Advertisement

ವಚನ ಸಾಹಿತ್ಯದಿಂದ ಸಾಮಾಜಿಕ ಜಾಗೃತಿ

11:26 AM Feb 17, 2019 | |

ಚಳ್ಳಕೆರೆ: 12ನೇ ಶತಮಾನ ಸರ್ವ ಧರ್ಮಗಳಿಗೂ ಸಮಾನತೆಯನ್ನು ಕಲ್ಪಿಸಿದ ಶತಮಾನವಾಗಿದೆ. ಜಗಜ್ಯೋತಿ ಬಸವೇಶ್ವರರ ಮಾರ್ಗದರ್ಶನದಲ್ಲಿ ಅನೇಕ ಮಹಾನ್‌ ಶ್ರೇಷ್ಠ ವ್ಯಕ್ತಿಗಳು ತಮ್ಮದೇಯಾದ ವಚನಗಳ ಮೂಲಕ ಸಮಾಜದ ಪರಿವರ್ತನೆಗೆ ಕಾರಣರಾಗಿದ್ದಾರೆ. ಅಂತಹ ಶ್ರೇಷ್ಠರಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರೂ ಒಬ್ಬರು ಎಂದು ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌ ಹೇಳಿದರು. ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಶನಿವಾರ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 
ಜಾತೀಯತೆಯಂತಹ ಮೌಡ್ಯವನ್ನು ತೊಡೆದು ಹಾಕಿ ಪ್ರತಿಯೊಬ್ಬರಲ್ಲೂ ಧಾರ್ಮಿಕ ಜಾಗೃತಿ ಮೂಡಿಸಲು ಶರಣರು ವಚನ ಸಾಹಿತ್ಯದ ಮೂಲಕ ಬೆಳಕು ಚೆಲ್ಲಿದರು. ಅದೇ ರೀತಿ ನಿಜಗುಣ ಅಂಬಿಗರ ಚೌಡಯ್ಯನವರ ಸೇವೆ ಸದಾ ಸ್ಮರಣಿಯ ಎಂದರು.

Advertisement

ರಾಜ್ಯ ಗಂಗಾಮತ ಸಂಘದ ಉಪಾಧ್ಯಕ್ಷ ಗೋವಿಂದರಾಜು ಮಾತನಾಡಿ, ರಾಜ್ಯ ಸರ್ಕಾರ ಅಂಬಿಗರ ಚೌಡಯ್ಯ ನಿಗಮವನ್ನು ಸ್ಥಾಪಿಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದೆ. 12ನೇ ಶತಮಾನ ಧಾರ್ಮಿಕ ಚಿಂತಕರ ಶತಮಾನವಾಗಿ ಪರಿಣಮಿಸಿದೆ. ಎಲ್ಲರಲ್ಲೂ ಸಮಾನತೆ ಮೂಡಿಸುವ ವಚನ ಸಾಹಿತ್ಯವನ್ನು ಮನ ಮುಟ್ಟುವಂತೆ ರಚಿಸುವಲ್ಲಿ ನಿಜಗುಣ ಅಂಬಿಗರ ಚೌಡಯ್ಯನವರ ಬುದ್ಧಿ ಕೌಶಲ್ಯ ಮೆಚ್ಚುವಂಥದ್ದು.
ಇಂದಿಗೂ ಅವರ ವಚನಗಳ ಪ್ರತಿಯೊಂದು ಸಾಲು ಕೂಡ ಅರ್ಥಗರ್ಭಿತವಾಗಿದೆ ಎಂದು ಅಭಿಪ್ರಾಯಪಟ್ಟರು.

ನಗರಸಭಾ ಸದಸ್ಯೆ ಸಿ. ಕವಿತಾ ಬೋರಯ್ಯ ಮಾತನಾಡಿ, ಅಂಬಿಗರ ಚೌಡಯ್ಯ ಅವರಂಥಹ  ಶ್ರೇಷ್ಠ ದಾರ್ಶನಿಕರ ಕಾರ್ಯಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲೆಂದು ಸರ್ಕಾರ ಮಹಾನ್‌ ಪುರುಷರ ಜಯಂತಿ ಆಚರಣೆ ಮಾಡುವುದು ಸ್ತುತ್ಯರ್ಹ ಎಂದರು.
 
