ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವು ಹಲವು ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆಯುತ್ತಿದೆ. ಈ ವರ್ಷದ ಜಾತ್ರಾ ಮಹೋತ್ಸವ ವೇಳೆ ಐ ಬ್ಯಾಂಕ್ ಸಹಯೋಗದಲ್ಲಿ ನೇತ್ರದಾನದ ಮಹತ್ವದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ 7 ದಿನದಲ್ಲಿ ಬರೊಬ್ಬರಿ 950 ಜನರು ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.
ಮಹೋತ್ಸವದಲ್ಲಿ ಅಭಿನವ ಗವಿಸಿದ್ಧೇಶ್ವರ ಮಹಾ ಸ್ವಾಮೀಜಿ ಅವರು ಭಕ್ತ ಸಮೂಹಕ್ಕೆ ಜಾಗೃತಿಯ ಜೊತೆಗೆ ಸಾಮಾಜಿಕ ಕಳಕಳಿ ಮೂಡಿಸುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಬಾಲ್ಯ ವಿವಾಹ ತಡೆ, ಜಲ ಸಂರಕ್ಷಣೆಗೆ ಜಲ ಧಿಧೀಕ್ಷೆ, ಮಾನಸಿಕ ಒತ್ತಡಗಳ ನಿವಾರಣೆಗೆ ಸಶಕ್ತ ಮನ ಸಂತೃಪ್ತಿ ಜೀವನ, ರಕ್ತದಾನ ಸೇರಿದಂತೆ ನೇತ್ರದಾನದಂತಹ ಮಹತ್ವದ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಇನ್ನೊಬ್ಬರ ಬಾಳಿಗೆ ಬೆಳಕಾಗುವ ಕಾರ್ಯಕ್ಕೆ ಶ್ರೀಗಳು ಹೆಜ್ಜೆಯನ್ನಿಡುತ್ತಿದ್ದಾರೆ.
ಪ್ರತಿ ವರ್ಷ ಒಂದೊಂದು ಯೋಜನೆ ರೂಪಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರೆ, ಈ ವರ್ಷ ಕೃಪಾದೃಷ್ಟಿ ಎನ್ನುವ ಹೆಸರಿನಡಿ ವಿದ್ಯಾರ್ಥಿಗಳಿಂದ ಅಭಿಯಾನ ನಡೆಸಿ, ನೇತ್ರದಾನ ಮಹತ್ವ ತಿಳಿಸುವ ಪ್ರಯತ್ನ ನಡೆಯಿತು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಐ ಬ್ಯಾಂಕ್‌ನಡಿ ಜಾತ್ರಾ ಮಹೋತ್ಸವದಲ್ಲಿ ಒಂದು ಮಳಿಗೆ ಆರಂಭಿಸಿ ನೇತ್ರದಾನಕ್ಕೆ ಒಪ್ಪಿಗೆ ಸೂಚಿಸುವ ಕುಟುಂಬದಿಂದ ಸಹಿ ಪಡೆದು ಅವರಿಗೆ ಪ್ರಮಾಣ ಪತ್ರ ನೀಡುವ ಕಾರ್ಯ ಜ. 22ರಿಂದಲೇ ಜಾತ್ರೆಯಲ್ಲಿ ಜರುಗಿದೆ.
ಹಿಂದಿನ ಎಲ್ಲ ಅಭಿಯಾನಗಳ ಜೊತೆಗೆ ಪ್ರಸಕ್ತ ವರ್ಷದ ಕೃಪಾದೃಷ್ಟಿಗೆ ಉತ್ತಮ ಸ್ಪಂದನೆ ದೊರೆತಿದೆ. ಶ್ರೀಗಳೇ ಮೊದಲ ದಿನ ನಾನು ನೇತ್ರದಾನ ಮಾಡುವೆ ನೀವೂ ನೇತ್ರದಾನ ಮಾಡಿ ಎಂದು ಕರೆ ನೀಡಿ ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅದರ ಬೆನ್ನಲ್ಲೇ ಜಾತ್ರೆಗೆ ಬರುವ ಭಕ್ತರು ನೇತ್ರದಾನದ ಮಳಿಗೆಗೆ ತೆರಳಿ ತಮ್ಮ ನೇತ್ರಗಳ ದಾನಕ್ಕೆ ಒಪ್ಪಿಗೆ ಸೂಚಿಸುತ್ತಿದ್ದಾರೆ. ಕೇವಲ 7 ದಿನದಲ್ಲಿ ಬರೊಬ್ಬರಿ 950 ಜನರು ನೇತ್ರದಾನ ಮಾಡಿದ್ದಾರೆ. ಐ ಬ್ಯಾಂಕ್ ತಂಡ ಜಾತ್ರೆಯಲ್ಲಿ 7 ದಿನ ಮಾತ್ರ ಮಳಿಗೆ ಆರಂಭಿಸೋಣ ಎನ್ನುವ ಚಿಂತನೆಯಲ್ಲಿತ್ತು. ಆದರೆ ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಶ್ರೀಗಳು ಸಹಿತ ಐ ಬ್ಯಾಂಕ್ ತಂಡಕ್ಕೆ ಇನ್ನು ಕೆಲವು ದಿನಗಳವರೆಗೂ ಮಳಿಗೆ ಮುನ್ನಡೆಸಿ ಎನ್ನುವ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.
