Advertisement

ಸರಗಳ್ಳನ ಕಾಲಿಗೆ ಗುಂಡೇಟು

12:36 PM Oct 14, 2018 | Team Udayavani |

ಬೆಂಗಳೂರು: ಬಂಧಿಸಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಸರಗಳ್ಳನ ಮೇಲೆ ಚಂದ್ರಲೇಔಟ್‌ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ.

Advertisement

ಉತ್ತರಪ್ರದೇಶದ ಮುಜಾಫ‌ರ್‌ ನಗರದ ಶಾಕೀರ್‌ (22) ಬಂಧಿತ. ಇದೇ ವೇಳೆ ಆರೋಪಿಯಿಂದ ಹಲ್ಲೆಗೊಳಗಾದ ಚಂದ್ರಲೇಔಟ್‌ ಠಾಣೆ ಎಎಸ್‌ಐ ಕಾಳೇಗೌಡ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯ ಬಂಧನದಿಂದ ಚಂದ್ರಲೇಔಟ್‌, ಸಿದ್ದಾಪುರ, ರಾಜಾಜಿನಗರ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಸರಗಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.

ಇತ್ತೀಚೆಗೆ ಪಶ್ಚಿಮ ವಿಭಾಗದಲ್ಲಿ ಹೆಚ್ಚಾಗುತ್ತಿದ್ದ ಸರಗಳ್ಳತನ ಪ್ರಕರಣಗಳು ಪತ್ತೆ ಹಚ್ಚಲು ಡಿಸಿಪಿ ರವಿ ಡಿ.ಚೆನ್ನಣ್ಣನವರ್‌, ಕೆಂಗೇರಿ ಉಪವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರ ನೇತೃತ್ವದಲ್ಲಿ ತಂಡ ರಚಿಸಿದ್ದರು. ಈ ತಂಡ ಆರೋಪಿ ಕೃತ್ಯವೆಸಗಿದ ಸ್ಥಳಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ಬೈಕ್‌ ನಂಬರ್‌ ಪತ್ತೆ ಹಚ್ಚಿತ್ತು.

ಈ ಹಿನ್ನೆಲೆಯಲ್ಲಿ ಆರೋಪಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ಜ್ಞಾನಭಾರತಿ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್‌ನ 3ನೇ ಬ್ಲಾಕ್‌ ಚಿಕ್ಕಬಸ್ತಿ ಬಳಿ ಅನುಮಾನಸ್ಪದವಾಗಿ ಓಡಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಚಂದ್ರಲೇಔಟ್‌ ಇನ್‌ಸ್ಪೆಕ್ಟರ್‌ ಕಲ್ಲಪ್ಪ ಖರಾತ್‌, ಪಿಎಸ್‌ಐ ಸಂತೋಷ್‌ ಹಾಗೂ ಎಎಸ್‌ಐ ಕಾಳೇಗೌಡ ನೇತೃತ್ವದ ತಂಡ ಕೆಲ ಅನುಮಾನಸ್ಪದ ವಾಹನಗಳ ತಪಾಸಣೆಗೆ ಮುಂದಾಗಿತ್ತು.

ಈ ವೇಳೆ ಪೊಲೀಸರನ್ನು ಕಂಡ ಶಕೀರ್‌ ತಪ್ಪಿಸಿಕೊಂಡು ಓಡಲು ಮುಂದಾಗಿದ್ದಾನೆ. ಈ ವೇಳೆ ಆರೋಪಿಯನ್ನು ಬೆನ್ನಟ್ಟಿದ್ದ ಪೊಲೀಸರು ಬಂಧಿಸಲು ಮುಂದಾದಾಗ ತನ್ನ ಬಳಿಯಿದ್ದ ಡ್ಯಾಗರ್‌ನಿಂದ ಎಎಸ್‌ಐ ಕಾಳೇಗೌಡರ ಮೇಲೆ ದಾಳಿ ನಡೆಸಿದ್ದು, ಕಾಳೇಗೌಡರ ಎಡಗೈಗೆ ಗಂಭೀರವಾಗಿದೆ.

Advertisement

ಆಗ ಪಿಎಸ್‌ಐ ಸಂತೋಷ್‌ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ಆರೋಪಿ ಮತ್ತೂಮ್ಮೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪಿಎಸ್‌ಐ ಸಂತೋಷ್‌ ಆತ್ಮರಕ್ಷಣೆಗಾಗಿ ಆರೋಪಿಯ ಎಡಗಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಗಳವಿಗೆಂದೇ ಪಲ್ಸರ್‌ ಬೈಕ್‌ ಖರೀದಿ: ಆರೋಪಿ ಶಾಕೀರ್‌ ಉತ್ತರ ಪ್ರದೇಶದಿಂದ ತನ್ನ ಸಹಚರನೊಬ್ಬನ ಜತೆ ಪ್ರತಿ 10-15 ದಿನಕ್ಕೊಮ್ಮೆ ಬೆಂಗಳೂರಿಗೆ ಬರುತ್ತಿದ್ದು, ಕೆ.ಆರ್‌.ಮಾರುಕಟ್ಟೆ, ಕಾಟನ್‌ಪೇಟೆಯ ವಸತಿ ನಿಲಯಗಳಲ್ಲಿ ತಂಗುತ್ತಿದ್ದ.

ಬಳಿಕ ಕೆಲ ನಿರ್ದಿಷ್ಟ ಪ್ರದೇಶಗಳಲ್ಲಿ ಸುತ್ತಾಡಿ ಒಂಟಿಯಾಗಿ ಓಡಾಡುವ ಮಹಿಳೆಯರ ಗಮನ ಬೇರೆಡೆ ಸೆಳೆದು ಅಥವಾ ನಡೆದು ಹೋಗುವಾಗ ಸರ ಕಸಿದು ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಇದಕ್ಕಾಗಿಯೇ ಆರೋಪಿ ವಿವಿಪುರಂನಲ್ಲಿರುವ ಸೆಕೆಂಡ್‌ ಹ್ಯಾಂಡ್‌ ಬೈಕ್‌ ಮಾರಾಟ ಮಳಿಗೆಯಲ್ಲಿ ಇದೇ ವರ್ಷ ಕಪ್ಪು ಬಣ್ಣದ ಪಲ್ಸರ್‌ ಬೈಕ್‌ ಖರೀದಿ ಮಾಡಿದ್ದ.

ಇದೇ ಬೈಕ್‌ನಲ್ಲಿ ತನ್ನ ಸಹಚರನ ಜತೆ ನಾಲ್ಕೈದು ಠಾಣೆ ವ್ಯಾಪ್ತಿಯಲ್ಲಿ ಎರಡು ದಿನಗಳ ಕಾಲ ಕೃತ್ಯವೆಸಗಿ ಪರಾರಿಯಾಗುತ್ತಿದ್ದ. ಬಳಿಕ ವಸತಿ ನಿಲಯಗಳ ಸಿಬ್ಬಂದಿಗೆ ಇಂತಿಷ್ಟು ಹಣ ಕೊಟ್ಟು ಬೈಕ್‌ನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ಸೂಚಿಸಿ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದ.

ಕಳವು ಮಾಡಿದ ವಸ್ತುಗಳನ್ನು ಆರೋಪಿ ಮುಜಾಫ‌ರ್‌ನಗರದಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಕೆಲ ದಿನಗಳ ಕಾಲ ಸ್ವಂತ ಊರಿನಲ್ಲಿ ಕಾಲ ಕಳೆದು ಬಳಿಕ ಮತ್ತೆ ನಗರಕ್ಕೆ ಬಂದು ಕೃತ್ಯವೆಸಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next