ತಿರುವನಂತಪುರಂ: ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ದೇವಸ್ಥಾನದ ಸುತ್ತಮುತ್ತ ವಿಷಪೂರಿತ ಹಾವುಗಳು ಭಕ್ತರನ್ನು ಭಯಭೀತಗೊಳಿಸುತ್ತಿವೆ. ಗುರುವಾರ ಬೆಳಗ್ಗೆ ಸ್ವಾಮಿ ದರ್ಶನಕ್ಕೆ ಬಂದಿದ್ದ ಆರು ವರ್ಷದ ಬಾಲಕಿಗೆ ಹಾವೊಂದು ಕಚ್ಚಿದ್ದು ತಕ್ಷಣ ಎಚ್ಚೆತ್ತ ಅಧಿಕಾರಿಗಳು ಮಗುವನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆಲ ದಿನಗಳಿಂದ ಶಬರಿಮಲೆ ಸುತ್ತ ಮಳೆಯಾಗುತ್ತಿದ್ದು ಇದರ ನಡುವೆ ಹಾವುಗಳು ರಸ್ತೆಗಳಲ್ಲಿ ಕಂಡುಬರುತ್ತಿವೆ ಅದರಂತೆ ಗುರುವಾರ ಕೇರಳ ರಾಜ್ಯದ ತಿರುವನಂತಪುರಂ ಜಿಲ್ಲೆಯ ಆರು ವರ್ಷದ ಬಾಲಕಿ ನಿರಂಜನ ತನ್ನ ಕುಟುಂಬ ಸದಸ್ಯರೊಂದಿಗೆ ಅಯ್ಯಪ್ಪ ದೇವರ ದರ್ಶನಕ್ಕೆ ಶಬರಿಮಲೆಗೆ ತೆರಳಿದ್ದಳು. ಬೆಳಗಿನ ಜಾವ 4 ಗಂಟೆಗೆ ಅಯ್ಯಪ್ಪನ ರಸ್ತೆಯ ಮುಂಭಾಗದಲ್ಲಿ ಹಾವೊಂದು ಬಾಲಕಿಗೆ ಕಚ್ಚಿದೆ. ತಕ್ಷಣ ಸ್ಪಂದಿಸಿದ ದೇವಸ್ಥಾನದ ಅಧಿಕಾರಿಗಳು ಬಾಲಕಿಯನ್ನು ಪಂಬಾ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಮಗುವಿಗೆ ತುರ್ತು ಚಿಕಿತ್ಸೆ ನೀಡಲಾಯಿತು. ನಂತರ ಉತ್ತಮ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಯಿತು. ಮಗುವಿನ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯಿಂದ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಕಾಡುಪ್ರಾಣಿಗಳ ದಾಳಿ ತಡೆಯಲು ಕ್ರಮಕೈ ಮುಂದಾಗಿದ್ದಾರೆ. ಅಲ್ಲದೆ ದೇವಸ್ಥಾನದ ಆವರಣದಲ್ಲಿ ಹೆಚ್ಚಿನ ಹಾವು ಹಿಡಿಯುವವರನ್ನು ನೇಮಿಸಲು ನಿರ್ಧರಿಸಿದ್ದಾರೆ. ಪ್ರಸ್ತುತ ಇಲಾಖೆಯಲ್ಲಿ ಇಬ್ಬರು ಹಾವು ಹಿಡಿಯುವವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಘಟನೆಯ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಇನ್ನಿಬ್ಬರು ಹಾವು ಹಿಡಿಯುವವರನ್ನು ನೇಮಿಸಲು ಅಧಿಕಾರಿಗಳು ಆದೇಶಿಸಿದ್ದಾರೆ.
ಮತ್ತೊಂದೆಡೆ ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಪ್ರಸ್ತುತ ಕೇರಳ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಜಾಗರೂಕರಾಗಿರಲು ಸೂಚಿಸಲಾಗಿದೆ. ಭೂಕುಸಿತದ ಅಪಾಯವಿರುವುದರಿಂದ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: Bengaluru ; ಕಾನ್ಮನ್ ಸುಕೇಶ್ ಚಂದ್ರಶೇಖರ್ ಐಷಾರಾಮಿ ವಾಹನಗಳ ಹರಾಜು