Advertisement

ಸಿಟಿಯ ಅಷ್ಟ ಭಾಗಗಳಲ್ಲಿ ಉರಗಗಳ ಕಾಟ

01:22 PM Jun 19, 2023 | Team Udayavani |

ಬೆಂಗಳೂರು: ಸಿಲಿಕಾನ್‌ ಸಿಟಿಯ ಅಷ್ಟ ಭಾಗಗಳಲ್ಲೀಗ ಉರಗಗಳ ಕಾಟ ಹೆಚ್ಚಾಗಿದೆ. ಸುಡುಬಿಸಿಲಿನ ಬೇಗೆ ಜತೆಗೆ ಆಗಾಗ್ಗೆ ಸುರಿಯುವ ಮಳೆ ಹಿನ್ನೆಲೆಯಲ್ಲಿ ಪಾಲಿಕೆಯ ಎಂಟೂ ವಲಯಗಳ ಹಲವು ಬಡಾವಣೆಗಳ ಮನೆ, ಕಾಂಪೌಂಡ್‌ಗಳ ಸಂದಿಗಳಲ್ಲಿ ಹಾವುಗಳು ಆಗಾಗ ಕಾಣಿಸಿಕೊಳ್ಳುತ್ತಿದ್ದು. ನಾಗರಿಕರಲ್ಲಿ ಆತಂಕ ಮೂಡಿಸಿದೆ.

Advertisement

ಜತೆಗೆ ಚಲ್ಲಘಟ್ಟ ಮತ್ತು ಕನಕಪುರ ರಸ್ತೆ ಸೇರಿದಂತೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆಲ ಪ್ರದೇಶಗಳಲ್ಲಿ ಹೆಬ್ಟಾವುಗಳು ಕಂಡು ಬರುತ್ತಿದ್ದು ಜನರಲ್ಲಿ ದಿಗಿಲು ತಂದಿಟ್ಟಿದೆ.

ಬಿಬಿಎಂಪಿ ವ್ಯಾಪ್ತಿಯ ಬೊಮ್ಮನಹಳ್ಳಿ, ರಾಜರಾಜೇಶ್ವರಿನಗರ, ಕನಕಪುರ ರಸ್ತೆ, ಚಲ್ಲಘಟ್ಟ, ಬನ್ನೇರುಘಟ್ಟ, ಪುಟ್ಟೇನಹಳ್ಳಿ, ಯಲಹಂಕ, ಸರ್ಜಾಪುರ, ನಾಗರಬಾವಿ, ವಿದ್ಯಾರಣ್ಯಪುರ, ಆರ್‌ಬಿಐ ಲೇಔಟ್‌ ಸೇರಿದಂತೆ ಪಾಲಿಕೆ ವ್ಯಾಪ್ತಿಯ ಹೊಸ ಬಡಾವಣೆಗಳಲ್ಲಿ ವಿವಿಧ ಬಗೆಯ ಹಾವುಗಳು ಕಾಣಸಿಕೊಳ್ಳುತ್ತಿದ್ದು, ಪಾಲಿಕೆ ನಿಯಂತ್ರಣ ಕೊಠಡಿಗೆ ಪ್ರತಿ ದಿನ ನೂರಾರು ಕರೆಗಳು ಬರುತ್ತಿವೆ. ವಿವಿಧ ಕಡೆಗಳಿಂದ ಪ್ರತಿದಿನ ಏಳೆಂಟು ಕರೆಗಳು ಪಾಲಿಕೆಯ ನಿಯಂತ್ರಣ ಕೊಠಡಿಗೆ ಬರುತ್ತಿವೆ.