ಹಿಂದುಳಿದಂತಹ ಕೊಪ್ಪಳ ಜಿಲ್ಲೆಯಲ್ಲಿ ಇಂತಹ ಮಹತ್ವದ ಕಾರ್ಯಗಳು ನಡೆಯುತ್ತಿರುವುದು ನಿಜಕ್ಕೂ ಒಂದು ಪವಾಡವೇ ಸರಿ. ಅದರಲ್ಲೂ ಜಾತ್ರಾ ಸಂದರ್ಭದಲ್ಲಿ ಭಕ್ತರು ಸ್ವಯಂ ಮುಂದೆ ಬಂದು ಇಡೀ ಕುಟುಂಬವೇ ನೇತ್ರದಾನ ಮಾಡಲು ಒಪ್ಪಿಗೆ ಸೂಚಿಸುತ್ತಿವೆ. ಇತ್ತೀಚೆಗೆ ಕೇವಲ 8 ವರ್ಷದ ಬಾಲಕ ನೇತ್ರದಾನದ ವಾಗ್ಧಾನ ಮಾಡಿ, ಮಾನವೀಯತೆ ಮೆರೆದಿದ್ದಾನೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಗವಿಮಠದ ಆರ್ಯುವೇದ ಕಾಲೇಜಿನಲ್ಲಿ ಜಾತ್ರೆ ಮಹೋತ್ಸವ ನಡೆಯುವ ಮೂರು ದಿನಗಳ ಕಾಲ ರಕ್ತದಾನ ಶಿಬಿರ ಆಯೋಜನೆ ಮಾಡಲಾಗುತ್ತದೆ. ಈ ವರ್ಷ ಭಕ್ತರು 3 ದಿನದಲ್ಲಿ ಬರೊಬ್ಬರಿ 633 ಯೂನಿಟ್ ರಕ್ತದಾನ ಮಾಡಿದ್ದಾರೆ. ಒಟ್ಟಿನಲ್ಲಿ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳಿಂದ ಭಾವೈಕ್ಯತೆ ಜೊತೆಗೆ ಸಾಮಾಜಿಕ ಕ್ರಾಂತಿಯ ಕಹಳೆ ಮೊಳಗುತ್ತಿರುವುದು ನಿಜಕ್ಕೂ ವಿಸ್ಮಯವೇ ಸರಿ. ಅವರ ಜೊತೆಗೆ ಸಂಘ-ಸಂಸ್ಥೆಗಳು, ಭಕ್ತ ಸಮೂಹ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ತಂಡವು ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದೆ.
ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವದಲ್ಲಿ ಐ ಬ್ಯಾಂಕ್‌ನಿಂದ ನೇತ್ರದಾನದ ಮಳಿಗೆ ಆರಂಭಿಸಲಾಗಿತ್ತು. ಜ. 28ರವರೆಗೂ 950 ಜನರು ನೇತ್ರದಾನದ ಕುರಿತು ಒಪ್ಪಿಗೆ ಸೂಚಿಸಿ ಪ್ರಮಾಣ ಪತ್ರ ಪಡೆದಿದ್ದಾರೆ. ನೇತ್ರದಾನಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು, ಶ್ರೀಗಳು ಅಮವಾಸ್ಯೆಯವರೆಗೂ ಮುಂದುವರಿಸುವಂತೆ ಸೂಚಿಸಿದ್ದಾರೆ. ಅವರ ಸಲಹೆ ಪಡೆದು ಮುಂದೆ ನಡೆಯಲಿದ್ದೇವೆ.
•ಡಾ| ಶ್ರೀನಿವಾಸ ಹ್ಯಾಟಿ
ಐ ಬ್ಯಾಂಕ್ ತಂಡದ ಮುಖ್ಯಸ್ಥರು
ದತ್ತು ಕಮ್ಮಾರ