಾಸ್ ಆಗಿದ್ದಾರೆ.
ಜ್ವರ ಬಂದಿದ್ದಾತನಿಗೆ ಮಾತ್ರ ಸೋಂಕು ಇರುವುದು ಗೊತ್ತಾಗಿದ್ದು ಆತನೂ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಅಲ್ಲಿಗೆ, ಸೋಂಕಿನ ಜತೆಗೆ ದಿನಗಟ್ಟಲೆ ಒಂದೇ ರೂಮಿನಲ್ಲಿದ್ದರೂ ಕೇವಲ ಮುನ್ನೆಚ್ಚರಿಕೆಗಳಿಂದಲೇ ತಮ್ಮನ್ನು ತಾವು ಅವರು ಬಚಾವು ಮಾಡಿಕೊಂಡಿದ್ದಾರೆ.