ಸಮಾಜಸೇವಕ ಎಸ್‌.ಎಚ್‌. ಸೈಯ್ಯದ್‌ ಮಾತನಾಡಿ, ಅನುಭವ ಮಂಟಪ ಸಮಸ್ತ ಮನುಕುಲಕ್ಕೆ ಧಾರ್ಮಿಕ ಶಕ್ತಿಯನ್ನು ನೀಡುವಲ್ಲಿ ಯಶಸ್ವಿಯಾಯಿತು. ಸಮಾಜದಲ್ಲಿ ಬೇರೂರಿದ್ದ ಮೌಡ್ಯ, ಅನಕ್ಷರತೆ ಮತ್ತು ಅಜ್ಞಾನಗಳನ್ನು ಹೋಗಲಾಡಿಸಲು ವಚನ ಸಾಹಿತ್ಯ ಶ್ರಮಿಸಿತು. ಜಗಜ್ಯೋತಿ ಬಸವೇಶ್ವರರ ಮಾರ್ಗದರ್ಶನದಲ್ಲಿ ಅನೇಕ ಶ್ರೇಷ್ಠ ದಾರ್ಶನಿಕರು ಸಮಾಜದ ಎಲ್ಲಾ ಜಾತಿಗಳನ್ನು ವಚನ ಸಾಹಿತ್ಯದ ಮೂಲಕ ಒಗ್ಗೂಡಿಸಿದರು ಎಂದರು.
 
ಗಂಗಾಮತ ಸಂಘದ ತಾಲೂಕು ಅಧ್ಯಕ್ಷ ಎಸ್‌. ನಾಗರಾಜಪ್ಪ, ಕಾರ್ಯದರ್ಶಿ ಡಿ.ತಿಪ್ಪೇರುದ್ರಪ್ಪ ಹಾಗೂ ಬಿಎಸ್‌ಎನ್‌ಎಲ್‌ ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಟಿ. ಮಲ್ಲಿಕಾರ್ಜುನ, ಜೈತುಂಬಿ, ಕಂದಾಯಾ ಧಿಕಾರಿ ಶರಣಬಸಪ್ಪ, ಎಸ್‌.ಎಂ. ರವಿ, ಗ್ರಾಮಲೆಕ್ಕಾಧಿಕಾರಿ ರಾಜೇಶ್‌, ಹನುಮಂತಪ್ಪ ಮತ್ತಿತರರು ಭಾಗವಹಿಸಿದ್ದರು. ಬಿಸಿಎಂ ಅಧಿಕಾರಿ ಡಿ.ಟಿ. ಜಗನ್ನಾಥ ಸ್ವಾಗತಿಸಿದರು.

ಇಂದು ನಾವು ಅಭಿವೃದ್ಧಿ ಪಥದತ್ತ ಮುನ್ನಡೆದಿದ್ದರೆ ಅದಕ್ಕೆ ಮೂಲ ಕಾರಣ ನಮಗೆ ಸಿಕ್ಕಿರುವ ಧಾರ್ಮಿಕ ಸಂಸ್ಕಾರ. ಇಂತಹ ಧಾರ್ಮಿಕ ಸಂಸ್ಕಾರದ ಮೇಲೆ ಬೆಳಕು ಚೆಲ್ಲಿದವರು ನಿಜಗುಣ ಅಂಬಿಗರ ಚೌಡಯ್ಯನಂತಹ ಮಹಾನ್‌ ಶ್ರೇಷ್ಠರು. ಯುವ ಸಮೂಹ ಇಂತಹ ಮಹಾನ್‌ ದಾರ್ಶನಿಕರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. 
 ಸಿ. ಕವಿತಾ ಬೋರಯ್ಯ, ನಗರಸಭಾ ಸದಸ್ಯೆ. 

Advertisement

Udayavani is now on Telegram. Click here to join our channel and stay updated with the latest news.

Next