ಎಲ್ಲ ಕಡೆಗಳಿಗೂ ಭೇಟಿ ನೀಡಿ ಹಾವುಗಳನ್ನು ರಕ್ಷಣೆ ಮಾಡುವ ಕಾರ್ಯ ನಡೆಯುತ್ತಿದೆ. ಕಳೆದ ಮೂರು ತಿಂಗಳುಗಳಿಂದ ಸುಮಾರು 100-150 ಹಾವುಗಳನ್ನು ಪಾಲಿಕೆಯ ಅರಣ್ಯ ಇಲಾಖೆಯ ವನ್ಯಜೀವಿಗಳು ಉರಗ ಸಂರಕ್ಷಕರ ಮೂಲಕ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ ಎಂದು ಬಿಬಿಎಂಪಿಯ ಅರಣ್ಯ ಸಂರಕ್ಷಣಾ ವಿಭಾಗದ ವನ್ಯಜೀವಿ ತಂಡದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಒಂದು ವರ್ಷದಿಂದ ಸುಮಾರು 300ಕ್ಕೂ ಅಧಿಕ ಹಾವುಗಳನ್ನು ಬೆಂಗಳೂರು ಸುತ್ತಮುತ್ತ ಸೆರೆ ಹಿಡಿದು ಸಂರಕ್ಷಣೆ ಮಾಡಲಾಗಿದೆ. ಮನೆ, ಅಡುಗೆ ಮನೆ, ಬಾತ್‌ರೂಂ, ಕಾಂಪೌಂಡ್‌ ಒಳಗಡೆ ಇರುವ ಮತ್ತು ನಾಗರಿಕರಿಗೆ ತೊಂದರೆ ಆಗುವಂತಿದ್ದರೆ ಮಾತ್ರ ಅಲ್ಲಿನ ಹಾವುಗಳನ್ನು ಹಿಡಿಯಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

ಹೆಬ್ಬಾವು ರಕ್ಷಿಸಿದ್ದ ಬಿಬಿಎಂಪಿ ತಂಡ: ಹಾವುಗಳು ನೀರು ಮತ್ತು ಆಹಾರ ಅರಸಿ ಬರುತ್ತವೆ. ರಾಜಧಾನಿ ಸುತ್ತಮುತ್ತ ಕುರುಚಲ ಕಾಡುಗಳು, ಕೆರೆಗಳು ಮಾಯವಾಗುತ್ತಿವೆ. ಚರಂಡಿಗಳು ಕೂಡ ಕಾಂಕ್ರಿಟ್‌ನಿಂದ ನಿರ್ಮಾಣಗೊಂಡಿದ್ದು ಉರಗಗಳಿಗೆ ಜೀವಿಸಲು ಸೂಕ್ತ ಸ್ಥಳವೇ ಇಲ್ಲದಂತಾಗಿದೆ.

ಅತೀ ಉಷ್ಣತೆಯಲ್ಲಿ ಉರಗಗಳಿಗೆ ಉಳಿಗಾಲವಿಲ್ಲ. ಆದ್ದರಿಂದ ತಂಪು ಜಾಗಗಳನ್ನು ಹುಡುಕುತ್ತಾ ಬಿಲದಿಂದ ಮೇಲೆದ್ದು ಬರುತ್ತಿವೆ ಎಂದು ಬಿಬಿಎಂಪಿಯ ಡೆಫ್ಯೂಟಿ ಆರ್‌ಎಫ್ಒ ನರೇಂದ್ರ ಬಾಬು ಹೇಳುತ್ತಾರೆ. ಎಲ್ಲ ರೀತಿಯ ಹಾವುಗಳು ಸಿಲಿಕಾನ್‌ ಸಿಟಿಯ ವ್ಯಾಪ್ತಿಯಲ್ಲಿ ಪತ್ತೆ ಆಗುತ್ತವೆ. ಹೊಸ ಬಡಾವಣೆಗಳಲ್ಲಿ ಜೆಸಿಬಿ ಮೂಲಕ ಮಣ್ಣು ತೆಗೆದಾಗ ಹಾವುಗಳು ಹೊರಬರುತ್ತವೆ.

ಇತ್ತೀಚೆಗೆ ಕನಕಪುರ ರಸ್ತೆ ಬಳಿಯ ಅಂಜನಾಪುರದಲ್ಲಿ ಇಂಡಿಯನ್‌ ರಾಕ್‌ ಪೈತಾನ್‌ (ಹೆಬ್ಬಾವು) ಕಾಣಿಸಿಕೊಂಡಿತ್ತು. ಬಿಬಿಎಂಪಿ ಅರಣ್ಯ ವಿಭಾಗದ ವನ್ಯಸಂರಕ್ಷಕರು ಅದನ್ನು ಆವಾಸ ಸ್ಥಾನಕ್ಕೆ ಸಂರಕ್ಷಿತವಾಗಿ ಬಿಟ್ಟು ಬಂದಿದ್ದಾರೆ ಎಂದು ಮಾಹಿತಿ ನೀಡುತ್ತಾರೆ.

