ಹಾಸನ: ಬಿಜೆಪಿಯವರಿಗೆ ಅಭಿವೃದ್ಧಿ ಕಾಳಜಿ, ಉತ್ತಮ ಸಮಾಜದ ಬೆಳವಣಿಗೆ ಹಾಗೂ ಎಲ್ಲಾ ವರ್ಗದವರ ಕಲ್ಯಾಣಕ್ಕಿಂತ ಮತೀಯವಾಗಿ ಸಮಾಜವನ್ನು ಒಡೆಯುವ ಹಿಡನ್ ಅಜೆಂಡಾ ಜಾರಿಯೇ ಮುಖ್ಯ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಆರೋಪಿಸಿದರು.
ನಗರದ ಮಲಾ°ಡ್ ಇಂಜಿನಿಯರಿಂಗ್ ಕಾಲೇಜು ಆಡಿಟೋರಿಯಂ ನಲ್ಲಿ ನಡೆದ ಮೈಸೂರು ವಿಭಾಗಮಟ್ಟದ ಪ್ರತಿನಿಧಿಗಳ ಸಮಾವೇಶದಲ್ಲಿ ಅವರು ಮಾತನಾಡಿದರು.ಭಾರತ ಹಿಂದೂಸ್ಥಾನ ವಾಗಬೇಕು.ಆ ಮೂಲಕ ಸಮಾಜದಲ್ಲಿ ಯಥಾಸ್ಥಿತಿ ಮುಂದುವರಿಯಬೇಕು.
ಆ ಸ್ಥಿತಿ ಇಟ್ಟುಕೊಂಡು ರಾಜಕೀಯ ಮಾಡಬೇಕು ಎಂಬುದು ಅವರ ಧೋರಣೆ ಜರಿದರು ಎಂದೂ ಕೂಡ, ಕೆಳ ಸಮುದಾಯದವರು, ರೈತರು, ಪರಿವರ್ತನೆ ಬಗ್ಗೆ ಮಾತನಾಡುವುದಿಲ್ಲ. ಕೋಮುವಾದಕ್ಕೆ ಪ್ರೇರಣೆ ನೀಡಿ ಸಮಾಜವನ್ನು ವಿಭಜನೆಗೊಳಿಸೋ ಕೆಲಸ ಮಾಡುತ್ತಿದ್ದಾರೆ. ಇಂಥವರು ಅಧಿಕಾರಕ್ಕೆ ಬರದಂತೆ ತಡೆಯುವುದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಕರ್ತವ್ಯ ಮತ್ತು ಜವಾಬ್ದಾರಿ ಎಂದು ಕರೆ ನೀಡಿದರು.
ಕಾಂಗ್ರೆಸ್ ಪರ ಅಲೆ: ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಇದೆ ಎಂದ ಸಿಎಂ, ಕಳೆದ 4 ವರ್ಷಗಳಿಂದ ನಾಡಿನ ಜನರ ವಿಶ್ವಾಸ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳುವ ಬದ್ಧತೆಯನ್ನು ನಮ್ಮ ಸರಕಾರ ಪ್ರದರ್ಶನ ಮಾಡಿದೆ. ಸಮಾಜದ ಎಲ್ಲಾ ವರ್ಗದ ಜನರಿಗೂ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ.
ಕಳೆದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆ ವಾತಾವರಣ ಇಡೀ ರಾಜ್ಯದಲ್ಲಿ ಸೃಷ್ಟಿಯಾಗಿದೆ ಎಂದು ಬೀಗಿದರು. ಬಿಜೆಪಿಯವರು ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದರೆ, ಜೆಡಿಎಸ್ ನವರು ನಮ್ಮದೇ ಅಧಿಕಾರ ಎನ್ನುತ್ತಿದ್ದಾರೆ. ಅವರಿಬ್ಬರೂ ಭ್ರಮಾಲೋಕದಲ್ಲಿದ್ದಾರೆ. ಆದರೆ ಉಭಯ ಪಕ್ಷಗಳ ಹಗಲು ಕನಸು ಎಂದೂ ನನಸಾಗದು ಎಂದರು.
ಷಾ ಜೈಲಿಗೆ ಹೋಗುತ್ತಿದ್ರು: ಬಿಜೆಪಿಯವರಿಗೆ ಕಾಂಗ್ರೆಸ್ ಇತಿಹಾಸ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯವರ ಪಾತ್ರ ಏನಿದೆ? ಈ ಹೋರಾಟದಲ್ಲಿ ಎಷ್ಟು ಮಂದಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಪ್ರಶ್ನಿಸಿದ ಸಿಎಂ, ರಾಷ್ಟ್ರಪಿತ ಎನಿಸಿಕೊಂಡಿರುವ ಮಹಾತ್ಮಾಗಾಂಧೀಜಿ ಅವರನ್ನೇ ಜರಿಯುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮೇಲೆ ಅನೇಕ ಮರ್ಡರ್ ಕೇಸ್ ಗಳಿವೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿ ಇಲ್ಲದೇ ಹೋಗಿದ್ರೆ ಅವರು ಜೈಲಿಗೆ ಹೋಗುತ್ತಿದ್ದರು ಎಂದು ಸಿದ್ದು ಕಿಡಿಕಾರಿದರು.