ಮಹಾನಗರ: ಹಲವು ಯೋಜನೆಗಳನ್ನು ಮಂಗಳೂರಿಗೆ ಪರಿಚಯಿಸುವುದರ ಮೂಲಕ ಆಧುನಿಕ ಮಂಗಳೂರಿನ ನಿರ್ಮಾಣದಲ್ಲಿ ಮಹತ್ತರ ಕಾರ್ಯ ನೆರವೇರಿಸಿದ ಯು. ಶ್ರೀನಿವಾಸ ಮಲ್ಯರ ಪ್ರತಿಮೆಯನ್ನು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೀಘ್ರವೇ ಅನಾವರಣಗೊಳಿಸಲಾಗುವುದು ಎಂದು ಮೇಯರ್ ಕವಿತಾ ಸನಿಲ್ ಅವರು ಹೇಳಿದರು.
ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಮಂಗಳವಾರ ಜರಗಿದ ದಿ| ಉಳ್ಳಾಲ ಶ್ರೀನಿವಾಸ ಮಲ್ಯ ಅವರ 52ನೇ ಸ್ಮತಿ ದಿವಸ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು.
ಮಂಗಳೂರು ವಿಮಾನ ನಿಲ್ದಾಣ, ನವ ಮಂಗಳೂರು ಬಂದರು, ಮಂಗಳೂರು ಆಕಾಶವಾಣಿ, ರಾಷ್ಟ್ರೀಯ ಹೆದ್ದಾರಿ 17, 42, ಸುರತ್ಕಲ್ ಎನ್‌ಐಟಿಕೆ ಸಹಿತ ಜಿಲ್ಲೆಯ ಅಭಿವೃದ್ಧಿಗೆ ಅನೇಕ ಪ್ರಮುಖ ಕೊಡುಗೆ ನೀಡಿರುವ ಶ್ರೀನಿವಾಸ ಮಲ್ಯ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸ ನಡೆಯಬೇಕು. ಅವರು ಅಂದು ನೀಡಿದ ಕೊಡುಗೆಯ ಫಲವನ್ನು ಇಂದು ನಾವು ಪಡೆಯುತ್ತಿದ್ದೇವೆ. ಅಂತಹ ಮಹಾನ್ ಕೊಡುಗೆ ನೀಡಿದ ನಮ್ಮ ನೆಲದ ಸಾಧಕರನ್ನು ಅನುದಿನವೂ ಸ್ಮರಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯವವಾಗಿದೆ. ಇದೇ ನೆಲೆಯಲ್ಲಿ ಮಹಾನಗರಪಾಲಿಕೆ ವತಿಯಿಂದ ಇತ್ತೀಚೆಗೆ ಶ್ರೀನಿವಾಸ ಮಲ್ಯ ಅವರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಅವರು ಹೇಳಿದರು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅವರು ಮಾತನಾಡಿ, ನಗರದ ಪಡೀಲ್‌ನ ಒಂದು ಜಂಕ್ಷನ್‌ಗೆ ಶ್ರೀನಿವಾಸ ಮಲ್ಯರ ಹೆಸರಿಡುವ ಆಗ್ರಹ ದೀರ್ಘ ಕಾಲದ್ದಾಗಿತ್ತು. ಈಗ ಅವರ ಪ್ರತಿಮೆ ನಿರ್ಮಾಣ ಕಾರ್ಯ ನಡೆದಿದ್ದು, ಅದಕ್ಕಾಗಿ ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಎನ್. ವಿನಯ ಹೆಗ್ಡೆ ಅವರು ಆರು ಲಕ್ಷ ರೂ. ಕೊಡುಗೆ ನೀಡಿದ್ದಾರೆ ಎಂದರು.
‘ದಿ| ಉಳ್ಳಾಲ ಶ್ರೀನಿವಾಸ ಮಲ್ಯ ಜೀವನ- ಸಾಧನೆ’ ಹೆಸರಿನಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 120 ಕಾಲೇಜುಗಳ ವಿದ್ಯಾ ರ್ಥಿಗಳಿಗಾಗಿ ಏರ್ಪಡಿಸಿದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮನಪಾ ಸದಸ್ಯೆ ಅಖಿಲಾ ಆಳ್ವ, ಮುಖಂಡರಾದ ಗಿಲ್ಬರ್ಟ್ ಡಿ’ ಸೋಜಾ, ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷ ವೆಂಕಟೇಶ ಎನ್.ಬಾಳಿಗ ಮುಂತಾದವರು ಉಪಸ್ಥಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಬೊಳಂತೂರು ಪ್ರಭಾಕರ ಪ್ರಭು ವಂದಿಸಿದರು. ಶಕುಂತಳಾ ಆರ್. ಕಿಣಿ ಕಾರ್ಯಕ್ರಮ ನಿರೂಪಿಸಿದರು.