ನವದೆಹಲಿ: ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್(80) ಶುಕ್ರವಾರ ಸಂಜೆ ನಿಧನರಾದರು. ಕಳೆದ ಹಲವು ದಿನಗಳಿಂದ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಅವರ ಆರೋಗ್ಯ ಸ್ಥಿತಿ ಕಳೆದ ಕೆಲ ದಿನಗಳಿಂದ ಗಂಭೀರವಾಗಿತ್ತು. ಹೀಗಾಗಿ ಕಳೆದ ಮಂಗಳವಾರ ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಧಾರ್ಮಿಕ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದ ಅಗ್ನಿವೇಶ್ ಅವರು ಸೆಪ್ಟೆಂಬರ್ 21, 1939ರಂದು ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ಜನಿಸಿದ್ದರು. ಅವರು ಹರಿಯಾಣದಲ್ಲಿ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ಆರ್ಯ ಸಮಾಜದ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.
ಸ್ವಾಮಿ ದಯಾನಂದ ಸರಸ್ವತಿ ಸಿದ್ಧಾಂತ ಪಾಲನೆ ಮಾಡಿಕೊಂಡು 1970 ರಲ್ಲಿ ಆರ್ಯ ಸಮಾಜದ ತತ್ವಗಳ ಆಧಾರದ ಮೇಲೆ ‘ಆರ್ಯ ಸಭಾ’ ಎಂಬ ರಾಜಕೀಯ ಪಕ್ಷವೊಂದನ್ನು ಕಟ್ಟಿದರು ಅಗ್ನಿವೇಶ್. 1977 ರಲ್ಲಿ ಅವರು ಹರ್ಯಾಣ ವಿಧಾನಸಭೆಯ ಸದ್ಯರಾಗಿ, ಶಿಕ್ಷಣ ಸಚಿವ(1979)ರಾಗಿಯೂ ಕೆಲಸ ಮಾಡಿದರು. ಸಚಿವರಾಗಿರುವಾಗಲೇ ಬಾಂಡೆಡ್ ಲೇಬರ್ ಲಿಬರೇಶನ್ ಫ್ರಂಟ್ ಸ್ಥಾಪಿಸಿದರು. 2011 ರ ಭ್ರಷ್ಟಾಚಾರ ವಿರೋಧಿ ಚಳವಳಿಯಲ್ಲೂ ಅವರು ಭಾಗವಹಿಸಿದ್ದರು.
ಹೆಣ್ಣು ಭ್ರೂಣ ಹತ್ಯೆಗೆ ವಿರೋಧ, ಮಾನವ ಹಕ್ಕು ರಕ್ಷಣೆ, ವಲಸಿಗರ ಸಮಸ್ಯೆಗೆ ಪರಿಹಾರ ಸೇರಿದಂತೆ ಹಲವು ಸಾಮಾಜಿಕ ಕೆಲಸಗಳಲ್ಲೂ ಗುರುತಿಸಿಕೊಂಡವರು ಅಗ್ನಿವೇಶ್. 1970 ಮಾರ್ಚ್ 25 ರಂದು ಅಗ್ನಿವೇಶ್ ಸನ್ಯಾಸ ಸ್ವೀಕರಿಸಿದರು.