Advertisement

Snakes: ಹುಷಾರ್‌! ಮನೆಗೂ ಬರಬಹುದು ಹಾವುಗಳು

12:24 PM May 26, 2024 | Team Udayavani |

ಬೆಂಗಳೂರು: ಪೂರ್ವ ಮುಂಗಾರು ಮಳೆ ಅಬ್ಬರಿಸಿದ ಬೆನ್ನಲ್ಲೇ ಈಗ ರಾಜಧಾನಿಯ ಜನ ವಸತಿ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.

Advertisement

ರಾಜಕಾಲುವೆ, ಪಾಳು ಪ್ರದೇಶ ಮತ್ತು ಕೆರೆದಂಡೆ ಬಳಿಯಿರುವ ಜನವಸತಿ ಪ್ರದೇಶಗಳಲ್ಲಿ ಮನೆ ಹೊರಗೆ ಬಿಟ್ಟ ಶೂ, ಮೋಟಾರು ಬೈಕ್‌, ಕಾರ್‌ ಸೀಟ್‌, ಹೂವಿನ ಕುಂಡಗಳು ಸೇರಿ ಬೆಚ್ಚನೆ ಜಾಗದಲ್ಲಿ ಹಾವುಗಳು ಮಲಗುತ್ತಿದ್ದು, ಸಾರ್ವಜನಿಕರಲ್ಲಿ ಭಯ ತಂದಿಟ್ಟಿದೆ. ಯಲಹಂಕ, ಕಲ್ಯಾಣ ನಗರ, ಎಚ್‌.ಬಿ.ಆರ್‌. ಲೇಔಟ್‌, ಮಾರತ್ತಹಳ್ಳಿ, ನಾಗರಭಾವಿ, ಬನಶಂಕರಿ ಸೇರಿ ಇನ್ನೂ ಕೆಲವು ಪ್ರದೇಶಗಳಲ್ಲಿ ವಿವಿಧ ಜಾತಿಯ ಹಾವುಗಳು ಪತ್ತೆ ಆಗಿದ್ದು, ಪಾಲಿಕೆಯ ಸಹಾಯವಾಣಿಗೆ ದಿನಾಲೂ ಹತ್ತಾರು ಕರೆಗಳು ಬರುತ್ತಿವೆ. ಮುಂಗಾರಿನಲ್ಲಿ ಹಾವು ಮೊಟ್ಟೆಯೊಡೆ ಯುವ ಕಾಲವಾಗಿದೆ.

ಈ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಮೇ ಅಂತ್ಯದಿಂದ ಅಕ್ಟೋಬರ್‌ವರೆಗೆ ಮರಿ ಹಾವುಗಳ ಸಂಖ್ಯೆಯಲ್ಲಿ ಯಾವಾಗಲೂ ಹೆಚ್ಚಳ ಕಂಡುಬರುತ್ತದೆ ಎಂಬುವುದು ಉರಗ ರಕ್ಷಕರ ಮಾತಾಗಿದೆ.

ಬೆಚ್ಚನೆ ಸ್ಥಳಗಳ ಆಯ್ಕೆ: ನಾಗರಹಾವು ಹತ್ತರಿಂದ ಇಪ್ಪತ್ತರ ಒಳಗಡೆ ಮೊಟ್ಟೆ ಹಾಕುತ್ತದೆ. ಮೊಟ್ಟಯಿಟ್ಟು 15 ದಿವಸ ರಕ್ಷಣೆ ಮಾಡುತ್ತದೆ. ಈಗ ಮಳೆ ಬೀಳುತ್ತಿದ್ದು ವಾತಾವರಣದಲ್ಲಿ ಪದೇ ಪದೆ ಬದ ಲಾವಣೆ ಆಗುತ್ತಲೇ ಇರುತ್ತದೆ. ಈ ಹಿನ್ನೆಲೆ ಯಲ್ಲಿ ಬಿಸಿಲು ಹೆಚ್ಚು ಬೀಳುವ ಪ್ರದೇಶಗಳಲ್ಲಿ ಹೆಚ್ಚಾಗಿ ಹಾವುಗಳು ಕಂಡು ಬರುತ್ತದೆ. ಕಾರ್‌ ಗ್ಯಾರೇಜ್‌, ಶೂ ರ್ಯಾಕ್‌, ಹೂವಿನ ಕುಂಡ ಸೇರಿ ಬೆಚ್ಚಗಿನ ಸ್ಥಳ ಎಲ್ಲಿರುತ್ತದೆಯೋ ಅಲ್ಲಿ ಹಾವುಗಳು ಹೆಚ್ಚಾಗಿರುತ್ತವೆ ಎಂದು ಪಾಲಿಕೆ ವನ್ಯಜೀವಿ ಸಂರಕ್ಷಕ ಮೋಹನ್‌ ಹೇಳುತ್ತಾರೆ. ಹಾವು ತನ್ನ ದೇಹವನ್ನು ಬೆಚ್ಚಗಿಸಲು ಯಾವಾಗಲೂ ಪ್ರಯತ್ನಿಸುತ್ತಲೇ ಇರುತ್ತವೆ. ಬಿಸಿಲು ಕಾಯಿಸುವುದರಿಂದ ಹಾವು ತಿಂದಿರುವ ಆಹಾರವೂ ದೇಹದಲ್ಲಿ ಜೀರ್ಣವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಬಾರಿಯೂ ಬಿಸಿಲನ್ನೇ ಹುಡುಕುತ್ತಿರುತ್ತದೆ. ನಾಗರ, ಕೆರೆ ಹಾವು ಬೆಳಗ್ಗಿನ ವೇಳೆ ಕಾಣಸಿಗುತ್ತವೆ. ಮಂಡಲ, ಇನ್ನಿತರ ಕೆಲ ಹಾವುಗಳು ರಾತ್ರಿ ವೇಳೆ ಕಂಡುಬರುತ್ತವೆ ಎಂದು ಮಾಹಿತಿ ನೀಡುತ್ತಾರೆ.

