Advertisement

ಗಂಗೊಳ್ಳಿ ಅಳಿವೆಯಲ್ಲಿ ಹೂಳು: ನಿರಂತರ ದೋಣಿ ದುರಂತ

08:20 AM Sep 04, 2017 | Team Udayavani |

ಕುಂದಾಪುರ :ಗಂಗೊಳ್ಳಿ ಅಳಿವೆ ಮೀನುಗಾರರಿಗೆ ಹಲವಾರು ವರ್ಷಗಳಿಮದ ದುಃಸ್ವಪ್ನವಾಗಿ ಕಾಡುತ್ತಿದೆ. ಇಲ್ಲಿ ಶೇಖರಣೆಯಾಗುತ್ತಿರುವ ಹೂಳು ನಿರಂತರ ದೋಣಿ ದುರಂತಗಳಿಗೆ ಕಾರಣವಾಗುತ್ತಾ  ಅಳಿವೆಯಲ್ಲಿ  ಪದೇ ಪದೇ ಅವಘಡಗಳು ಸಂಭವಿಸುತ್ತಿದ್ದು, ಮೀನುಗಾರರು ಆತಂಕಗೊಂಡಿದ್ದಾರೆ.

Advertisement

ಮರಳು ದಿಣ್ಣೆಗಳಿಗೆ ಢಿಕ್ಕಿ
ಗಂಗೊಳ್ಳಿ ಮೀನುಗಾರಿಕೆ ಬಂದರಿನಿಂದ ಮೀನುಗಾರಿಕೆಗೆ ತೆರಳುವುದು ಮತ್ತು ಮರಳಿ ಬಂದರು ತಲುಪುವುದು ದುಸ್ತರವೆನಿಸಿದೆ. ಬ್ರೇಕ್‌ ವಾಟರ್‌ ಕಾಮಗಾರಿ ಅಳಿವೆಯಲ್ಲಿ ನಡೆಯುತ್ತಿರುವುದರಿಂದ ಅಳಿವೆ ಬಾಗಿಲು ಕಿರಿದಾಗಿದ್ದು ವ್ಯಾಪಕ ಹೂಳು ತುಂಬಿಕೊಂಡಿದೆ. ಅಲೆಗಳ ಹೊಡೆತಕ್ಕೆ ದೋಣಿ ದಿಕ್ಕು ತಪ್ಪಿ ಅಳಿವೆಯಲ್ಲಿನ ಮರಳು ದಿಣ್ಣೆಗಳಿಗೆ ಢಿಕ್ಕಿ ಹೊಡೆದು ಅನಾಹುತ ಸಂಭವಿಸುತ್ತಿದೆ.

ನಿರಂತರ ಅವಘಡಗಳು 
ಆ. 31ರಂದು  ಬೆಳಗ್ಗೆ  ಮೀನುಗಾರಿಕೆಗಾಗಿ ಗಂಗೊಳ್ಳಿ ಬಂದರಿನಿಂದ ತೆರಳುತ್ತಿದ್ದ  ನಾಡದೋಣಿಯೊಂದು ಗಂಗೊಳ್ಳಿ ಅಳಿವೆಯಲ್ಲಿ ದುರಂತಕ್ಕೀಡಾಗಿತ್ತು.  ಆ ಸಮಯದಲ್ಲಿ  ದೋಣಿಯಲ್ಲಿದ್ದ  ನಾಲ್ವರನ್ನು  ಸ್ಥಳೀಯ ಮೀನುಗಾರರು ರಕ್ಷಿಸಿದ್ದರು. ಅದೇ ರೀತಿ  ಸೆ. 2ರಂದು (ನಿನ್ನೆ)  ಸಂಜೆ  ಮೀನುಗಾರಿಕೆ ಮುಗಿಸಿ ಬಂದರಿಗೆ ಆಗಮಿಸಿದ್ದ ಟ್ರಾಲ್‌ಬೋಟೊಂದು ಮರಳ ದಿಬ್ಬಕ್ಕೆ ತಗಲಿ  ಅನಾಹುತ ಸಂಭವಿಸಿತ್ತು. 

