Advertisement

ಮಂಧನಾ, ಕೌರ್‌, ಕಾಪ್‌, ವೋಲ್ವಾರ್ಟ್‌ ಶತಕ: ವನಿತೆಯರಿಗೆ ಏಕದಿನ ಸರಣಿ

11:45 PM Jun 19, 2024 | Team Udayavani |

ಬೆಂಗಳೂರು: ಬೃಹತ್‌ ಮೊತ್ತದ ಅಮೋಘ ಹೋರಾಟವೊಂದರಲ್ಲಿ ಭಾರತದ ವನಿತೆಯರು ದಕ್ಷಿಣ ಆಫ್ರಿಕಾವನ್ನು ನಾಲ್ಕೇ ನಾಲ್ಕು ರನ್ನಿನಿಂದ ಮಣಿಸಿ ಏಕದಿನ ಸರಣಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Advertisement

ಬುಧವಾರದ ಬೆಂಗಳೂರು ಮುಖಾಮುಖೀಯಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 3 ವಿಕೆಟಿಗೆ 325 ರನ್‌ ರಾಶಿ ಹಾಕಿದರೆ, ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಬಂದ ದಕ್ಷಿಣ ಆಫ್ರಿಕಾ 6 ವಿಕೆಟಿಗೆ 321 ರನ್‌ ಮಾಡಿ ಶರಣಾ ಯಿತು. ಮೊದಲ ಪಂದ್ಯವನ್ನು ಭಾರತ 143 ರನ್ನುಗಳಿಂದ ಜಯಿಸಿತ್ತು. ಅಂತಿಮ ಪಂದ್ಯ ರವಿವಾರ ನಡೆಯಲಿದೆ.

ನಾಯಕಿ, ಉಪನಾಯಕಿಯರ ಶತಕ
ಮೊದಲ ಪಂದ್ಯದಲ್ಲಿ 117 ರನ್‌ ಬಾರಿಸಿದ ಸ್ಮತಿ ಮಂಧನಾ, ಬುಧವಾರ ಇದೇ ಆಟದ ಮುಂದುವರಿದ ಭಾಗ ವೆಂಬಂತೆ ಬ್ಯಾಟ್‌ ಬೀಸಿ ಜೀವನಶ್ರೇಷ್ಠ 136 ರನ್‌ ಹೊಡೆದರು. ಮಂಧನಾ ಸತತ 2 ಏಕದಿನ ಪಂದ್ಯ ಗಳಲ್ಲಿ ಸೆಂಚುರಿ ಹೊಡೆದ ಭಾರತದ ಮೊದಲ ಆಟಗಾರ್ತಿ. ರನ್‌ ಬರಗಾಲದಲ್ಲಿದ್ದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಕೊನೆಯ ಓವರ್‌ನಲ್ಲಿ ಅಬ್ಬರಿಸಿ ಶತಕ ಪೂರ್ತಿ ಗೊಳಿಸು ವಲ್ಲಿ ಯಶಸ್ವಿಯಾದರು.

ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 136 ಎಸೆತಗಳಿಂದ 171 ರನ್‌ ಹರಿದು ಬಂತು.

ಬಹಳ ವಿಳಂಬವಾಗಿ, 18ನೇ ಎಸೆತದಲ್ಲಿ ರನ್‌ ಖಾತೆ ತೆರೆದ ಮಂಧನಾ 120 ಎಸೆತ ಎದುರಿಸಿ 136 ರನ್‌ ಬಾರಿಸಿದರು. ಇದು 18 ಬೌಂಡರಿ, 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ದಕ್ಷಿಣ ಆಫ್ರಿಕಾ ವಿರುದ್ಧವೇ 2018ರ ಕಿಂಬರ್ಲಿ ಪಂದ್ಯದಲ್ಲಿ 135 ರನ್‌ ಹೊಡೆದದ್ದು ಮಂಧನಾ ಅವರ ಈವರೆಗಿನ ಸರ್ವಾಧಿಕ ಗಳಿಕೆ ಆಗಿತ್ತು. ಇದು ಮಂಧನಾ ಅವರ 7ನೇ ಶತಕ. ಮಿಥಾಲಿ ರಾಜ್‌ ಕೂಡ 7 ಶತಕ ಹೊಡೆದಿದ್ದು, ಜಂಟಿ ಅಗ್ರಸ್ಥಾನ ಅಲಂಕರಿಸಿದ್ದಾರೆ.