ಶೂ ರ್ಯಾಕರ್‌ನಲ್ಲಿ ಅವಿತಿದ್ದ ಹಾವು: ಬಾಣಸವಾಡಿ ಬಳಿಯ ಕಲ್ಯಾಣ ನಗರದಲ್ಲಿ ದೇವಸ್ಥಾನವೊಂದರಲ್ಲಿ ಶೂ ರ್ಯಾಕರ್‌ನಲ್ಲಿ ಹಾವು ಅವಿತುಕೊಂಡಿತ್ತು. ಕಳೆದ ಶುಕ್ರವಾರ ಇದೇ ಪ್ರದೇಶದ ಮನೆಯೊಂದರ ನೀರಿನ ಟ್ಯಾಂಕ್‌ನಲ್ಲಿ ಆಹಾರ ಅರಸಿ ಬಂದಿದ್ದ ಎರಡು ಹಾವುಗಳು ಬಿದ್ದಿದ್ದವು. ಜತೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಕೂಡ ಇತ್ತೀಗಷ್ಟೇ ದ್ವಿಚಕ್ರ ವಾಹನದ ಚಕ್ರದಲ್ಲಿ ಸಿಲುಕಿಕೊಂಡ ಹಾವು ಒದ್ದಾಡುತ್ತಿತ್ತು. ಅದನ್ನು ರಕ್ಷಣೆ ಮಾಡಲಾಗಿದೆ ಎಂದು ಬಿಬಿಎಂಪಿ ಉರಗ ರಕ್ಷಕರು ಹೇಳುತ್ತಾರೆ.

Advertisement

ರಿಚ್ಮಂಡ್‌ ರಸ್ತೆಯ ಫ್ಲೈಓವರ್‌ ಸಮೀಪದ ನಿವಾಸವೊಂದರಲ್ಲಿ ಕಾರ್‌ ಒಳಗಿನ ಸೀಟ್‌ನಲ್ಲಿ ನಾಗರ ಹಾವು ಅವಿತುಕೊಂಡಿತ್ತು. ನಾಗರಭಾವಿ, ಬಾಣಸವಾಡಿಯ ಎಚ್‌ಬಿಆರ್‌ ಲೇಔಟ್‌ ಮನೆಗಳ ಹೂಕುಂಡಗಳಲ್ಲಿ ಹಾವು ಬೆಚ್ಚನೆ ಅವಿತಿದ್ದವು. ಅವುಗಳನ್ನು ಕೂಡ ರಕ್ಷಣೆ ಮಾಡಲಾಗಿದೆ. ತ್ಯಾಜ್ಯದಿಂದ ಕೂಡಿದ ಖಾಲಿ ನಿವೇಶನಗಳು ಈ ಸರೀಸೃಪಗಳ ಸಂತಾನೋತ್ಪತ್ತಿ ತಾಣಗಳಾಗುವ ಮೂಲಕ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ತಿಳಿಸುತ್ತಾರೆ.