ಅಪಾರ ಹಾನಿ
ಕಳೆದ ವರ್ಷ ಇದೇ ಸಮಯದಲ್ಲಿ  ಸಂಜೆ ಮೀನುಗಾರಿಕೆ ಮುಗಿಸಿ ಬಂದರಿಗೆ ಬಂದಿದ್ದ ಯಾಂತ್ರೀಕೃತ ದೋಣಿಯೊಂದು ಅಲೆಗಳ ಹೊಡೆತಕ್ಕೆ ಸಿಲುಕಿ ಮರಳದಿಣ್ಣೆಗೆ ಬಡಿದು ಆನಾಹುತ ಸಂಭವಿಸಿತ್ತು ಸ್ಥಳೀಯ ಮೀನುಗಾರ ನೆರವಿನಿಂದ ಏಳು ಮಂದಿಯನ್ನು ರಕ್ಷಿಸಲಾಗಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ  ಮಲ್ಪೆ ಬಂದರಿನಲ್ಲಿ ಮೀನು ಖಾಲಿ ಮಾಡಿ ಗಂಗೊಳ್ಳಿ ಬಂದರಿನತ್ತ  ಬರುತ್ತಿದ್ದ  ಆಳ ಸಮುದ್ರ ಬೋಟ್‌  ಅಳಿವೆ ಪ್ರದೇಶದ ಹೂಳೆಗೆ ಢಿಕ್ಕಿ ಹೊಡೆದ ಪರಿಣಾಮ ಬೋಟಿನ ಸ್ಟೇರಿಂಗ್‌  ತುಂಡಾಗಿ ಗಾಳಿಯ ಹೊಡೆತಕ್ಕೆ  ಸಿಲುಕಿ , ಮಗುಚಿ ತೇಲುತ್ತಾ ಬಂದು ಕೋಡಿಯ ಸಮುದ್ರ ಕಿನಾರೆಯ ದಡಕ್ಕೆ ಅಪ್ಪಳಿಸಿದೆ.  ಬೋಟಿನಲ್ಲಿದ್ದ ಮೀನುಗಾರರು  ಈಜಿ ಪಾರಾಗಿದ್ದಾರೆ ಆದರೆ  ಬೋಟಿಗೆ ಅಪಾರ ಹಾನಿ ಉಂಟಾಗಿದೆ.

ಹೂಳೆತ್ತಲು ಮೀನ ಮೇಷ
1972ರಲ್ಲಿ ಮ್ಯಾಂಗನೀಸ್‌ ಸಾಗಾಟದ ದೃಷ್ಟಿಯಿಂದ ಈ ಭಾಗದಲ್ಲಿ ಹೂಳೆತ್ತಿರುವುದು ಬಿಟ್ಟರೆ  ಇಲ್ಲಿಯ ತನಕ ಹೂಳೆತ್ತಿದ ದಾಖಲೆಗಳಿಲ್ಲ.  ಹಲವು ವರ್ಷಗಳಿಂದ ಇಲ್ಲಿ ಹೂಳು ಸೇರಿಕೊಂಡು ಕಡಲ ಅಲೆಗಳಲ್ಲಿ  ಏರುಪೇರನ್ನು ಕಂಡುಕೊಂಡಿದ್ದೇವೆ.  ನಿರಂತರ ಅವಘಡಗಳು ಇಲ್ಲಿ ನಡೆಯುತ್ತಲೇ ಇವೆ. 1985ರಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ  ಐದು ಮಂದಿ , 1990ರಲ್ಲಿ ಒಂದೇ ಸಲ 11 ಮಂದಿ ಹೀಗೆ ಈ ಅಳಿವೆಯಲ್ಲಿ  ಸಂಭವಿಸಿದ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.  ಗಂಗೊಳ್ಳಿ ಅಳಿವೆ ಸಮಸ್ಯೆಯಿಂದ ಅನೇಕರು ಸಾವನ್ನಪ್ಪಿದ ಹಾಗೂ ಪ್ರತಿವರ್ಷವೆಂಬಂತೆ ಅಳಿವೆಯಲ್ಲಿ ಬೋಟುಗಳು, ದೋಣಿಗಳು ದುರಂತಕ್ಕೀಡಾಗುತ್ತಿದ್ದರೂ ಸರಕಾರ ಮಾತ್ರ ಈ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ ಎಂದು ಮೀನುಗಾರರು ಆರೋಪಿಸಿದ್ದಾರೆ. ರಾಜ್ಯ ಸರಕಾರ ತತ್‌ಕ್ಷಣ ಗಂಗೊಳ್ಳಿ ಅಳಿವೆ ಪ್ರದೇಶದ ಹೂಳೆತ್ತಿ, ಮೀನುಗಾರರ ಜೀವನಕ್ಕೆ ಭದ್ರತೆ ಕಲ್ಪಿಸಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.

