Advertisement

17 ತಿಂಗಳಿನಿಂದ ನಡೆದಿತ್ತು ಹಾವು ಏಣಿ ಆಟ

11:39 AM Feb 08, 2019 | |

ಚಿತ್ರದುರ್ಗ: ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ನಡೆಯುತ್ತಿದ್ದ ಜಿಪಂ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಪದಚ್ಯುತಿ ಪ್ರಯತ್ನದಲ್ಲಿ ಅವರ ವಿರೋಧಿ ಬಣಕ್ಕೆ ಕೊನೆಗೂ ನಗು ಬೀರಿದೆ. ಈ ಮೂಲಕ ಹಾವು ಏಣಿ ಆಟಕ್ಕೆ ತೆರೆ ಬಿದ್ದಿದೆ.

Advertisement

ಜಿಪಂ ಉಪಾಧ್ಯಕ್ಷೆ ಸುಶೀಲಮ್ಮ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸೌಭಾಗ್ಯ ಬಸವರಾಜನ್‌ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದ ಪರವಾಗಿ 25 ಸದಸ್ಯರು ಕೈ ಎತ್ತುವ ಮೂಲಕ ಬೆಂಬಲಿಸಿದ್ದರಿಂದ ಅವಿಶ್ವಾಸ ನಿರ್ಣಯಕ್ಕೆ ಗೆಲುವು ದೊರೆಯಿತು.

ಬಿಜೆಪಿಯ ಎಂಟು, ಇಬ್ಬರು ಪಕ್ಷೇತರರು ಮತ್ತು ಕಾಂಗ್ರೆಸ್‌ ಪಕ್ಷದ ಏಳು ಸದಸ್ಯರು ಹಾಗೂ ಸೌಭಾಗ್ಯ ಬಸವರಾಜನ್‌ ಸೇರಿದಂತೆ ಒಟ್ಟು 18 ಜನ ಸದಸ್ಯರು ಅವಿಶ್ವಾಸ ನಿರ್ಣಯದ ವಿರುದ್ಧ ಇದ್ದರು. ಆದರೆ ಬುಧವಾರ ರಾತ್ರಿ ಕೆಲವರು ರಾಮನಗರ ರೆಸಾರ್ಟ್‌ಗೆ ನುಗ್ಗಿ ಅಲ್ಲಿದ್ದ ಪಕ್ಷೇತರ ಸದಸ್ಯೆಯನ್ನು ಅಪಹರಣ ಮಾಡಿ ಹೈಡ್ರಾಮಾ ಸೃಷ್ಟಿಸಿದ್ದರಿಂದ ಸೌಭಾಗ್ಯ ಪರ ಇದ್ದವರು ವಿಶೇಷ ಸಾಮಾನ್ಯ ಸಭೆಯಿಂದ ದೂರ ಉಳಿದರು. ಸೌಭಾಗ್ಯ ಹಾಗೂ ಬಿಜೆಪಿ ಸದಸ್ಯ ಅಜ್ಜಪ್ಪ ಅವರಿಬ್ಬರೇ ಆಗಮಿಸಿ ಸೋಲು ಸ್ವೀಕರಿಸಿದರು.

17 ತಿಂಗಳ ಹಿಂದಿನಿಂದಲೇ ಪದಚ್ಯುತಿಗೆ ಯತ್ನ: ವಿಧಾನಸಭಾ ಚುನಾವಣೆಗೂ ಮುನ್ನ ಜಿಪಂ ಅಧ್ಯಕ್ಷೆ ಪದಚ್ಯುತಿ ಪ್ರಕ್ರಿಯೆ ಆರಂಭಗೊಂಡಿತ್ತು. 17 ತಿಂಗಳ ನಂತರ ಅವಿಶ್ವಾಸ ತಂದು ಗೆಲುವು ಸಾಧಿಸುವಲ್ಲಿ ಕಾಂಗ್ರೆಸ್‌ ಪಕ್ಷ ಯಶಸ್ವಿಯಾಗಿದೆ. ಆದರೆ ಅವಿಶ್ವಾಸ ನಿರ್ಣಯ ಮಂಡಿಸಿ ಗೆಲ್ಲಲು ಸಾಕಷ್ಟು ಪ್ರಯಾಸ ಪಡಬೇಕಾಯಿತು.

ಕಳೆದ ಜ.25 ರಂದು ಅವಿಶ್ವಾಸ ನಿರ್ಣಯದ ಪರ ಇದ್ದ ಸದಸ್ಯರು ಗೋವಾಕ್ಕೆ ಪ್ರವಾಸ ತೆರಳಿದ್ದರು. ಬಿಜೆಪಿಯ ಒಟ್ಟು ಹತ್ತು ಸದಸ್ಯರಲ್ಲಿ ಜಿ.ಆರ್‌. ಹಳ್ಳಿ ಕ್ಷೇತ್ರದ ಕೆ.ಟಿ. ಗುರುಮೂರ್ತಿ ಹಾಗೂ ಚಳ್ಳಕೆರೆ ತಾಲೂಕಿನ ದೊಡ್ಡಉಳ್ಳಾರ್ತಿ ಕ್ಷೇತ್ರದ ಎಚ್.ಆರ್‌. ಗೌರಮ್ಮ ಅವರು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಅವರಿಗೆ ಆಪ್ತರು. ಆದರೆ ಅವಿಶ್ವಾಸದ ಪರವಾಗಿ ಕೈ ಎತ್ತಿದ್ದಾರೆ. ಜೆಡಿಎಸ್‌ನ ಇಬ್ಬರು ಸದಸ್ಯರು ಕೂಡ ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿದರು.

Advertisement

ಕೈ ಕೊಟ್ಟ ಜೆಡಿಎಸ್‌ ಸದಸ್ಯರು: ಜೆಡಿಎಸ್‌ನ ಇಬ್ಬರು ಸದಸ್ಯರು, ಸೌಭಾಗ್ಯ ಬಸವರಾಜನ್‌ ನಮ್ಮ ಮುಂದೆ 11 ಸದಸ್ಯರನ್ನು ಪರೇಡ್‌ ಮಾಡಿಸಿದರೆ ನಾವು ಅವರ ಪರವಾಗಿ ನಿಲ್ಲುವುದಾಗಿ ಹೇಳಿದ್ದರು. ಈ ಮಾತನ್ನು ನಂಬಿದ ಸೌಭಾಗ್ಯ 11 ಸದಸ್ಯರನ್ನು ಪರೇಡ್‌ ಮಾಡಿಸಿದರೂ ಕೊನೆ ಕ್ಷಣದಲ್ಲಿ ಜೆಡಿಎಸ್‌ ಸದಸ್ಯರು ಕೈ ಕೊಟ್ಟಿದ್ದಾರೆ. ಈ ಮೂಲಕ ಜೆಡಿಎಸ್‌ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರ ಸೂಚನೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎನ್ನಲಾಗಿದೆ. ಸೌಭಾಗ್ಯ ಬಸವರಾಜನ್‌, ಜೆಡಿಎಸ್‌ ಸದಸ್ಯರಾದ ಮುತ್ತುರಾಜ್‌, ತ್ರಿವೇಣಿ ಒಂದೇ ಸಮುದಾಯಕ್ಕೆ ಸೇರಿದ್ದರಿಂದ ಸೌಭಾಗ್ಯ ಪರ ನಿಲ್ಲಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಹರಿಯಬ್ಬೆ ಹೆಂಜಾರಪ್ಪ

Advertisement

Udayavani is now on Telegram. Click here to join our channel and stay updated with the latest news.

Next