ಮನೆ ಅಕ್ಕ-ಪಕ್ಕ ಕಸ ಇಲ್ಲದಂತೆ ನೋಡಿಕೊಳ್ಳಿ ಅಸಮರ್ಪಕ ಕಸ ವಿಲೇವಾರಿ ಪ್ರದೇಶಗಳಲ್ಲಿ ಹಾವುಗಳು ವಾಸವಾಗಲಿವೆ, ಏಕೆಂದರೆ ಕಸವು ಇಲಿಗಳನ್ನು ಸೆಳೆಯುತ್ತದೆ. ತರುವಾಯ ಇಲಿಗಳ ಭೇಟೆಗಾಗಿ ಹಾವು ಪ್ರವೇಶ ಮಾಡಲಿವೆ. ತ್ಯಾಜ್ಯದಿಂದ ಕೂಡಿದ ಖಾಲಿ ನಿವೇಶನಗಳು ಈ ಸರೀಸೃಪಗಳ ಸಂತಾನೋತ್ಪತ್ತಿ ತಾಣಗಳಾಗುವ ಮೂಲಕ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಮೊಟ್ಟೆಗಳು ಹೊರಬಂದಂತೆ, ಮರಿ ಹಾವುಗಳು ತಮ್ಮ ಸ್ವತಂತ್ರ ಜೀವನ ಪ್ರಾರಂಭಿಸು ತ್ತವೆ, ಆಗಾಗ್ಗೆ ಆಶ್ರಯ, ಆಹಾರ ಹುಡುಕುತ್ತವೆ. ಪ್ರವಾಹ, ಭಾರೀ ಮಳೆಯಲ್ಲಿ ಹಾವಿನ ಮರಿಗಳು ತೇಲಿಬರುವ ಸಾಧ್ಯತೆಯಿರುತ್ತದೆ ಎಂದು ಪಾಲಿಕೆ ಅರಣ್ಯ ವಿಭಾಗದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಹಾವುಗಳ ಬಗ್ಗೆ ಪಾಲಿಕೆಗೆ ನಿತ್ಯ ಹತ್ತಾರು ಕರೆಗಳು ಬರುತ್ತಿವೆ. ಮನೆಗಳು, ಉದ್ಯಾನಗಳು ಮತ್ತು ಹೊರಗೆ ಇಟ್ಟಿರುವ ಶೂಗಳನ್ನು ಹಾಕು ವಾಗ ಎಚ್ಚರಿಕೆಯಿಂದ ಇರಬೇಕಾಗಿದೆ. ಒಂದು ವೇಳೆ ಹಾವು ಎದುರಾದರೆ ಶಾಂತ ವಾಗಿ ಹಿಂದೆ ಸರಿಯಿರಿ. ತಕ್ಷಣ ಬಿಬಿಎಂಪಿ ನಿಯಂತ್ರಣ ಕೊಠಡಿ ಅಥವಾ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಪಾಲಿಕೆಯ ಅರಣ್ಯ ವಿಭಾಗದ ಅಧಿಕಾರಿಗಳು ಮನವಿ ಮಾಡಿದ್ದಾರೆ. ಗೋಡೆಗಳು, ಬಾಗಿಲುಗಳು ಮತ್ತು ಕಿಟಕಿ ರಂಧ್ರ ಗಳು, ಬಿರುಕುಗಳನ್ನು ಪರೀಕ್ಷಿಸಿ ಸಂಪೂರ್ಣ ಸೀಲ್‌ ಮಾಡಿ ಎಂದು ಮನವಿ ಮಾಡಿದ್ದಾರೆ.

ಹಾವುಗಳು ತನ್ನ ದೇಹವನ್ನು ಬೆಚ್ಚಗಿಸಲು ಯಾವಾಗಲೂ ಪ್ರಯತ್ನಿಸು ತ್ತಲೇ ಇರುತ್ತವೆ. ಬಿಸಿಲಿಗಾಗಿ ಸದಾ ಎದುರು ನೋಡುತ್ತಲೇ ಇರುತ್ತದೆ. ಈಗ ಹಾವುಗಳ ಮೊಟ್ಟೆ ಒಡೆಯುವ ಕಾಲವಾಗಿದೆ. ಹೀಗಾಗಿ ಜನವಸತಿ ಪ್ರದೇಶಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಈಗಾಗಲೇ ಹಲವು ಹಾವುಗಳನ್ನು ರಕ್ಷಣೆ ಮಾಡಲಾಗಿದೆ. -ಮೋಹನ್‌, ಬಿಬಿಎಂಪಿ ಉರಗ ರಕ್ಷಕ.

Advertisement

Udayavani is now on Telegram. Click here to join our channel and stay updated with the latest news.

Next