Advertisement

ಕಾಮಗಾರಿಯ ವಿಳಂಬ
ಅಳಿವೆ ಭಾಗದಲ್ಲಿ ನಡೆಯುತ್ತಿರುವ ಬ್ರೇಕ್‌ ವಾಟರ್‌ ಕಾಮಗಾರಿಯು ವೇಗವನ್ನು ಕಳೆದುಕೊಂಡಿದ್ದು ಈ ಕಾಮಗಾರಿಗಾಗಿ ಕೋಡಿ ಭಾಗದಲ್ಲಿ ಹೂಳೆತ್ತಿದ್ದ ಮರಳನ್ನು ಅಲ್ಲಿಯೇ ಶೇಖರಣೆ ಮಾಡಿರುವುದರಿಂದ ಅದೇ ಮರಳು ಮತ್ತೆ ಸೇರಿಕೊಂಡು ಅಳವೆಯನ್ನು ಕಿರುದಾಗಿಸಿಕೊಳ್ಳುತ್ತಿದೆ ಮತ್ತು ಮರಳ ದಿಬ್ಬಗಳನ್ನು ಸೃಷ್ಟಿಸುತ್ತಿದೆ ಎನ್ನುವುದು ಸ್ಥಳೀಯ ಮೀನುಗಾರರ ಆರೋಪ.

ಗಂಗೊಳ್ಳಿ ಅಳಿವೆಯಲ್ಲಿ ಹೂಳೆತ್ತದೇ ಇರುವುದರಿಂದ ಪದೇ ಪದೇ ದೋಣಿ ದುರಂತಗಳು ನಡೆಯುತ್ತಲೇ ಇದೆ. ಅಳಿವೆಯಲ್ಲಿ  ನಾಡದೋಣಿ, ಯಾಂತ್ರೀಕೃತದೋಣಿಗಳು ಸಂಚರಿಸುವುದು ಕಷ್ಟಕರವಾಗಿದೆ. ಮೀನುಗಾರರು ಆತಂಕ ಸ್ಥಿತಿಯಲ್ಲಿ  ಬಂದರಿಗೆ ಬರಬೇಕಾದ ಸ್ಥಿತಿ ಎದುರಾಗಿದೆ. ಸರಕಾರ ಕೂಡಲೇ ಅಳಿವೆಯಲ್ಲಿ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಬೇಕು. ಇಲ್ಲವಾದರೆ ಮೀನುಗಾರರು ಪ್ರತಿದಿನವೂ ಆತಂಕವನ್ನು ಎದುರಿಸಬೇಕಾದೀತು. ಬ್ರೇಕ್‌ ವಾಟರ್‌ ಕಾಮಗಾರಿಯನ್ನು ತ್ವತ್ವಿತಗೊಳಿಸಬೇಕು ಮತ್ತು ಈ ಕಾಮಗಾರಿ ಮುಗಿಯುವ ತನಕ ಗಂಗೊಳ್ಳಿ ಬಂದರಿನ ಮೀನುಗಾರರಿಗೆ ಮಲ್ಪೆಯಲ್ಲಿ ಅವಕಾಶ  ನೀಡಬೇಕು
– ಮಂಜು ಬಿಲ್ಲವ, 
ಅಧ್ಯಕ್ಷ ಗಂಗೊಳ್ಳಿ ನಾಡದೋಣಿ ಮೀನುಗಾರರ ಸಂಘ

– ಉದಯ ಆಚಾರ್‌ ಸಾಸ್ತಾನ

Advertisement

Udayavani is now on Telegram. Click here to join our channel and stay updated with the latest news.

Next