ನವದೆಹಲಿ: ಸಾಮಾಜಿಕ ಜಾಲತಾಣಗಳನ್ನು ಮೈನವಿರೆಳಿಸುವಂತಹ ವಿಡಿಯೋಗಳು ಸದಾ ಕುತೂಹಲ ಕೆರಳಿಸುತ್ತಿರುತ್ತವೆ. ಅದರಲ್ಲೂ ಪ್ರಾಣಿ ಪಕ್ಷಿಗಳ ಜೀವನ ಕ್ರಮದ ವಿಡಿಯೋವಂತೂ ವ್ಯಾಪಕ ವೈರಲ್ ಆಗುತ್ತದೆ. ಇದೀಗ ಅಂತಹದ್ದೇ ಒಂದು ವಿಡಿಯೋ ಅಪ್ಲೋಡ್ ಆಗಿದ್ದು ಬೇಟೆಯಾಡಲು ಹೋಗಿ ಪ್ರಪಾತಕ್ಕೆ ಬಿದ್ದ ಹಿಮಚಿರತೆಯ ಸಾಹಸ ಸನ್ನಿವೇಶ ಮರುಕ ಹುಟ್ಟಿಸುವಂತಿದೆ.
ಹೌದು !. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಪರ್ವೀನ್ ಕಸ್ವಾನ್ ಎಂಬವರು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಿಮಚಿರತೆಗಳು ಒಂದು ಭಾರೀ ಬೇಟೆಯಾಡಲು ಆರಂಭಿಸಿದರೆ ಯಾವುದೇ ಪ್ರಾಣಿ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೇ ಇಲ್ಲಿ ಹೊಂಚು ಹಾಕಿ ಬೇಟೆಯತ್ತ ನೆಗೆದ ಚಿರತೆಯ ಲೆಕ್ಕಾಚಾರ ತಪ್ಪಿ ಹೋಗಿತ್ತು. ಹೀಗಾಗಿ, ಆಯತಪ್ಪಿದ ಹಿಮಚಿರತೆ ಭಾರೀ ಪ್ರಪಾತಕ್ಕೆ ಬಿದ್ದಿತ್ತು. ಮಾತ್ರವಲ್ಲದೆ ಪ್ರಪಾತಕ್ಕೆ ಬಿದ್ದ ರಭಸಕ್ಕೆ ಬಂಡೆಗಳ ನಡುವೆ ಉರುಳಿಕೊಂಡು ಹೋಗುವ ದೃಶ್ಯ ಮನಕಲವಂತಿದೆ.
‘ಹಿಮ ಚಿರತೆಗಳ ರಹಸ್ಯ ಜೀವನ’ ಎಂಬ ಸಾಕ್ಷ್ಯಚಿತ್ರದ ವಿಡಿಯೋ ತುಣುಕು ಇದು ಎಂದು ನೆಟ್ಟಿಗರು ಕೇಳಿದ ಸಂದೇಹಕ್ಕೆ ಪರ್ವೀನ್ ಅವರು ಉತ್ತರಿಸಿದ್ದಾರೆ.
ಇದೀಗ ಈ ವಿಡಿಯೋ ವ್ಯಾಪಕ ವೈರಲ್ ಆಗಿದ್ದು ಹಿಮಚಿರತೆ ಬಗ್ಗೆಯೂ ನೆಟ್ಟಿಗರು ಮರುಕ ವ್ಯಕ್ತಪಡಿಸಿದ್ದಾರೆ. ಈ ಚಿರತೆಗಳು ಸಾಮಾನ್ಯವಾಗಿ ಮಧ್ಯ ಮತ್ತು ದಕ್ಷಿಣ ಏಷ್ಯಾದ ಪರ್ವತ ಶ್ರೇಣಿಗಳಿಗೆ ವಾಸವಾಗಿರುತ್ತವೆ. ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳಲ್ಲಿ ಹೆಚ್ಚಾಗಿ ಹಿಮಚಿರತೆಗಳು ಕಾಣಸಿಗುತ್ತವೆ.