ಹಾವುಗಳು ಮೊಟ್ಟೆ ಇಡುವ ಕಾಲ: ಮಾರ್ಚ್‌, ಏಪ್ರಿಲ್‌ ಹಾವುಗಳು ಮೊಟ್ಟೆಯಿಡುವ ಕಾಲ. ಈ ಮೊಟ್ಟೆಗಳು ಜೂನ್‌ನಲ್ಲಿ ಒಡೆದು ಮರಿಗಳು ಹೊರ ಬರುತ್ತವೆ. ನಾಗರ ಹಾವು ಸುಮಾರು 30ರಿಂದ 40 ಮೊಟ್ಟೆಗಳನ್ನು ಹಾಕುತ್ತದೆ. ಇದರಲ್ಲಿ 20 ರಿಂದ 25 ಮೊಟ್ಟೆಗಳು ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಮಂಡಲ ಹಾವು ಕೂಡ 40 ಮರಿಗಳಿಗೆ ಜನ್ಮ ನೀಡುತ್ತದೆ ಎಂದು ಉರಗ ತಜ್ಞ ಮೋಹನ್‌ ಹೇಳುತ್ತಾರೆ.

ಪ್ರಸ್ತುತ ಕಾಡುಗಳು, ಚರಂಡಿ, ಕಲ್ಲು ಚಪ್ಪಡಿಗಳು ಸಹ ಸಿಗುತ್ತಿಲ್ಲ. ಎಲ್ಲವೂ ಕಾಂಕ್ರಿಟ್‌ ಮಯವಾಗಿದ್ದು, ಹಾವುಗಳ ಆವಾಸ ಸ್ಥಾನವನ್ನೆಲ್ಲ ಮನುಷ್ಯರು ಆಕ್ರಮಿಸಿಕೊಂಡಿದ್ದಾರೆ. ಹಾಗಾಗಿ ಮನೆ, ಕಾಂಪೌಂಡ್‌ ಸಂದಿಗಳು, ಪಾರ್ಕ್‌ ಗಳು ಇತ್ಯಾದಿಗಳಲ್ಲಿ ಹಾವುಗಳು ಕಂಡು ಬರುತ್ತಿವೆ. ಉರುಗಗಳು ಅತಿ ಶೀತ ಪ್ರದೇಶ ಮತ್ತು ಹೆಚ್ಚು ಉಷ್ಣತೆಯಿರುವ ಪ್ರದೇಶಗಳಲ್ಲಿ ಜೀವಿಸುವುದಿಲ್ಲ. ಆದ್ದರಿಂದ ಜೀವಿಸಲು ಸೂಕ್ತವಾದ ಸ್ಥಳಗಳನ್ನು ಹುಡುಕಿಕೊಂಡು ಹೊರ ಬರುತ್ತಿವೆ ಎಂದು ಮಾಹಿತಿ ನೀಡುತ್ತಾರೆ.

ಮೂರು ದಿನಗಳ ಹಿಂದಷ್ಟೇ ಬಾಣಸವಾಡಿಯ ಒಎಂಬಿಆರ್‌ ಲೇಔಟ್‌ನಲ್ಲಿ ಮನೆಯೊಂದರ ಗೋಡೆಯೊಳಗೆ ಅವಿತುಕೊಂಡಿದ್ದ ಮೂರು ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಡಲಾಗಿದೆ ಎಂದು ತಿಳಿಸುತ್ತಾರೆ.

ರಾಜಧಾನಿಯ ಸುತ್ತಮುತ್ತಲ ಪ್ರದೇಶಗಳಲ್ಲಿ ಹೊಸ ಬಡಾವಣೆಗಳು ತಲೆ ಎತ್ತುತ್ತಿವೆ. ಮಣ್ಣಿನ ಅಗೆತ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಣ್ಣಿನಲ್ಲಿರುವ ಹಾವುಗಳು ಮೇಲೆ ಬರುತ್ತವೆ. ಜತೆಗೆ ಬೇಸಿಗೆ ವೇಳೆ ನೀರು, ಆಹಾರವನ್ನು ಹುಡುಕಿಕೊಂಡು ಹಾವುಗಳು ಬರುತ್ತವೆ. ಹೀಗಾಗಿ ಬೆಂಗಳೂರಿನ ಎಂಟೂ ವಲಯದಲ್ಲಿ ಹಾವುಗಳ ಸಂರಕ್ಷಣೆ ಕಾರ್ಯ ನಡೆದಿದೆ. -ನರೇಂದ್ರ ಬಾಬು, ಡೆಫ್ಯೂಟಿ ಆರ್‌ ಎಫ್ಒ ಬಿಬಿಎಂಪಿ

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next