Advertisement

ಕೌರ್‌ 6ನೇ ಶತಕದ ಮೂಲಕ ಮಿಂಚಿದರು. ನಾಯಕಿಯ ಕೊಡುಗೆ 88 ಎಸೆತಗಳಿಂದ ಅಜೇಯ 103 ರನ್‌ (9 ಬೌಂಡರಿ, 3 ಸಿಕ್ಸರ್‌). ಅಂತಿಮ ಓವರ್‌ನಲ್ಲಿ ಕೌರ್‌ ಸೆಂಚುರಿಗೆ 12 ರನ್‌ ಅಗತ್ಯವಿತ್ತು. ಮಲಾಬಾ ಅವರ ಸತತ 3 ಎಸೆತಗಳಲ್ಲಿ 4, 6, 4 ರನ್‌ ಮಾಡಿ ಶತಕ ಸಂಭ್ರಮ ಆಚರಿಸಿದರು.

ತವರಲ್ಲಿ ಗರಿಷ್ಠ ಸ್ಕೋರ್‌
ಭಾರತ ತವರಿನಂಗಳದಲ್ಲಿ ಮೊದಲ ಸಲ 300 ರನ್‌ ಗಡಿ ದಾಟಿತು. ವೆಸ್ಟ್‌ ಇಂಡೀಸ್‌ ಎದುರಿನ 2018ರ ಧನ್‌ಬಾದ್‌ ಪಂದ್ಯದಲ್ಲಿ 2ಕ್ಕೆ 298 ರನ್‌ ಹೊಡೆದದ್ದು ಈವರೆಗಿನ ಗರಿಷ್ಠ ಮೊತ್ತವಾಗಿತ್ತು.

ಇದು ಏಕದಿನದಲ್ಲಿ ಭಾರತದ 3ನೇ ಗರಿಷ್ಠ ಗಳಿಕೆ. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ ಪೊಚೆಫ್ಸೂಮ್‌ನಲ್ಲಿ 2ಕ್ಕೆ 358 ರನ್‌, 2022ರಲ್ಲಿ ಇಂಗ್ಲೆಂಡ್‌ ಎದುರು ಕ್ಯಾಂಟರ್‌ಬರಿಯಲ್ಲಿ 5ಕ್ಕೆ 333 ರನ್‌ ಹೊಡೆದಿತ್ತು. ಈ ಇನ್ನಿಂಗ್ಸ್‌ನಲ್ಲಿ ಗರಿಷ್ಠ 8 ಸಿಕ್ಸರ್‌ ಬಾರಿಸಿದ್ದು ಭಾರತದ ದಾಖಲೆ ಎನಿಸಿತು.

184 ರನ್‌ ಜತೆಯಾಟ
ನಾಯಕಿ ಲಾರಾ ವೋಲ್ವಾರ್ಟ್‌ ಮತ್ತು ಮರಿಜಾನ್‌ ಕಾಪ್‌ 184 ರನ್‌ ಜತೆಯಾಟದ ಮೂಲಕ ಭಾರತಕ್ಕೆ ಸಡ್ಡು ಹೊಡೆ ದರು. ಆದರೆ ಕೊನೆಯ ಹಂತದಲ್ಲಿ ವಿಕೆಟ್‌ ಕಳೆದು ಕೊಂಡ ಪರಿಣಾಮ ದಕ್ಷಿಣ ಆಫ್ರಿಕಾ ಗೆಲುವಿನ ಗಡಿಯಲ್ಲಿ ಮುಗ್ಗರಿಸಿತು. ವೋಲ್ವಾರ್ಟ್‌ ಎಸೆತಕ್ಕೊಂದರಂತೆ ಅಜೇಯ 135 (12 ಬೌಂಡರಿ, 3 ಸಿಕ್ಸರ್‌), ಕಾಪ್‌ 94 ಎಸೆತಗಳಿಂದ 114 ರನ್‌ ಬಾರಿಸಿದರು (11 ಬೌಂಡರಿ, 3 ಸಿಕ್ಸರ್‌).

Advertisement

Udayavani is now on Telegram. Click here to join our channel and stay updated with the latest news.

Next